ಚೀನಕ್ಕೆ FB ಡೇಟಾ?
Team Udayavani, Jun 7, 2018, 7:45 AM IST
ವಾಷಿಂಗ್ಟನ್: ಇತ್ತೀಚೆಗಷ್ಟೇ ಚುನಾವಣಾ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾ ಜೊತೆಗೆ ಡೇಟಾ ಹಂಚಿಕೆ ಮಾಡಿದ ಆರೋಪ ಹೊತ್ತಿರುವ ಫೇಸ್ ಬುಕ್ ಗೆ ಇದೀಗ ಮತ್ತೂಂದು ವಿವಾದ ಸುತ್ತಿಕೊಂಡಿದೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂದು ಗುರುತಿಸಿರುವ ಹುವೈ ಸೇರಿದಂತೆ ನಾಲ್ಕಕ್ಕೂ ಹೆಚ್ಚು ಚೀನ ಕಂಪೆನಿಗಳಿಗೆ ಡೇಟಾ ಹಂಚಿಕೊಂಡಿದೆ ಎಂದು ಹೇಳಲಾಗಿದೆ. ಫೇಸ್ ಬುಕ್ ಬಳಕೆದಾರರ ಹಾಗೂ ಅವರ ಸ್ನೇಹಿತರ ಮಾಹಿತಿ, ಅವರ ಧಾರ್ಮಿಕ ಹಾಗೂ ರಾಜಕೀಯ ದೃಷ್ಟಿಕೋನಗಳು, ಕೆಲಸ ಮತ್ತು ಶಿಕ್ಷಣ ಇತಿಹಾಸ ಹಾಗೂ ಸಂಬಂಧ ಸ್ಥಿತಿಗತಿಗಳ ಬಗ್ಗೆ ಸಮಗ್ರ ವಿವರಗಳನ್ನು ಈ ಕಂಪೆನಿಗಳು ಪಡೆಯುತ್ತಿವೆ. ಇದೇ ರೀತಿಯ ಒಪ್ಪಂದವನ್ನು ಸ್ಮಾರ್ಟ್ ಫೋನ್ ತಯಾರಿಕೆ ಕಂಪೆನಿ ಬ್ಲಾಕ್ ಬೆರಿ ಜೊತೆಗೂ ಫೇಸ್ ಬುಕ್ ಹೊಂದಿದೆ ಎಂದು ‘ದ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. ಚೀನಾದ ಹುವೈ, ಲೆನೊವೊ, ಒಪೊ ಹಾಗೂ ಟಿಎಲ್ಸಿ ಜತೆಗೆ ಫೇಸ್ ಬುಕ್ ಈ ಒಪ್ಪಂದ ಮಾಡಿಕೊಂಡಿದೆ.
ಈ ಕರಾರು 2010ರಲ್ಲಿ ನಡೆದಿದ್ದು, ವಾರಾಂತ್ಯದಲ್ಲಿ ಹುವೈ ಜೊತೆಗಿನ ಒಪ್ಪಂದ ಮುಕ್ತಾಯವಾಗಲಿದೆ ಎಂದು ಫೇಸ್ಬುಕ್ ಹೇಳಿಕೊಂಡಿದೆ. ಆದರೆ 2012ರಲ್ಲಿ ಹುವೈ ಕಂಪೆನಿ ಮತ್ತು ಚೀನ ಕಮ್ಯೂನಿಸ್ಟ್ ಪಕ್ಷದ ಮಧ್ಯೆ ಆತ್ಮೀಯ ಸಂಬಂಧವಿರುವುದಾಗಿ ಸಂಸದೀಯ ಸಮಿತಿ ವರದಿ ಮಾಡಿತ್ತು ಎಂದು ಸಂಸದ ಹಾಗೂ ಸಂಸದೀಯ ಸಮಿತಿ ಉಪಾಧ್ಯಕ್ಷ ಮಾರ್ಕ್ ವಾರ್ನರ್ ಹೇಳಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಹುವೈ ಮತ್ತು ಝೆಡ್.ಟಿ.ಇ. ತಯಾರಿಸಿದ ಸಾಧನಗಳನ್ನು ಬಳಸದಂತೆ ಅಮೆರಿಕ ಸೇನೆ ಸೂಚನೆ ನೀಡಿತ್ತು.