ಯುವತಿ ಜತೆ ಅಸಭ್ಯ ವರ್ತನೆ: ಬಂಧನ
Team Udayavani, Apr 22, 2019, 3:00 AM IST
ಬೆಂಗಳೂರು: ಯುವತಿ ಜತೆ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ವಿವೇಕ ನಗರ ಪೊಲೀಸರು ಬಂಧಿಸಿದ್ದಾರೆ. ವಿವೇಕ ನಗರ ನಿವಾಸಿ ಜಾನ್ಸನ್ (45) ಬಂಧಿತ ಆರೋಪಿ. ಈ ಸಂಬಂಧ ಸಂತ್ರಸ್ತೆಯ ಸಹೋದರ ಸೋನು ಯಾದವ್ (27) ಎಂಬವರು ದೂರು ನೀಡಿದ್ದರು.
ಏ.19ರಂದು ಸಂಜೆ 7 ಗಂಟೆ ಸುಮಾರಿಗೆ ಸೋನು ಯಾದವ್ ತಮ್ಮ ಸಹೋದರಿ ಜತೆ ವಿವೇಕ ನಗರದ ಸ್ನೇಹ ಬೇಕರಿ ಪಕ್ಕದಲ್ಲಿದ್ದ ಎಟಿಎಂ ಕೇಂದ್ರಕ್ಕೆ ಹೋಗುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಆರೋಪಿ, ಸಹೋದರ-ಸಹೋದರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಜತೆಗೆ, ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ.
ಜಾನ್ಸನ್ನ ವರ್ತನೆಯಿಂದ ಆತಂಕಗೊಂಡ ಇಬ್ಬರೂ, ಅಲ್ಲಿಂದ ತಪ್ಪಿಸಿಕೊಂಡು ಓಡಲು ಮುಂದಾಗಿದ್ದು, ಆರೋಪಿ ಅವರನ್ನು ಹಿಂಬಾಲಿಸಿ ಕಲ್ಲುಗಳಿಂದ ಹಲ್ಲೆ ನಡೆಸಿದ್ದ. ಇದನ್ನು ಪ್ರಶ್ನಿಸಿದ ಸ್ಥಳೀಯರೊಬ್ಬರ ಮೇಲೂ ಹಲ್ಲೆ ನಡೆಸಿದ್ದ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳುಇದ ಆರೋಪಿಯನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ. ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.