ಝೊಮ್ಯಾಟೋ ವಿರುದ್ಧ ನೆಟ್ಟಿಗರ ಕಿಡಿ
Team Udayavani, Aug 2, 2019, 5:30 AM IST
ನವದೆಹಲಿ: ‘ಆಹಾರಕ್ಕೆ ಧರ್ಮವಿಲ್ಲ. ಆಹಾರವೇ ಒಂದು ಧರ್ಮ’ ಎಂದು ಸಾರಿದ್ದ, ಖ್ಯಾತ ಆನ್ಲೈನ್ ಆಹಾರ ಸರಬರಾಜು ಸಂಸ್ಥೆಯಾದ ಝೊಮ್ಯಾಟೊ ವಿರುದ್ಧ ಟ್ವಿಟರಿಗರು ಹರಿಹಾಯ್ದಿದ್ದಾರೆ.
ಆಹಾರಕ್ಕೆ ಧರ್ಮವಿಲ್ಲ ಎನ್ನುವುದು ನಿಮ್ಮ ನಿಲುವಾಗಿದ್ದರೆ, ನಿಮ್ಮ ಆ್ಯಪ್ನಲ್ಲಿ ‘ಹಲಾಲ್’ ಮಾಂಸದ ಅಡುಗೆಯನ್ನು ಏಕೆ ವಿತರಿಸುತ್ತಿದ್ದೀರಿ? ಕೇವಲ ಒಂದು ಸಮುದಾಯದ ಗ್ರಾಹಕರನ್ನು ತೃಪ್ತಿಪಡಿಸುವ ಉದ್ದೇಶ ಇದರ ಹಿಂದೆ ಇದೆಯಲ್ಲವೇ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ, ‘ಹಲಾಲ್ ಮಾಂಸದ ಅಡುಗೆಗಳು ಆಯಾ ರೆಸ್ಟೋರೆಂಟ್ಗಳದ್ದೇ ಹೊರತು ನಮ್ಮದಲ್ಲ’ ಎಂದು ಝೊಮ್ಯಾಟೊ ತನ್ನನ್ನು ಸಮರ್ಥಿಸಿಕೊಂಡಿದ್ದರೂ, ಹಲವಾರು ಟ್ವೀಟಗರು ಟ್ವಿಟರ್ನಲ್ಲಿ ಮೊಬೈಲ್ಗಳಿಂದ ಝೊಮ್ಯಾಟೊ ಅನ್-ಇನ್ಸ್ಟಾಲ್ ಅಭಿಯಾನ ಆರಂಭಿಸಿದ್ದಾರೆ.
ನೋಟಿಸ್: ಈ ವಿವಾದಕ್ಕೆ ಮೂಲ ಕಾರಣವಾದ ಮಧ್ಯಪ್ರದೇಶದ ಅಮಿತ್ ಶುಕ್ಲಾ ಅವರಿಗೆ ನೋಟಿಸ್ ನೀಡಿರುವ ಮಧ್ಯಪ್ರದೇಶ ಪೊಲೀಸ್ ಇಲಾಖೆ, ಕೋಮು ದ್ವೇಷಕ್ಕೆ ಪ್ರೇರಣೆ ನೀಡುವ ನಡೆಯನ್ನು ಪುನರಾವರ್ತಿಸಿದರೆ, ಜೈಲಿಗೆ ಅಟ್ಟುವುದಾಗಿ ಎಚ್ಚರಿಸಿದೆ.