ಮಹಿಳಾ ಹೋರಾಟಕ್ಕೆ ಜಯ; ಕಾರು ಚಾಲನೆಗೆ ಅನುಮತಿ ಕೊಟ್ಟ ಸೌದಿ
Team Udayavani, Sep 28, 2017, 6:20 AM IST
ರಿಯಾದ್: ಮಹಿಳೆಯರ ಮೇಲೆ ಹಲವಾರು ಕಠಿಣ ಧಾರ್ಮಿಕ ರಿವಾಜುಗಳನ್ನು ಹೇರುವ ಸೌದಿ ಅರೇಬಿಯ, ಈಗ ಕ್ರಾಂತಿಕಾರಿ ನಡೆಯೊಂದರಿಂದ ಸುದ್ದಿ ಮಾಡಿದೆ.
ಆ ನಡೆಯೇನೆಂದರೆ ಸೌದಿ ಆಡಳಿತ ಮಹಿಳೆಯರು ವಾಹನ ಚಾಲನೆ ಮಾಡಲು ಅನುಮೋದನೆ ನೀಡಿದೆ. ಈ ಕಾನೂನನ್ನು ಮಂಗಳವಾರ ಘೋಷಿಸಲಾಯಿತು, 2018ರ ಬೇಸಗೆಯಿಂದ ಜಾರಿ ಬರಲಿದೆ. ಈ ನಿರ್ಧಾರ ಸೌದಿಯ ಲ್ಲಿಯ ಮಹಿಳಾ ಸ್ವಾತಂತ್ರದ ಪರಿಧಿಯನ್ನು ಹಿಗ್ಗಿಸಿದೆ. ಇಲ್ಲಿಯ ಮಹಿಳೆಯರಿಗೆ ಇದೊಂದು ಅತ್ಯಂತ ಸಂತಸದ ವಿಷಯ ಎಂದರೂ ತಪ್ಪಲ್ಲ. ಮಹಿಳೆಯರು ವಾಹನ ಚಲಾಯಿಸುವುದನ್ನು ನಿಷೇಧಿಸಿದ್ದ ಏಕೈಕ ರಾಷ್ಟ್ರ ಎಂಬ ಕುಖ್ಯಾತಿಗೂ ಸೌದಿ ಪಾತ್ರವಾಗಿತ್ತು. ತಾವು ವಾಹನ ಚಲಾಯಿಸುವ ಹಕ್ಕು ಪಡೆದುಕೊಳ್ಳಲು ಇಲ್ಲಿಯ ಮಹಿಳಾ ಪರ ಹೋರಾಟಗಾರ್ತಿಯರು 3 ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಇದಲ್ಲದೇ 2013ರಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ ಅವರು, ತಾವು ವಾಹನ ಚಲಾಯಿಸುತ್ತಿರುವ ಫೋಟೊ ಗಳನ್ನು ಆನ್ಲೈನ್ಗಳಲ್ಲಿ ಹರಿಬಿಟ್ಟಿದ್ದರು. ಜೊತೆಗೆ “ನಮ್ಮ ಕುಟುಂಬದಲ್ಲಿರುವ ಪುರುಷರಿಗೇ ನಾವು ವಾಹನ ಚಲಾಯಿಸಯವ ಬಗ್ಗೆ ತಕರಾರುಗಳಿಲ್ಲ, ನಿಮಗೇನು ಸಮಸ್ಯೆ’ ಎಂಬಂಥ ಪ್ರಶ್ನೆಗಳನ್ನು ಕೇಳಿದ್ದರು.
ಸೌದಿ ಆಡಳಿತ ಈ ಐತಿಹಾಸಿಕ ನಿರ್ಣಯ ತೆಗೆದುಕೊಂಡಿರುವ ಕುರಿತು ಸಂತಸ ವ್ಯಕ್ತಪಡಿಸಿರುವ ಮಹಿಳಾ ಹೋರಾಟಗಾರ್ತಿಯರು, ಈ ಗೆಲುವು ನಮ್ಮ ಹೋರಾಟದ ಮೊದಲ ಮೆಟ್ಟಿಲು. ಇಲ್ಲಿಗೇ ನಮ್ಮ ಹೋರಾಟ ಮುಗಿದಿಲ್ಲ. ಮಹಿಳೆಯರಿಂದ ವಂಚಿತವಾಗಿ ರುವ ಹಕ್ಕುಗಳು ಸಾಕಷ್ಟಿವೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಹೋರಾಡುತ್ತೇವೆ ಎಂದಿದ್ದಾರೆ. ಸೌದಿಯ ಈ ನಡೆಯನ್ನು ಅಮೆರಿಕವೂ ಶ್ವಾಘಿಸಿದೆ.