ಸಿಜೆಐ ಪೀಠದಲ್ಲಿ ಜಡ್ಜ್ ಲೋಯಾ ಕೇಸು ವಿಚಾರಣೆ
Team Udayavani, Jan 21, 2018, 11:47 AM IST
ಹೊಸದಿಲ್ಲಿ: ಸಿಬಿಐ ವಿಶೇಷ ಕೋರ್ಟ್ನ ಜಡ್ಜ್ ಬಿ.ಎಚ್.ಲೋಯಾ ಸಾವಿನ ಬಗೆಗಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಸೋಮವಾರ ನಡೆಸಲಿದೆ. ಈ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಇರಲಿದ್ದಾರೆ. ಸುಪ್ರೀಂಕೋರ್ಟ್ನ ಪ್ರಕರಣಗಳ ಪೂರಕ ಪಟ್ಟಿಯಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ ಅದರಲ್ಲಿ ಅರ್ಜಿ ಸಂಖ್ಯೆ 45 ಮತ್ತು 45.1 ಎಂದು ಉಲ್ಲೇಖೀಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಎರಡು ಅರ್ಜಿಗಳ ವಿಚಾರಣೆಗೆ ನೀಡುವ ಬಗ್ಗೆ ನಿರ್ಧರಿಸಲಾಗಿತ್ತು. ಅವುಗಳು ಭಾರತದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠದ ಎದುರು ವಿಚಾರಣೆಗಾಗಿ ಎಂದು ಅರಿಕೆ ಮಾಡಲಾಗಿತ್ತು.
ಜ.16ರಂದು ನ್ಯಾ| ಅರುಣ್ ಮಿಶ್ರಾ ಮತ್ತು ನ್ಯಾ| ಮೋಹನ್ ಎಂ.ಶಾಂತನಗೌಡರ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ, ಪ್ರಕರಣವನ್ನು ಮುಂದೂಡಿತ್ತು. ಆದರೆ ಯಾವುದೇ ದಿನಾಂಕವನ್ನು ನ್ಯಾಯಪೀಠ ನಮೂದಿಸಿರಲಿಲ್ಲ. ಜತೆಗೆ ಅದೇ ದಿನ ಸಂಜೆ ಉಲ್ಲೇಖೀತವಾದ ಆದೇಶದ ಪ್ರಕಾರ ಪ್ರಕರಣವನ್ನು ನಿಗದಿತ ನ್ಯಾಯಪೀಠಕ್ಕೇ ವಹಿಸ ಬೇಕು ಎಂದು ಸೂಚಿಸಲಾಗಿತ್ತು.