ಫ್ಲಾರೆನ್ಸ್ ಅಬ್ಬರಕ್ಕೆ ನಾರ್ತ್ ಕೆರೊಲಿನಾ ತತ್ತರ
Team Udayavani, Sep 16, 2018, 9:58 AM IST
ವಿಲ್ಲಿಂಗ್ಟನ್ : ಅಮೆರಿಕದ ನಾರ್ತ್ ಕೆರೊಲಿನಾಗೆ ಶುಕ್ರವಾರ ಅಪ್ಪಳಿಸಿರುವ ಫ್ಲಾರೆನ್ಸ್ ಚಂಡಮಾರುತವು ಅಪಾರ ಪ್ರಮಾಣದ ಹಾನಿ ಉಂಟುಮಾಡಿದ್ದು, ಐವರನ್ನು ಬಲಿಪಡೆದುಕೊಂಡಿದೆ. ಕೆರೊಲಿನಾದಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆ ಮುಂದುವರಿದಿರುವ ಕಾರಣ, ಚಂಡಮಾರುತಕ್ಕೆ ಬಲಿಯಾದವರ ನಿಖರ ಸಂಖ್ಯೆ ಗೊತ್ತಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಕೆಲವು ದಿನಗಳ ಕಾಲ ಚಂಡಮಾರುತದ ಪ್ರಭಾವ ಇರಲಿದ್ದು, ಇಷ್ಟೊಂದು ಮಳೆಯಾಗುತ್ತಿರುವುದು ಸಾವಿರ ವರ್ಷಗಳಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. ನ್ಯೂ ಬರ್ನ್ ಪ್ರದೇಶದಲ್ಲಿ ನೂರಾರು ಮಂದಿ ಮನೆಗಳಲ್ಲೇ ಸಿಲುಕಿಕೊಂಡಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿರುವ ಕಾರಣ ರಕ್ಷಣೆಗಾಗಿ ಎದುರುನೋಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ ವಾರ ಚಂಡಮಾರುತ ಪೀಡಿತ ಪ್ರದೇಶಕ್ಕೆ ಅಧ್ಯಕ್ಷ ಟ್ರಂಪ್ ಭೇಟಿ ನೀಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಫಿಲಿಪ್ಪೀನ್ಸ್ಗೆ ಮ್ಯಾಂಗ್ಖಟ್ ಕಾಟ: ಇದೇ ವೇಳೆ, ಶನಿವಾರ ಫಿಲಿಪ್ಪೀನ್ಸ್ಗೆ ಮ್ಯಾಂಗ್ಖಟ್ ಚಂಡಮಾರುತ ಅಪ್ಪಳಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ. ಇದನ್ನು ವರ್ಷದ ಅತಿ ಭೀಕರ ಚಂಡಮಾರುತ ಎಂದು ಬಣ್ಣಿಸಲಾಗಿದೆ. ಪ್ರತಿ ವರ್ಷ ಸರಾಸರಿ 20 ಚಂಡಮಾರುತಗಳು ಫಿಲಿಪ್ಪೀನ್ಸ್ಗೆ ಅಪ್ಪಳಿಸುತ್ತವೆ.