ಶಾಸಕ ಖಾದರ್ಗೆ ಬೆದರಿಕೆ: ಕ್ರಿಮಿನಲ್ ಪ್ರಕರಣ ದಾಖಲು
Team Udayavani, Jan 30, 2020, 2:30 AM IST
ಮಂಗಳೂರು: ಶಾಸಕ ಯು.ಟಿ. ಖಾದರ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಬುಧವಾರ ಕಾವೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೂಳೂರುನಲ್ಲಿ ಬಿಜೆಪಿ ವತಿಯಿಂದ ಜ. 27ರಂದು ನಡೆದ ಜನಜಾಗೃತಿ ರ್ಯಾಲಿ ಸಂದರ್ಭ ಯುವಕರ ಗುಂಪೊಂದು ಖಾದರ್ ಅವರಿಗೆ ಜೀವ ಬೆದರಿಕೆ ಒಡ್ಡುವ ಘೋಷಣೆ ಕೂಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು; ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದರು.