ಅಯೋಧ್ಯೆ ರೈಲು ನಿಲ್ದಾಣ ರಾಮಮಂದಿರದ ಪ್ರತಿರೂಪವಾಗಲಿ
Team Udayavani, Feb 22, 2018, 12:49 PM IST
ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆ ರೈಲು ನಿಲ್ದಾಣವನ್ನು ರಾಮಮಂದಿರದ ಪ್ರತಿರೂಪದಂತೆ ಮರು ನಿರ್ಮಾಣ ಮಾಡಬೇಕೆಂದು ಕೋರಿ ಕೇಂದ್ರ ಸಂಪುಟಕ್ಕೆ ರೈಲ್ವೆ ಸಚಿವಾಲಯ ಶಿಫಾರಸು ಮಾಡಿದೆ. ಈ ಕುರಿತು ಕೇಂದ್ರ ರೈಲ್ವೇ ಖಾತೆ ಸಹಾಯಕ ಸಚಿವ ಮನೋಜ್ ಸಿನ್ಹಾ ಅವರು ಬುಧವಾರ ಮಾಹಿತಿ ನೀಡಿದ್ದಾರೆ. ರೈಲು ನಿಲ್ದಾಣ ಮರುನಿರ್ಮಾಣಕ್ಕೆ 80 ಕೋಟಿ ರೂ. ಸೇರಿದಂತೆ 200 ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಈ ವಿಚಾರ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಬಿಜೆಪಿ ಸಂಸದ ವಿನಯ್ ಕಟಿಯಾರ್, ಅಯೋಧ್ಯೆ ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಜಿ ಪ್ರಧಾನಿ ಅಟಲ್ ಅವರ ಆಡಳಿತಾವಧಿಯಲ್ಲೇ ಚರ್ಚೆ ನಡೆದಿತ್ತು. ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡ ಅನಂತರ, ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಹೇಳಿದ್ದಾರೆ.