ಕೆಪಿಎಲ್: ಬೆಂಗಳೂರು ಬ್ಲಾಸ್ಟರ್ ಬೃಹತ್ ಮೊತ್ತ
Team Udayavani, Aug 16, 2018, 6:00 AM IST
ಬೆಂಗಳೂರು: ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯುತ್ತಿರುವ 2018ನೇ ಸಾಲಿನ “ಕರ್ನಾಟಕ ಪ್ರೀಮಿಯರ್ ಲೀಗ್’ ಕ್ರಿಕೆಟ್ (ಕೆಪಿಎಲ್) ಕೂಟದ ಉದ್ಘಾಟನಾ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ 5 ವಿಕೆಟಿಗೆ 228 ರನ್ ಪೇರಿಸಿದೆ.
ನಾಯಕ ರಾಬಿನ್ ಉತ್ತಪ್ಪ ಅವರ ಸಿಡಿಲಬ್ಬರದ ಬ್ಯಾಟಿಂಗ್ ಬ್ಲಾಸ್ಟರ್ ತಂಡದ ಬೃಹತ್ ಮೊತ್ತದಲ್ಲಿ ಮಹತ್ವದ ಪಾತ್ರ ವಹಿಸಿತು. ಉತ್ತಪ್ಪ ಕೇವಲ 38 ಎಸೆತಗಳಿಂದ 81 ರನ್ ಬಾರಿಸಿದರು. ಈ ಪ್ರಚಂಡ ಆಟದ ವೇಳೆ 6 ಸಿಕ್ಸರ್, 8 ಬೌಂಡರಿ ಸಿಡಿಯಲ್ಪಟ್ಟವು.
ಆರಂಭಕಾರ ಎಂ. ವಿಶ್ವನಾಥನ್ 26 ಎಸೆತಗಳಿಂದ 46 ರನ್ ಹೊಡೆದರು (6 ಬೌಂಡರಿ, 2 ಸಿಕ್ಸರ್). ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಪವನ್ ದೇಶಪಾಂಡೆ ಕೂಡ 46 ರನ್ನುಗಳ ಕೊಡುಗೆ ಸಲ್ಲಿಸಿದರು. 30 ಎಸೆತ ಎದುರಿಸಿದ ದೇಶಪಾಂಡೆ 2 ಬೌಂಡರಿ, 2 ಸಿಕ್ಸರ್ ಬಾರಿಸಿದರು.
ಬೆಳಗಾವಿ ಪ್ಯಾಂಥರ್ ಪರ ನಾಯಕ ಸ್ಟುವರ್ಟ್ ಬಿನ್ನಿ 37 ರನ್ನಿತ್ತು 3 ವಿಕೆಟ್ ಕಿತ್ತರು. ದಿಕ್ಷಾಂಶು ನೇಗಿ ಹಾಗೂ ಸೌರಭ್ ಯಾದವ್ ತಲಾ ಒಂದು ವಿಕೆಟ್ ಉರುಳಿಸಿದರು. ಆರಂಭಕಾರ ಕೆ.ಬಿ. ಪವನ್ 7, ಆಕರ್ಷ್ದೀಪ್ 15, ಅಭಿಷೇಕ್ ಭಟ್ ಅಜೇಯ 10 ರನ್ ಮಾಡಿದರು. ಟಾಸ್ ಸೋತ ಬೆಂಗಳೂರು ಬ್ಲಾಸ್ಟರ್ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟಿತ್ತು.