ಅರವತ್ತರಲ್ಲಿ ಮತ್ತೆ ಆರಂಭಗೊಳ್ಳುತ್ತಿದೆ ಬದುಕು


Team Udayavani, Jul 21, 2019, 5:11 AM IST

young

ನೂರು ವರ್ಷ ದಾಟಿದರೂ ಕ್ರಿಯಾಶೀಲರಾಗಿರುವವರು ಇದ್ದಾರೆ. ಎಂಬತ್ತು ವರ್ಷದಲ್ಲಿ ಇನ್ನೆಷ್ಟು ಸಾಧಿಸುವುದಕ್ಕಿದೆ ಎಂದು ಕನಸು ಕಾಣುವವರಿದ್ದಾರೆ. ಎಪ್ಪತ್ತು ದಾಟಿದ ಬಳಿಕವೂ ಪರೀಕ್ಷೆ ಕಟ್ಟಿ ಪಾಸಾಗಿ ಪದವಿ ಪಡೆಯುವವ‌ರಿದ್ದಾರೆ. ಆದರೆ, ಕೆಲವರು ಮಾತ್ರ ಅರವತ್ತರ ಹರೆಯ ಬಂದ ಕೂಡಲೇ ‘ಇನ್ನು ವೃತ್ತಿಯಿಂದ ನಿವೃತ್ತಿಯಾಗಲಿದ್ದೇನೆ, ಬದುಕು ಮುಗಿಯಿತು’ ಎಂದು ಭಾವಿಸುತ್ತಾರೆ. ಆದರೆ, ಉತ್ಕಟವಾದ‌ ಜೀವನಪ್ರೀತಿ ಉಳ್ಳವರ ಪಾಲಿಗೆ ನಿವೃತ್ತಿಯ ಬಳಿಕ ನಿಜವಾದ ಬದುಕು ಆರಂಭಗೊಳ್ಳುತ್ತದೆ. ವೃತ್ತಿಯ ಒತ್ತಡದಲ್ಲಿ ಎಷ್ಟೆಲ್ಲ ಕೆಲಸಗಳು ಬಾಕಿ ಉಳಿದಿದ್ದವು ! ಈಗ ಅವನ್ನೆಲ್ಲ ಪೂರೈಸಲು ಸೂಕ್ತ ಸಮಯ !

ಬದುಕು ಆರಂಭ ಈಗ – ಲೈಫ್ ಸ್ಟಾರ್ಟ್ಸ್ ನೌ!

ಮೊನ್ನೆ ಮೊನ್ನೆ ಕೆಲಸಕ್ಕೆ ಸೇರಿದಂತಿದೆ. ನಾನು ಮೈಸೂರಿನ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌’ನಲ್ಲಿ ಒಂಬತ್ತನೆಯ ಸೆಮಿಸ್ಟರ್‌ನಲ್ಲಿದ್ದೆ. ವಿಮಾನ ಕಾರ್ಖಾನೆಯ ‘ಮ್ಯಾನೇಜ್‌ಮೆಂಟ್ ಟ್ರೈನೀ’ ಹುದ್ದೆಗೆ ಜಾಹೀರಾತು ಹೊರಬಿದ್ದಿತ್ತು. ಲಿಖೀತ ಪರೀಕ್ಷೆ, ಗುಂಪು ಚರ್ಚೆ, ಮನಃಶಾಸ್ತ್ರೀಯ ಪರೀಕ್ಷೆ, ಸಂದರ್ಶನ ಇವೆಲ್ಲವನ್ನು ದಾಟಿ ನನಗೆ ಕೆಲಸ ಸಿಕ್ಕಿತ್ತು. ಆದರೆ, ಅದೇ ಸಮಯಕ್ಕೆ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್‌ನಲ್ಲಿ ಸಂಶೋಧನೆಯ ಅವಕಾಶ ದೊರೆತ ಕಾರಣ, ಸಿಕ್ಕ ಕೆಲಸವನ್ನು ಅತ್ತ ಸರಿಸಿ, ಸಂಶೋಧನೆಗೆ ಸೇರಿದ್ದೆ.

ಮೂರು ವರ್ಷಗಳ ನಂತರ, ಎಂಎಸ್‌ಡಿಗ್ರಿಗೆ ಥೀಸೀಸ್‌ ಒಪ್ಪಿಸಿದ್ದ ಸಮಯ, ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್ಎಎಲ್) ಮತ್ತು ಐಟಿಐ ಎರಡೂ ಕಂಪೆನಿಗಳು ‘ಕ್ಯಾಂಪಸ್‌ ಇಂಟರ್‌ವ್ಯೂ’ನಲ್ಲಿ ನನ್ನನ್ನು ಆಯ್ದುಕೊಂಡು ಕೆಲಸ ಕೊಟ್ಟವು. ಆಗ ಐಟಿಐ ಅತ್ಯಂತ ಲಾಭ ತರುತ್ತಿದ್ದ ಪಬ್ಲಿಕ್‌ ಸೆಕ್ಟರ್‌. ಐಟಿಐ ನೀಡಲಿದ್ದ ಸಂಬಳ ತಿಂಗಳಿಗೆ 2,500 ರೂಪಾಯಿ. ಎಚ್ಎಎಲ್ ನೀಡಲಿತ್ತು 2,200 ರೂಪಾಯಿಯ ಸಂಬಳ. ನಾನು ಎಚ್ಎಎಲ್ ಅನ್ನು ಆಯ್ದುಕೊಂಡೆ!

ನಾನು ಬಂದು ಸೇರಿದ್ದು ಹೆಲಿಕಾಪ್ಟರ್‌ ಸಂಶೋಧನೆ ಮತ್ತು ವಿನ್ಯಾಸ ವಿಭಾಗವನ್ನು. ಅಂದು ಅದನ್ನು ‘ಹೆಲಿಕಾಪ್ಟರ್‌ ಡಿಸೈನ್‌ ಬ್ಯೂರೋ’ ಎಂದು ಕರೆಯುತ್ತಿದ್ದರು. ನಂತರ ವಿಭಾಗದ ಹೆಸರು ‘ರೋಟರಿ ವಿಂಗ್‌ ರಿಸರ್ಚ್‌ ಅಂಡ್‌ ಡಿಸೈನ್‌ ಸೆಂಟರ್‌’ ಎಂದು ಬದಲಾಯಿತು. ಈ ವಿಭಾಗದ ‘ಏವಿಯಾನಿಕ್ಸ್‌’ ತಂಡಕ್ಕೆ ನಾನು ಸೇರ್ಪಡೆಯಾಗಿದ್ದೆ.

ಇಸವಿ 1985ರಲ್ಲಿ ನಾನು ವಿಮಾನ ಕಾರ್ಖಾನೆಯನ್ನು ಸೇರಿಕೊಂಡಾಗ, ನಮ್ಮೆದುರು ಭಾರತದ ಮೊತ್ತಮೊದಲ ದೇಶೀಯ ವಿನ್ಯಾಸದ ಮಲ್ಟಿ ರೋಲ್ ಮಲ್ಟಿ ಮಿಷನ್‌ ಹೆಲಿಕಾಪ್ಟರ್‌ನ ಪ್ರಾಜೆಕ್ಟ್ ಇತ್ತು. ಈ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್‌ಗೆ ಮುಂದೆ ‘ಧ್ರುವ’ ಎಂಬ ಹೆಸರು ಬಂದಿತು.

ನಾನು ಸೀನಿಯರ್‌ ಮ್ಯಾನೇಜರ್‌ ಆದ ಸ್ವಲ್ಪ ಸಮಯಕ್ಕೆ ‘ಗ್ರೂಪ್‌ ಲೀಡರ್‌’ ಆದೆ. ಮೊದಲಿಗೆ ‘ಏವಿಯಾನಿಕ್ಸ್‌ ಮತ್ತು ಮಿಷನ್‌ ಸೆನ್ಸರ್’ ತಂಡಗಳಿಗೆ ಗ್ರೂಪ್‌ ಲೀಡರ್‌ ಆಗಿದ್ದೆ. ನಂತರ ಡೆಪ್ಯುಟಿ ಜನರಲ್ ಮ್ಯಾನೇಜರ್‌ ಹುದ್ದೆಯಲ್ಲಿದ್ದ ಸಮಯ ‘ಮಿಷನ್‌ ಸೆನ್ಸರ್ ಮತ್ತು ಆರ್ಮಮೆಂಟ್ ತಂಡ’ಗಳಿಗೆ ಮುಖಂಡಳಾದಂತೆ, ಧ್ರುವ ಹೆಲಿಕಾಪ್ಟರಿನ ಶಸ್ತ್ರೀಕರಣದ ತಾಂತ್ರಿಕ ಜವಾಬ್ದಾರಿ ನನ್ನ ಮೇಲಿತ್ತು.

ಭಾರತದ ಹೆಮ್ಮೆಯ ಈ ದೇಶೀಯ ಹೆಲಿಕಾಪ್ಟರ್‌, ಡ್ರಾಯಿಂಗ್‌ ಬೋರ್ಡಿನ ಗೀಟು ಗೆರೆಗಳಿಂದ ಮೇಲೆದ್ದು, ರೂಪು ತಳೆದು, ಮೆಲ್ಲನೆ ನೆಲದಿಂದ ಕೆಲವೇ ಅಡಿ ಹಾರಿದ ಮೊದಲ ಹಾರಾಟದಿಂದ ಹಿಡಿದು, ಹಿಮಾಲಯದ ಎತ್ತರದಲ್ಲಿ, ಸಮುದ್ರದ‌ ತಟದಲ್ಲಿ, ಗನ್‌, ರಾಕೆಟ್, ಕ್ಷಿಪಣಿಗಳ ಪರೀಕ್ಷಣಾ ಹಾರಾಟದಲ್ಲಿ ಯಶಸ್ವಿಯಾದ ರೋಮಾಂಚನದ ಹಾದಿಯನ್ನು ಕಂಡ ಖುಷಿ ಈ ಲೇಖಕಿಯದು. ಇಂದು 260ಕ್ಕೂ ಹೆಚ್ಚು ‘ಧ್ರುವ’ ಹೆಲಿಕಾಪ್ಟರುಗಳು ನಮ್ಮ ಸೇನೆಯಲ್ಲಿವೆ.

2012. ಅಸ್ತ್ರಶಸ್ತ್ರಗಳನ್ನು ಜೋಡಿಸಿಕೊಂಡ ‘ವೆಪನೈಸ್ಡ್ ಹೆಲಿಕಾಪ್ಟರ್‌’ ಸರ್ಟಿಫೈ ಆಗಲಿದ್ದ ವರ್ಷ. ಕೊನೆಯ ಅಸ್ತ್ರದ ಪರೀಕ್ಷಣಾ ಹಾರಾಟವನ್ನು ನಾವು 2012ರ ಜನವರಿಯಲ್ಲಿ ಕಲೈಕುಂದದ ವಾಯುಪಡೆಯ ‘ಫೈರಿಂಗ್‌ ರೇಂಜ್‌’ನಲ್ಲಿ ಯಶಸ್ವಿಯಾಗಿ ಮುಗಿಸಿ ಬಂದಾಗ, ಮನಸ್ಸಿಗೆ ಎಂಥಾ ನಿರಾಳ!

ಇದೇ ವರ್ಷ ಆಗಸ್ಟ್‌ ತಿಂಗಳು, ನನಗೆ ‘ಅಡಿಶನಲ್ ಜನರಲ್ ಮ್ಯಾನೇಜರ್‌’ ಸ್ಥಾನಕ್ಕೆ ಭಡ್ತಿಯಾಗಿ, ‘ಫಿಫ್ತ್ ಜೆನೆರೇಶನ್‌ ಫೈಟರ್‌ ಏರ್‌ಕ್ರಾಫ್ಟ್’ನ ಮುಖ್ಯಸ್ಥಳಾಗಿ ‘ಏರ್‌ಕ್ರಾಪ್ಟ್ ರಿಸರ್ಚ್‌ ಅಂಡ್‌ ಡಿಸೈನ್‌ ಸೆಂಟರ್‌’ಗೆ ಬಂದೆ.

ಮುಂದೆ ಇದೇ ವಿಭಾಗದಲ್ಲಿ ‘ಮಾನವ ರಹಿತ ವಾಯುಯಂತ್ರ’ಗಳ ಚೀಫ್ ಡಿಸೈನರ್‌ ಆದೆ. ನಮ್ಮ ಕಾರ್ಖಾನೆಯ ಜಾಯಿಂಟ್ ವೆಂಚರ್‌ ಕಂಪೆನಿಗಳಾದ ಬಿಎಇ-ಎಚ್ಎಎಲ್ ಸಾಫ್ಟ್ ವೇರ್‌ ಲಿಮಿಟೆಡ್‌ ಮತ್ತು ಡಿಫೆನ್ಸ್‌ ಇನ್ನೊವೇಶನ್‌ ಆರ್ಗನೈಸೇಶನ್‌ಗೆ ನಿರ್ದೇಶಕಳಾಗಿ ನೇಮಕಗೊಂಡೆ.

ಆಗಸ್ಟ್‌ 2017ರಲ್ಲಿ, ನಾನು ‘ಎಚ್ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿ’ಗೆ (ಎಚ್ಎಮ್‌ಎ) ಜನರಲ್ ಮ್ಯಾನೇಜರ್‌ ಆದಾಗ, ನನ್ನ ಹೆಲಿಕಾಪ್ಟರ್‌, ವಿಮಾನ ಮತ್ತು ಮಾನವರಹಿತ ವಾಯುವಾಹನಗಳ ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್ ಅನುಭವವನ್ನು ಒಟ್ಟಿಗೇ ಉಪಯೋಗಿಸುವ‌ ಸದವಕಾಶ ದೊರೆಯಿತು. ಎಚ್ಎಮ್‌ಎ ನಮ್ಮದೇ ಕಾರ್ಖಾನೆಯ ಅಧಿಕಾರಿಗಳ ತರಬೇತಿಗೆಂದು 1969ರಲ್ಲಿ ಸ್ಥಾಪಿತವಾಗಿತ್ತು. ಇದೀಗ ಅತ್ಯಾಧುನಿಕ ಅನುಕೂಲಗಳನ್ನು ಒಳಗೊಂಡು ಅಕಾಡೆಮಿಯ ಹೊಸ ಕ್ಯಾಂಪಸ್‌ ನಿರ್ಮಾಣಗೊಂಡಿತ್ತು. ನಾನಿಲ್ಲಿಗೆ ಮುಖ್ಯಸ್ಥಳಾಗಿ ಬಂದಿಳಿದಾಗ, ನನ್ನ ಮೊದಲ ಕೆಲಸ ಈ ಅಕಾಡೆಮಿಗೆ ಒಂದು ‘ವಿಷನ್‌’ ಸಿದ್ಧ ಪಡಿಸುವುದು.

ಹೊಸದೇನನ್ನೋ ಸೃಷ್ಟಿಸುವುದು, ಕನಸು ಕಾಣುವುದು, ಆ ಕನಸನ್ನು ನನಸಿನ ಹಾದಿಗೆ ಹೊರಳಿಸಲು ಯೋಜಿಸುವುದು, ನನ್ನ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ನನಗೆ ಅತ್ಯಂತ ಖುಷಿ ಕೊಡುವ ಕಾಯಕ. ‘ಕನಸು ಕಂಡರೆ ಸಾಕು, ಹಾರಲಿಕ್ಕೆ ರೆಕ್ಕೆಗಳು ಮೊಳೆಯುತ್ತವೆ’ ಎಂದು ಎಂದೋ ಕಂಡುಕೊಂಡಿದ್ದೆ. ಮತ್ತೆ ಕನಸು ಕಂಡೆ. ‘ವಿಷನ್‌ ಫಾರ್‌ ಎಚ್ಎಮ್‌ಎ’ ಸಿದ್ಧವಾಯಿತು. ಅಕಾಡೆಮಿಯನ್ನು ಸ್ವಯಂ ನಿರ್ಭರತೆಯ ಹಾದಿಯಲ್ಲಿ ಹೆಜ್ಜೆ ಇಡಿಸುವುದು ಮತ್ತು ನಮ್ಮ ದೇಶಕ್ಕೆ ಅಗತ್ಯವಾದ ವೈಮಾನಿಕ ರಂಗಕ್ಕೆ ಸಿದ್ಧವಾದ ಮಾನವ ಸಂಪನ್ಮೂಲವನ್ನು ತಯಾರಿಸಲು ನೆರವಾಗುವುದು. ದೀರ್ಘ‌ಕಾಲಿಕ ವೈಮಾನಿಕ ಪ್ರೋಗ್ರಾಮ್‌ಗಳನ್ನು ವಿನ್ಯಾಸ ಮಾಡಿ, ಹೊರಗಿನ ಇಂಜಿನಿಯರಿಂಗ್‌ ಪದವೀಧರರಿಗೆ, ಇತರ ಕಂಪೆನಿಗಳ ಅಧಿಕಾರಿಗಳಿಗೆ ಅಕಾಡೆಮಿಯ ಬಾಗಿಲನ್ನು ತೆರೆದು ಅಕಾಡೆಮಿಯನ್ನು ‘ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್‌ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್’ ಆಗಿಸುವುದು. ಜೊತೆಗೇ ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಷನ್‌ನ (ಎಐಸಿಟಿಎ) ಮಾನ್ಯತೆ ಪಡೆಯುವುದು.

ಪರಿಶ್ರಮ ಹಾಕಲು ಸಿದ್ಧವಿದ್ದ ತಂಡ ತಯಾರಾಯಿತು. ವೃತ್ತಿಜೀವನದ ಈ ಸುದೀರ್ಘ‌ ಹಾದಿಯಲ್ಲಿ ನನಗೆ ತಿಳಿದಿತ್ತು, ಉತ್ಸಾಹದ ಕೆಲವೇ ಮಂದಿ ಹೊಸ ತಿರುವಿನ ಹರಿಕಾರರಾಗಬಲ್ಲರು. ನಮ್ಮ ಕನಸುಗಳನ್ನು ಕಾರ್ಯಗತಗೊಳಿಸಲು ಅಗಾಧವಾಗಿ ಶ್ರಮ ಹಾಕಿದೆವು. ಎಲ್ಲವೂ ಸಾಧ್ಯವಾಯಿತು. 2018ರ ಜೂನ್‌. ಮೂರು ತಿಂಗಳ ‘ಸರ್ಟಿಫಿಕೇಟ್ ಪ್ರೋಗ್ರಾಮ್‌ ಇನ್‌ ಏರೋಸ್ಪೇಸ್‌ ಟೆಕ್ನಾಲಜಿ’ ಆರಂಭಿಸಿದೆವು. ದಿನಾಂಕ 10 ಏಪ್ರಿಲ್ 2018, ಅಕಾಡೆಮಿಗೆ ಎಐಸಿಟಿಎ ಮಾನ್ಯತೆ ದೊರೆಯಿತು. ನವೆಂಬರ್‌ನಲ್ಲಿ 15 ತಿಂಗಳ ‘ಪೋಸ್ಟ್‌ ಗ್ರಾಜುಯೆಟ್ ಡಿಪ್ಲೊಮಾ ಇನ್‌ ಏವಿಯೇಷನ್‌ ಮ್ಯಾನೇಜ್‌ಮೆಂಟ್’ ಆರಂಭಿಸಿದೆವು. ಇದು ವಾಸ್ತವದಲ್ಲಿ ‘ಏವಿಯೇಷನ್‌ ಟೆಕ್ನಾಲಜಿ ವಿತ್‌ ಮ್ಯಾನೇಜ್‌ಮೆಂಟ್’. ವೈಮಾನಿಕ ತಂತ್ರಜ್ಞಾನದ ಬುನಾದಿ ಹಾಕಿ, ಅದರೊಡನೆ ಮ್ಯಾನೇಜ್‌ಮೆಂಟ್ ಕಲಿಕೆಯನ್ನು ಸೇರ್ಪಡಿಸಿದ್ದೆವು.

ನಾನು ಕಂಡ ಕನಸು ನನಸಾಗಿತ್ತು. ಆದರೆ, ಮತ್ತೂಂದು ಕನಸು ಇಷ್ಟರಲ್ಲಿ ಪುಟಿದಿತ್ತು. ನಮ್ಮ ಈ ಎರಡೂ ಪ್ರೋಗ್ರಾಮ್‌ಗಳು ಇಂಜಿನಿಯರಿಂಗ್‌ ಪದವೀಧರರಿಗೆ ತೆರೆದದ್ದು. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಇರುವಂತೆಯೇ ವಿದ್ಯಾರ್ಥಿಗಳಿಗೆ ವೈಮಾನಿಕ ರಂಗದ ಪರಿಚಯವನ್ನು ಮಾಡಿಕೊಡುವುದು ಮತ್ತೂ ಒಳ್ಳೆಯದಲ್ಲವೆ. ಈ ವರ್ಷ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ, ‘ಏರೋಸ್ಪೇಸ್‌ ಎಲೆಕ್ಟಿವ್‌’ ಡಿಸೈನ್‌ ಮಾಡಿದೆವು. ಮೊದಲ ಬ್ಯಾಚಿಗೆ ‘ಬಸವೇಶ್ವರ ಇಂಜಿನಿಯರಿಂಗ್‌ ಕಾಲೇಜಿ’ನ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮ ಅಕಾಡೆಮಿಯನ್ನು ಪ್ರವೇಶಿಸಿದಾಗ, ವೈಮಾನಿಕ ಶಿಕ್ಷಣದ ಹೊಸ ಅಧ್ಯಾಯ ಆರಂಭವಾಯಿತು.

ಅಲ್ಲಿಗೆ ನನ್ನ ವೃತ್ತಿ ಜೀವನದ ಕರ್ತವ್ಯಗಳು ಮುಗಿದಿದ್ದವು. ಹೃದಯ ತುಂಬಿದ ಕೃತಜ್ಞತೆಯಲ್ಲಿ ವಿಮಾನ ಕಾರ್ಖಾನೆಗೆ ವಿದಾಯ ಹೇಳಿದೆ. ನನ್ನ ಕಾರ್ಖಾನೆ ಮತ್ತು ವೈಮಾನಿಕ ರಂಗದ ನನ್ನ ಕೆಲಸ, ನನಗೆ ಎಲ್ಲವನ್ನೂ ನೀಡಿತ್ತು.

ನಾನು ನನ್ನ ಕೆಲಸದಲ್ಲಿ ಆಸಕ್ತಿ ಮತ್ತು ಉತ್ಸಾಹದಿಂದ ತೊಡಗಿದಂತೆ, ನೂರು ಅವಕಾಶಗಳು ನನ್ನೆದುರು ತೆರೆದುಕೊಂಡವು. ನನ್ನ ಕೆಲಸದಿಂದ ನಾನು ಕೇವಲ ಸಂಬಳ ಮಾತ್ರ ಪಡೆಯಲಿಲ್ಲ, ಆತ್ಮವಿಶ್ವಾಸವನ್ನು, ಬದುಕಿನ ಅಪರೂಪದ ಅವಕಾಶಗಳನ್ನು ಪಡೆದೆ. ಸಮಸ್ಯೆಗಳನ್ನು ಎದುರಿಸುವ, ಪರಿಹರಿಸುವ ನೂರು ಬಗೆಯನ್ನು ಕಲಿತೆ.

.

ಪ್ರತಿದಿನ ಬೆಳಗ್ಗೆ ಆರೂಮುಕ್ಕಾಲಿಗೆ ಮನೆ ಬಿಟ್ಟರೆ, ಹಿಂತಿರುಗುತ್ತಿದ್ದದ್ದು ರಾತ್ರಿಯೇ. ದೇಹ ದಣಿದಿದ್ದರೂ, ತಲೆಯ ತುಂಬ ನೂರು ಯೋಜನೆಗಳನ್ನು ಹೊತ್ತು ಬರುತ್ತಿದ್ದೆ. ನಿವೃತ್ತಿಯ ಮರುದಿನ, ಜೂನ್‌ 1ನೆಯ ತಾರೀಕು, ಅಲರಾಂ ಇಲ್ಲದೆ ಕಣ್ತುಂಬ ನಿದ್ದೆ ಮಾಡಿ ಎದ್ದಾಗ, ಅರೆಕ್ಷಣ ಖಾಲಿ ಖಾಲಿ ಅನುಭವ. ಮರುಕ್ಷಣ ಹೊಳೆಯಿತು, ಇನ್ನು ನನ್ನ ಬದುಕಿಗೆ ನಾನೇ ಸಿಇಓ! ಇನ್ನು ಹಗಲು-ರಾತ್ರಿಗಳು ನನ್ನ ಅಂಗೈಯಲ್ಲಿ. ಇದೋ ಹೊರಟೆ ಪತಿ ಕೀರ್ತಿಯೊಡನೆ, ಬಗಲಿನ ರಾಮನಗರದ ಕಂಡ ಬೆಟ್ಟ ಹತ್ತಲು. ಮನೆಯ ಬಳಿಯೇ ಹೊಸ ರೈಲು ನಿಲ್ದಾಣ. ರಾಮನಗರಕ್ಕೆ ಹತ್ತೇ ರೂಪಾಯಿ! ಇಷ್ಟು ಹತ್ತಿರದ, ಇಂತಹ ಅದ್ಭುತ ಸೌಂದರ್ಯದ ಬೆಟ್ಟಗಳನ್ನು ನಾನು ಇಲ್ಲಿಯವರೆಗೂ ಹೋಗಿ ನೋಡಿರಲಿಲ್ಲ! ನಿವೃತ್ತಿಯ ಲಾಭಗಳು ಒಂದಲ್ಲ, ಎರಡಲ್ಲ.

ಮೊನ್ನೆ ಜೂನ್‌ 16 ರಂದು ಭಾನುವಾರ ಬೆಳಗ್ಗೆ ನ್ಯಾಷನಲ್ ಕಾಲೇಜಿಗೆ ಹೋದೆ. ಅಂದು ಡಾ. ಜಿ. ರಾಮಕೃಷ್ಣ ಅವರ ವರ್ತಮಾನ ಪುಸ್ತಕದ ಬಿಡುಗಡೆಯ ಕಾರ್ಯಕ್ರಮ. ಮುಖ್ಯವಾಗಿ ಅದು ಜಿ. ರಾಮಕೃಷ್ಣ ಅವರ 80ನೇ ಹುಟ್ಟುಹಬ್ಬದ ಸಂಭ್ರಮವನ್ನು ಸ್ನೇಹಿತರು ಆತ್ಮೀಯರು ಆಚರಿಸಿದ ಸಮಾರಂಭ. ಆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಆತ್ಮಸಾಕ್ಷಿಯನ್ನು ಸದಾ ಎಚ್ಚರಿಸುವ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್‌. ದೊರೆಸ್ವಾಮಿ ವಹಿಸಿದ್ದರು. ನೂರಾ ಒಂದು ವರ್ಷದ ದೊರೆಸ್ವಾಮಿ ಅವರು ಸ್ವತಂತ್ರವಾಗಿ ನಡೆದು ಬಂದು ಕುಳಿತದ್ದಲ್ಲದೆ, ಅದೆಂಥ ತೀಕ್ಷ್ಣ ಮತಿಯಲ್ಲಿ ನಿರರ್ಗಳವಾಗಿ ಮಾತನಾಡಿದರು! ಈ 80 ಮತ್ತು 101 ವರ್ಷ ವಯಸ್ಸಿನ ಯುವಕರು ನಮ್ಮ ಸಮಾಜದ ಬಗ್ಗೆ , ದೇಶದ ಬಗ್ಗೆ ಚಿಂತಿಸುತ್ತಿದ್ದರು. ನಾನು ದೊರೆಸ್ವಾಮಿಗಳಿಗೆ ನಮಸ್ಕರಿಸಿ, ‘ಈಗಷ್ಟೆ ನಾನು ಎಚ್ಎಎಲ್ನಿಂದ ನಿವೃತ್ತಳಾದೆ’ ಎಂದು ಹೇಳಿದೆ. ‘ಅರೆ, ನಿನ್ನ ಆ ಯಹೂದಿ ಹುಡುಗಿಯನ್ನು ಕುರಿತ ಕಾದಂಬರಿ ಅದೆಷ್ಟು ಚಂದ ಇತ್ತಮ್ಮ’ ಎಂದು ನೆನಪಿಸಿಕೊಂಡಾಗ ನಾನು ದಂಗಾದೆ. ಹನ್ನೆರಡು ವರ್ಷಗಳ ಹಿಂದೆ, ದೊರೆಸ್ವಾಮಿಗಳು ನನ್ನ ‘ಯಾದ್‌ ವಶೇಮ್‌’ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದ್ದರು. ಅದೆಂಥ ನೆನಪಿನ ಶಕ್ತಿ!

ಮರು ಭಾನುವಾರ ಜೂನ್‌ 23, ಗಾಂಧಿಭವನದಲ್ಲಿ ತೊಂಬತ್ತರ ಹರೆಯದ ಸಿ. ಆರ್‌. ಕೃಷ್ಣರಾವ್‌ ಅವರ ಹುಟ್ಟುಹಬ್ಬದ ಸಂಭ್ರಮ ಮತ್ತು ಅವರ ಪುಸ್ತಕ ಬದುಕಿನ ತಿರುವುಗಳು ಬಿಡುಗಡೆ ಇತ್ತು. ಕಳೆದ ವಾರ ಕೃಷ್ಣರಾವ್‌ ಅವರು ಪ್ರೇಕ್ಷಕರಾಗಿ ಜಿ. ರಾಮಕೃಷ್ಣ ಅವರ ಕಾರ್ಯಕ್ರಮಕ್ಕೆ ಬಂದಿದ್ದರು. ನವಕರ್ನಾಟಕ ಪ್ರಕಾಶನದ ಹಿರಿಯ ಸಂಪಾದಕರೂ, ಪತ್ರಕರ್ತರೂ ಆದ ಅವರಿಗೆ ಕಾರಿನ ಅನುಕೂಲ ಮಾಡಿದ್ದರೂ, ಇವರು ಆರಾಮಾಗಿ ಆಟೋ ಹಿಡಿದು ಮನೆಗೆ ಹೋಗಿದ್ದರು! ಇಂದು ಇಲ್ಲಿ ಅವರ ಬದುಕಿನ ಸಾಹಸಗಳನ್ನು, ತಿರುವುಗಳನ್ನು ನಿರರ್ಗಳವಾಗಿ ಅವರ ಬಾಯಿಂದ ಕೇಳುವಾಗ, ಅವರ ನೆನಪಿನ ಶಕ್ತಿಗೆ, ವೈಚಾರಿಕ ತೀಕ್ಷ್ಣತೆಗೆ ಮತ್ತೆ ಬೆರಗಾಗಿ ಕುಳಿತೆ. 90 ವರ್ಷದ ಇವರ ಉತ್ಸಾಹವನ್ನು ನೋಡುತ್ತಿದ್ದಂತೆ, ಅವರ 93 ವರ್ಷ ವಯಸ್ಸಿನ ಅಣ್ಣ ಅವರನ್ನು ಅಭಿನಂದಿಸಲು, ಅಷ್ಟೇ ಚುರುಕಾಗಿ ವೇದಿಕೆಯ ಮೆಟ್ಟಿಲು ಹತ್ತಿದಾಗ ಮತ್ತಷ್ಟು ಅಚ್ಚರಿ ಮತ್ತು ಸಂತಸ.

ನಿವೃತ್ತಳಾದ ಮೇಲೆ ಬೆಳಗ್ಗೆ ಪಾರ್ಕಿಗೆ ವಾಕ್‌ ಮಾಡಲು ಹೋಗತೊಡಗಿದೆ. ಪ್ರತಿದಿನ ಅಲ್ಲಿ ನನಗೆ ಓರ್ವ ವಯೋವೃದ್ಧರು ಕಾಣುತ್ತಿದ್ದರು. ನಾನು ಅವರಿಗೆ ನಮಸ್ಕಾರ ಹೇಳತೊಡಗಿದೆ. 2019 ಜುಲೈ 2. ಅವರು ನನ್ನನ್ನು ಮಾತನಾಡಿಸಿ, ತಾವು ಬರೆದ ಮಧುರ ವ್ಯವಹಾರಗಳು ಎಂಬ ಪುಟ್ಟ ಪುಸ್ತಕವನ್ನು ಕೈಗಿಟ್ಟರು. ನಿಧಾನವಾಗಿ ಮಾತನಾಡುತ್ತ ಇವರು ವಿದ್ವಾನ್‌ ಶ್ರೀಕಂಠಯ್ಯನವರು, ಸಾಹಿತ್ಯ-ಸಂಗೀತದ ಹಿರಿಯ ಜೀವ ಎಂದು ಅರಿವಾಯಿತು. ಅವರು ಹೆಬ್ಬೂರಿನ ಕಾಮಾಕ್ಷಿ ಅಮ್ಮನಿಗೆ ತಾವು ಬರೆದ ಲಾಲಿಯನ್ನು ಸುಶ್ರಾವ್ಯವಾಗಿ ಮೇರು ದನಿಯಲ್ಲಿ ನಿರರ್ಗಳವಾಗಿ ಹಾಡಿದರು. ಜಗನ್ಮಾತೆಯನ್ನು ಮಾತೃ ಹೃದಯದಲ್ಲಿ ಮಗುವಂತೆ ಆಡಿಸುವ ಹೆಂಗಳೆಯರ ಲಾಲಿ ಅದಾಗಿತ್ತು. ಅವರು ಸರಕಾರಿ ಶಾಲೆಯ ಶಿಕ್ಷಕರಾಗಿದ್ದವರು. ಅವರ ನೆನಪಿನ ಶಕ್ತಿ, ಕಂಠದ ಸಿರಿ, ಯಾರ ಸಹಾಯವಿಲ್ಲದೆ ಮನೆಯಿಂದ ಪಾರ್ಕಿಗೆ ನಡೆದು ಬರುವ ಪರಿ ನೋಡಿ ಅವರನ್ನು ಕೇಳಿದೆ, ‘ಸರ್‌ ನಿಮ್ಮ ವಯಸ್ಸೆಷ್ಟು?’ ಅವರು ಹೇಳಿದರು ’93’!

ಈಗಷ್ಟೆ ಮೇ 31ರಂದು ನಿವೃತ್ತಳಾದ ನನಗೆ, 80, 90, 93, 101 ವರ್ಷದ ಜಿ. ರಾಮಕೃಷ್ಣ, ಸಿ. ಆರ್‌. ಕೃಷ್ಣರಾವ್‌, ಶ್ರೀಕಂಠಯ್ಯ, ದೊರೆಸ್ವಾಮಿಗಳಂಥ ಹಿರಿಯ ಚೇತನಗಳನ್ನು ಕಂಡಾಗ ಮತ್ತೆ ಅನಿಸಿತ್ತು, ‘ವಯಸ್ಸು ಕೇವಲ ಒಂದು ಅಂಕಿ’. ನಾನಿನ್ನೂ ಅರವತ್ತರ ಹರೆಯದವಳು. ‘ನನಗಿಂತ ಕಿರಿಯರಿಲ್ಲ’ ಎಂಬ ಸಂಭ್ರಮ ಉತ್ಸಾಹದಲ್ಲಿ ‘ಲೈಫ್ ಸ್ಟಾರ್ಟ್ಸ್ ನೌ’ ಎಂದು ಹೊರಟಿರುವೆ. ಅಂದ ಹಾಗೆ, ನನ್ನ ದಿಟವಾದ ಹುಟ್ಟಿದ ಹಬ್ಬ ಜುಲೈ 16ರಂದು !

– ನೇಮಿಚಂದ್ರ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.