ಪ್ರಿಯಾಂಕಾ ನಿಂದನೆ: ನಾಳೆ ದೇಶಾದ್ಯಂತ ಎಫ್ಐಆರ್
Team Udayavani, Feb 3, 2019, 1:27 AM IST
ನವದೆಹಲಿ: ಇತ್ತೀಚೆಗಷ್ಟೇ ಸಕ್ರಿಯ ರಾಜಕಾರಣ ಪ್ರವೇಶಿಸಿದ ಪ್ರಿಯಾಂಕಾ ವಾದ್ರಾ ಬಗ್ಗೆ ದುರುದ್ದೇಶಪೂರಿತವಾಗಿ ಕೀಳುಮಟ್ಟದ ಪ್ರಚಾರ ಮಾಡುತ್ತಿರುವವರ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕ ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಸೋಮವಾರ ಎಫ್ಐಆರ್ ದಾಖಲಿಸಲಿದೆ ಎಂದು ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಹಲವು ಬಿಜೆಪಿ ನಾಯಕರು ಪ್ರಿಯಾಂಕಾ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ರಾಜಕೀಯ ಪ್ರವೇಶಿಸುವ ಮಹಿಳೆಯರನ್ನು ಕೀಳಾಗಿ ನಡೆಸಿಕೊಳ್ಳುವ ಪರಿಪಾಠ ನಮ್ಮ ದೇಶದಲ್ಲಿದೆ. ಇದಕ್ಕೆ ಪ್ರಿಯಾಂಕಾ ವಾದ್ರಾ ಕೂಡ ಹೊರತಾಗದೇ ಇದ್ದದ್ದು ಬೇಸರ ತರಿಸಿದೆ. ನಾನು ದೆಹಲಿಯಲ್ಲಿ ಎಫ್ಐಆರ್ ದಾಖಲಿಸುತ್ತಿದ್ದೇನೆ. ರಾಜ್ಯ ಘಟಕ ಅಧ್ಯಕ್ಷರಿಗೆ ಆಯಾ ರಾಜ್ಯಗಳ ರಾಜಧಾನಿಗಳಲ್ಲಿ ಎಫ್ಐಆರ್ ದಾಖಲಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.