ಅಡಿಕೆ ಮಾನ ಕಳೆಯಬೇಡಿ

ಸಂಪಾದಕೀಯ, Apr 30, 2019, 6:00 AM IST

ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಮುಖ್ಯ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಪ್ರತಿವರ್ಷ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದೆ. ಕೊಳೆ ರೋಗ, ಹಳದಿ ರೋಗದಂತಹ ಸಮಸ್ಯೆಗಳು ಒಂದೆಡೆಯಾದರೆ ಅನಿಶ್ಚಿತ ಬೆಲೆಯ ಸಮಸ್ಯೆ ಇನ್ನೊಂದೆಡೆ. ಇದೀಗ ಇದರ ಜತೆಗೆ ಕಲಬೆರಕೆ ಅಡಿಕೆ ಎಂಬ ಇನ್ನೊಂದು ಸಮಸ್ಯೆ ವಕ್ಕರಿಸಿದೆ. ಅಡಿಕೆಯ ಮಾನವನ್ನೇ ಕಳೆಯುತ್ತಿರುವ ಕಳಪೆ ದರ್ಜೆಯ ಕಲಬೆರಕೆ ಅಡಿಕೆ ಬಗ್ಗೆ ಬೆಳೆಗಾರರು ಬಹಳ ಚಿಂತಿತರಾಗಿದ್ದಾರೆ.

ವಿದೇಶದಿಂದ ಕಡಿಮೆ ಬೆಲೆಯ ಅಡಿಕೆಯನ್ನು ಆಮದು ಮಾಡಿ ಸ್ಥಳೀಯ ಉತ್ತಮ ಗುಣಮಟ್ಟದ ಅಡಿಕೆ ಜತೆಗೆ ಕಲಬೆರಕೆ ಮಾಡಿ ಇಡೀ ಅಡಿಕೆಯ ಮೌಲ್ಯವನ್ನೇ ಕಡಿಮೆಗೊಳಿಸುವ ವ್ಯವಸ್ಥಿತವಾದ ಜಾಲವೊಂದು ಕಾರ್ಯಾಚರಿಸುತ್ತಿರುವ ಬಲವಾದ ಗುಮಾನಿ ಇದೆ. ಹಾಗೆಂದು ಅಡಿಕೆ ಕಲಬೆರಕೆ ಹೊಸ ವಿಚಾರ ಅಲ್ಲ. ಆದರೆ ಹಿಂದೆ ಚಿಕ್ಕಮಟ್ಟದಲ್ಲಿ ನಡೆಯುತ್ತಿದ್ದ ಈ ವ್ಯವಹಾರ ಈಗ ಅಗಾಧವಾಗಿ ಬೆಳೆದಿದ್ದು, ಕರಾವಳಿಯ ಅಡಿಕೆ ಮಾರುಕಟ್ಟೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕಲಬೆರಕೆ ವ್ಯವಹಾರ ಇದೇ ರೀತಿ ಮುಂದುವರಿದರೆ ಅಡಿಕೆ ಮಾರುಕಟ್ಟೆ ಇನ್ನಷ್ಟು ಆತಂಕದ ಸ್ಥಿತಿಯನ್ನು ಎದುರಿಸಬೇಕಾದೀತು.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು, ಉಡುಪಿ ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳು ಮತ್ತು ಕೇರಳದಲ್ಲಿ ಅಡಿಕೆ ಬೆಳೆಯುತ್ತಾರೆ. ದಕ್ಷಿಣ ಕನ್ನಡದ ಅಡಿಕೆಯ ಗುಣಮಟ್ಟ ಅತ್ಯುತ್ತಮವಾಗಿದ್ದು, ಇದಕ್ಕೆ ಗುಜರಾತ್‌ ಸೇರಿದಂತೆ ಉತ್ತರದ ರಾಜ್ಯಗಳ ಬಹಳ ಬೇಡಿಕೆ ಇದೆ. ಇದೀಗ ಕರಾವಳಿಯ ಕಲಬೆರಕೆ ಅಡಿಕೆ ಗುಜರಾತ್‌ ಮಾರುಕಟ್ಟೆಗೂ ತಲುಪಿರುವುದು ಬೆಳೆಗಾರರ ಸಂಕಟಕ್ಕೆ ಕಾರಣ.

ವಿದೇಶದಿಂದ ಅಡಿಕೆ ಯಾವುದೇ ನಿಯಂತ್ರಣವಿಲ್ಲದೆ ಆಮದಾಗಲು ಕಾರಣ ಸಾರ್ಕ್‌ ಒಪ್ಪಂದ. ಈ ಒಪ್ಪಂದದ ಪ್ರಕಾರ ಸಾರ್ಕ್‌ ದೇಶಗಳ ನಡುವೆ ಕೃಷಿ ಉತ್ಪನ್ನಗಳನ್ನು ಆಮದು-ರಫ್ತು ಮಾಡಿಕೊಳ್ಳಲು ಮುಕ್ತ ಅವಕಾಶವಿದೆ. ಆಹಾರ ಬೆಳೆಗಳಿಗೆ ಈ ಒಪ್ಪಂದದಿಂದ ಪ್ರಯೋಜನವಾಗಬಹುದಾದರೂ ವಾಣಿಜ್ಯ ಬೆಳೆಗಳಿಗೆ ಇದು ಮಾರಕವಾಗಿ ಪರಿಣಮಿಸುತ್ತಿದೆ. ಈ ಒಪ್ಪಂದದಿಂದಾಗಿಯೇ ಕಾಳುಮೆಣಸು ಮಾರುಕಟ್ಟೆ ನೆಲಕಚ್ಚಿ ಈಗ ಯಾರೂ ಕಾಳುಮೆಣಸು ಬೆಳೆಯಲು ಉತ್ಸಾಹ ತೋರಿಸುತ್ತಿಲ್ಲ. ವಿದೇಶಗಳಿಂದ ಆಮದಾಗಲು ತೊಡಗಿದ ಬಳಿಕ ಕೆಜಿಗೆ ರೂ.650 ರಿಂದ ರೂ. 750 ಇದ್ದ ಕಾಳುಮೆಣಸು ಬೆಲೆ ಈಗ ರೂ.300ಕ್ಕಿಳಿದಿದೆ. ಅಡಿಕೆಯ ದರವೂ ಇದೇ ರೀತಿಯ ಸ್ಪರ್ಧೆಯನ್ನು ಎದುರಿಸುತ್ತಿದೆ. ಸ್ಥಳೀಯ ಉತ್ಕೃಷ್ಟ ಗುಣಮಟ್ಟದ ಅಡಿಕೆಗೆ ಈಗ ಸಿಗುವುದು ಕೆಜಿಗೆ 225ರಿಂದ 230 ರೂ. ಮಾತ್ರ. ಕನಿಷ್ಠ 350 ರೂ. ಸಿಕ್ಕಿದರೆ ಮಾತ್ರ ಕೃಷಿಕರಿಗೆ ಏನಾದರೂ ಲಾಭವಾಗುತ್ತದೆ. ಆದರೆ ಅಡಿಕೆ ಬೆಲೆ ಒಂದು ರೀತಿಯಲ್ಲಿ ಶೇರು ದರವಿದ್ದಂತೆ. ಅದು ಯಾರ ನಿಯಂತ್ರಣಕ್ಕೂ ಸಿಗುವುದಿಲ್ಲ. ಸಹಕಾರಿ ಸಂಸ್ಥೆಯೊಂದು ಅಡಿಕೆ ಬೆಲೆ ತೀರಾ ಕುಸಿದು ಬೀಳುವುದನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಆದರೆ ಅಡಿಕೆಯ ಬೆಲೆ ಹೆಚ್ಚಿಸುವುದು ಅದರ ನಿಯಂತ್ರಣದಲ್ಲಿಲ್ಲ.

ಕರಾವಳಿಯ ಅಡಿಕೆಯ ಬೆಲೆ ನಿಯಂತ್ರಣವಿರುವುದು ಗುಜರಾತ್‌ ವರ್ತಕರ ಕೈಯಲ್ಲಿ. ಇಲ್ಲಿಂದ ಗುಜರಾತ್‌ಗೆ ಕಳಪೆ ಗುಣಮಟ್ಟದ ಕಲಬೆರಕೆ ಅಡಿಕೆ ಕಡಿಮೆ ಬೆಲೆಗೆ ಹೋದರೆ ಮುಂದೆ ಇಲ್ಲಿನ ಉತ್ತಮ ಗುಣಮಟ್ಟದ ಅಡಿಕೆಗೆ ಬೆಲೆ ಸಿಗಲಿಕ್ಕಿಲ್ಲ ಎನ್ನುವ ಕಳವಳ ಅಡಿಕೆ ಬೆಳೆಗಾರರದ್ದು. ಇಂಡೋನೇಶ್ಯಾ, ಮಲೇಶ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಅಡಿಕೆ ಬೆಳೆಯುತ್ತಾರೆ. ಈ ದೇಶಗಳು ಸಾರ್ಕ್‌ ದೇಶಗಳಾದ ನೇಪಾಳ ಅಥವಾ ಬರ್ಮಾ ದೇಶಗಳ ಮೂಲಕ ಅಡಿಕೆಯನ್ನು ಭಾರತಕ್ಕೆ ರಫ್ತು ಮಾಡುತ್ತವೆ. ಒಪ್ಪಂದದ ಪ್ರಕಾರ ಸಾರ್ಕ್‌ ದೇಶಗಳಿಂದ ಬರುವ ಕೃಷಿ ಉತ್ಪನ್ನಗಳಿಗೆ ತಡೆಯೊಡ್ಡುವುದು ಅಸಾಧ್ಯವಾಗಿರುವುದರಿಂದ ಈ ವ್ಯವಹಾರ ನಿರಾತಂಕವಾಗಿ ಮುಂದುವರಿದಿದೆ. ನಿನ್ನೆ ಕಾಳುಮೆಣಸು, ಇಂದು ಅಡಿಕೆಯನ್ನು ಕಾಡಿದ ಒಪ್ಪಂದ ಕ್ರಮೇಣ ಇನ್ನಿತರ ವಾಣಿಜ್ಯ ಬೆಳೆಗಳನ್ನು ಕಾಡಬಹುದು.ಆದರೆ ಒಪ್ಪಂದವನ್ನು ರದ್ದುಪಡಿಸುವುದಾಗಲಿ, ಬದಲಾಯಿಸುವುದಾಗಲಿ ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ. ಸ್ಥಳೀಯ ಜನಪ್ರತಿನಿಧಿಗಳು ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನು ಸರಕಾರಕ್ಕೆ ಮನದಟ್ಟು ಮಾಡಿಕೊಟ್ಟು ಕಳಪೆ ಗುಣಮಟ್ಟದ ಅಡಿಕೆ ಆಮದಿಗೆ ಕಡಿವಾಣ ಹಾಕಲು ಪ್ರಯತ್ನಿಸಬೇಕು. ಅಡಿಕೆ ಮಾನ ಪೂರಾ ಹೋಗುವುದಕ್ಕಿಂತ ಮೊದಲು ಎಚ್ಚೆತ್ತುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಕಾಳುಮೆಣಸಿಗಾದ ಗತಿಯೇ ಅಡಿಕೆಗೂ ಆದೀತು. ಅಡಿಕೆ ಮೂರು ಜಿಲ್ಲೆಗಳ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅದರ ಬೆಲೆ ಕುಸಿದರೆ ಪರಿಣಾಮ ಇಡೀ ರಾಜ್ಯದ ಆರ್ಥಿಕತೆಯ ಮೇಲೂ ಆಗಬಹುದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಜ್ಯ ವಿಧಾನಮಂಡಲದ ಅಧಿವೇಶನ ರಜಾ ದಿನವಾದ ಎರಡನೇ ಶನಿವಾರವೂ ಸೇರಿ ಮೂರು ದಿನಗಳ ಕಾಲ ನಡೆದು ನಿರೀಕ್ಷೆಯಂತೆ ಪ್ರವಾಹ ಪರಿಹಾರವೇ ಪ್ರಮುಖವಾಗಿ ಚರ್ಚೆಯಾಗಿ ಸರಕಾರದ...

  • ಜೆರೆಮಿ ಕಾರ್ಬಿನ್‌ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ವಿರೋಧಿ ನಿಲುವು ಹೊಂದಿದ್ದಾರೆ ಹಾಗೂ ಬ್ರಿಟನ್‌ ಸಂಸತ್ತಿನಲ್ಲಿ ಭಾರತದ ವಿರುದ್ಧ ಗೊತ್ತುವಳಿಯನ್ನೂ...

  • ಕಪ್ಪುಹಣವನ್ನು ವಾಪಸು ತರುವ ವಾಗ್ಧಾನವನ್ನು 2014ರ ಚುನಾವಣೆಯಲ್ಲೇ ಮೋದಿ ನೀಡಿದ್ದರು. ಆದರೆ ಮೊದಲ ಅವಧಿಯಲ್ಲಿ ಈ ನಿಟ್ಟಿನಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ....

  • ತಮಿಳುನಾಡಿನ ಮಮ್ಮಲ್ಲಪುರಂನಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವಿನ ಶೃಂಗ...

  • ವಾಯುಸೇನೆ ಬತ್ತಳಿಕೆಯಲ್ಲಿ ಸುಖೋಯ್‌, ಮಿಗ್‌-21 ಬೈಸನ್‌ ಮತ್ತು ಜಾಗ್ವಾರ್‌ನಂಥ ಯುದ್ಧ ವಿಮಾನಗಳೇ ಪ್ರಮುಖವಾಗಿದ್ದವು. ಈಗ ರಫೇಲ್‌ ನಮ್ಮ ವಾಯು ಸೇನೆಯ ಪ್ರಮುಖ...

ಹೊಸ ಸೇರ್ಪಡೆ