ಮಂಗನ ಕೈಯಲ್ಲಿ ಮಾಣಿಕ್ಯ : ಚುನಾವಣಾ ದೂರು ಆ್ಯಪ್ ಸೆಲ್ಫಿ ಮಹಾಪೂರ
Team Udayavani, Mar 20, 2019, 6:00 AM IST
ಚಂಡೀಗಢ : ಮಂಗನ ಕೈಯಲ್ಲಿ ಮಾಣಿಕ್ಯ ಎಂಬ ಮಾತನ್ನು ನೆನಪಿಸುವ ರೀತಿಯಲ್ಲಿ ಜನರು ಚುನಾವಣಾ ಸಂಬಂಧಿ ದೂರುಗಳನ್ನು ದಾಖಲಿಸುವುದಕ್ಕಾಗಿ ಆಯೋಗವು ಒದಗಿಸಿರುವ ಆ್ಯಪ್ ನಲ್ಲಿ ಸೆಲ್ಫಿ, ಮರ, ಗಿಡ, ಹೂ, ಬಳ್ಳಿ, ದೀಪ, ಕಂಪ್ಯೂಟರ್ ಸ್ಕ್ರೀನ್ ಮುಂತಾದ ಅಸಂಬದ್ದ ಫೋಟೋಗಳನ್ನು ಅಪ್ ಲೋಡ್ ಮಾಡುವ ಮೂಲಕ ತಮ್ಮ ಕಪಿ ಚೇಷ್ಟೆಯನ್ನು ಮೆರೆಯುತ್ತಿದ್ದಾರೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಚುನಾವಣಾ ಆಯೋಗವು ಈಚೆಗೆ ಚುನಾವಣಾ ಸಂಬಂಧಿ ದೂರುಗಳನ್ನು ದಾಖಲಿಸುವುದಕ್ಕೆ ಜನರ ಅನುಕೂಲಕ್ಕಾಗಿ ಸಿಟಿಜನ್ಸ್ ವಿಜಿಲ್ ಆ್ಯಪ್ ಅಥವಾ ‘cVIGIL’ ಆ್ಯಪ್ ಅನ್ನು ಅಂತರ್ ಜಾಲದಲ್ಲಿ ಒದಗಿಸಿತ್ತು. ಚುನಾವಣಾ ಸಂಬಂಧಿ ದೂರುಗಳಿಗೆ ಪೂರಕವಾಗುವ ಫೋಟೋಗಳನ್ನು, ವಿಡಿಯೋ ತುಣುಕುಗಳನ್ನು ಅಪ್ ಲೋಡ್ ಮಾಡುವಂತೆ ಆಯೋಗ ಪೌರರನ್ನು ಕೇಳಿಕೊಂಡಿತ್ತು.
ಪಂಜಾಬ್ ನಲ್ಲಿ ಜನರು ಈ ಆ್ಯಪ್ ಗೆ ಅಪ್ಲೋಡ್ ಮಾಡುವ ಶೇ.60ರಷ್ಟು ಹೂರಣಗಳು ಸುಳ್ಳೇ ಸುಳ್ಳು ಆಗಿವೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಪಂಜಾಬ್ ಮುಖ್ಯ ಚುನಾವಣಾಧಿಕಾರಿ ಈ ವರೆಗೆ 204 ದೂರುಗಳನ್ನು ಈ ಆ್ಯಪ್ ಮೂಲಕ ಸ್ವೀಕರಿಸಿದ್ದಾರೆ. ಈ ಪೈಕಿ 119 ದೂರುಗಳು ಬರೀ ಸುಳ್ಳಿನ ಕಂತೆಗಳಾಗಿವೆ; ಕೇವಲ 85 ದೂರುಗಳು ಮಾತ್ರವೇ ಸಾಚಾ ಆಗಿದ್ದವು ಎಂದು ಅಧಿಕಾರಿ ಹೇಳಿದರು.