ಬೆಂಗಳೂರಿಗೆ ಲಂಕಾ ಉಗ್ರರು ಕಟ್ಟೆಚ್ಚರ ಅಗತ್ಯ

Team Udayavani, May 7, 2019, 7:05 AM IST

ಲಂಕಾದಲ್ಲಿ ಈಸ್ಟರ್‌ ಹಬ್ಬದ ದಿನ 250ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿರುವ ಸರಣಿ ಆತ್ಮಾಹುತಿ ಸ್ಫೋಟಕ್ಕೆ ಭಾರತದ ನಂಟು ಇರುವ ಗುಮಾನಿ ಆರಂಭದಲ್ಲೇ ಇತ್ತು. ಇದೀಗ ಲಂಕಾದ ಸೇನಾ ಮುಖ್ಯಸ್ಥ ಮಹೇಶ್‌ ಸೇನಾನಾಯಕೆ ಬಾಂಬ್‌ಸ್ಫೋಟದ ರೂವಾರಿಗಳು ಬೆಂಗಳೂರು, ಕೇರಳ ಮತ್ತು ಕಾಶ್ಮೀರಕ್ಕೂ ಭೇಟಿ ನೀಡಿದ್ದಾರೆ ಎಂದು ಹೇಳುವ ಮೂಲಕ ಇದನ್ನು ದೃಢಪಡಿಸಿದ್ದಾರೆ.

ಈ ಉಗ್ರರು ಯಾವ ಉದ್ದೇಶದಿಂದ ಭಾರತಕ್ಕೆ ಬಂದಿದ್ದರು ಎನ್ನುವುದು ತನಿಖೆಯ ಬಳಿಕ ತಿಳಿಯಲಿದೆ. ಒಂದೋ ಅವರು ತರಬೇತಿಗಾಗಿ ಬಂದಿರಬಹುದು ಇಲ್ಲವೇ ಸಮಾನ ಮನಸ್ಕ ಉಗ್ರ ಸಂಘಟನೆಗಳು ಜತೆಗೆ ಸಂಪರ್ಕ ಸಾಧಿಸುವ ಸಲುವಾಗಿ ಬಂದಿರಬಹುದು ಎಂದು ಸದ್ಯಕ್ಕೆ ಊಹಿಸಲಾಗಿದೆ. ಉಗ್ರರ ಉದ್ದೇಶ ಏನೇ ಇದ್ದರೂ ಒಂದು ಭೀಕರ ಭಯೋತ್ಪಾದಕ ದಾಳಿಯ ಜತೆಗೆ ನಂಟು ಇದೆ ಎನ್ನುವುದು ಆಘಾತಕಾರಿ ವಿಚಾರ. ಅದರಲ್ಲೂ ಬೆಂಗಳೂರಿಗೂ ಉಗ್ರರು ಬಂದಿದ್ದರು ಎನ್ನುವುದನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ಗಂಭೀರವಾಗಿ ಪರಿಗಣಿಸಬೇಕು. ಬೆಂಗಳೂರು ಈಗಾಗಲೇ ಭಾರತದ ಐಟಿ ರಾಜಧಾನಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿದೆ. ಇಲ್ಲಿ ಇನ್ನೊಂದು ವಿಧ್ವಂಸಕ ಕೃತ್ಯ ನಡೆದರೆ ನಗರದ ಖ್ಯಾತಿಗೆ ಇನ್ನಿಲ್ಲದ ಹಾನಿಯಾಗಲಿದೆ.

ಲಂಕಾದ ಕೃತ್ಯವನ್ನು ತಾನೇ ನಡೆಸಿರುವುದಾಗಿ ಐಸಿಸ್‌ ಒಪ್ಪಿಕೊಂಡಿದೆ. ಅದರ ಹೆಜ್ಜೆ ಗುರುತು ಭಾರತದಲ್ಲಿ ಮೂಡಿ ಬಹಳ ಸಮಯವಾಗಿದೆ. ಕೇರಳದ ಕಾಸರಗೋಡು, ಕಣ್ಣೂರು ಮತ್ತಿತರ ಜಿಲ್ಲೆಗಳಿಂದ ಹಲವು ಮಂದಿ ಯುವಕರು ಐಸಿಸ್‌ ಸೇರಿರುವ ಸುದ್ದಿಗಳು ಹಿಂದೆ ಬಂದಿದ್ದವು. ಈ ಬಗ್ಗೆ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ ಐಸಿಸ್‌ ಪರವಾಗಿ ಒಲವುಳ್ಳ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದೆ. ಇದೇ ವೇಳೆ ಕೇರಳ ಪೊಲೀಸರು ಮತ್ತು ಎನ್‌ಐಎ ಸೇರಿಕೊಂಡು ಐಸಿಸ್‌ ಸಿದ್ಧಾಂತವನ್ನು ತಲೆಯಲ್ಲಿ ತುಂಬಿಕೊಂಡು ಅಡ್ಡದಾರಿ ಹಿಡಿಯಲು ಸಿದ್ಧರಾಗಿದ್ದ ಹಲವು ಯುವಕರ ಮನಪರಿವರ್ತನೆ ಮಾಡಿ ಮರಳಿ ಸಹಜ ಬದುಕಿಗೆ ಮರಳಿಸಿರುವ ಘಟನೆಗಳೂ ಸಂಭವಿಸಿವೆ.

ಕೇರಳ ಮಾತ್ರವಲ್ಲದೆ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಸೇರಿ ಇನ್ನೂ ಕೆಲವು ರಾಜ್ಯಗಳಲ್ಲಿ ಐಸಿಸ್‌ ಒಲವುಳ್ಳವರು ಇರುವುದು ಪತ್ತೆಯಾಗಿತ್ತು. ಇರಾಕ್‌ನಲ್ಲಿ ಈ ಉಗ್ರಪಡೆ ನಾಶವಾಗಿದೆ ಎಂದು ಹೇಳಲಾಗುತ್ತಿದ್ದರೂ, ಅದು ಅರೆದು ಕುಡಿಸಿರುವ ವಿಷದ ಪರಿಣಾಮ ಮಾತ್ರ ಇನ್ನೂ ಇಳಿದಿಲ್ಲ. ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಈಗಲೂ ಐಸಿಸ್‌ ಪರವಾದ ಒಲವುಳ್ಳವರು ಇದ್ದಾರೆ. ಐಸಿಸ್‌ನ ಸುಪ್ತ ಘಟಕಗಳು ಅಲ್ಲಲ್ಲಿ ಇವೆ ಎನ್ನುವ ಗುಪ್ತಚರ ಮಾಹಿತಿ ಆಗಾಗ ಲಭ್ಯವಾಗುತ್ತಿರುತ್ತದೆ ಹಾಗೂ ಇದರ ಆಧಾರದಲ್ಲಿ ಎನ್‌ಐಎ ದಾಳಿಗಳನ್ನೂ ನಡೆಸುತ್ತಿದೆ.

ಕಳೆದ ಐದು ವರ್ಷದಲ್ಲಿ ಕಾಶ್ಮೀರ ಹೊರತುಪಡಿಸಿದರೆ ದೇಶದ ಬೇರೆಲ್ಲೂ ಬಾಂಬ್‌ ಸ್ಫೋಟಗಳು ನಡೆದಿಲ್ಲ ನಿಜ. ಆದರೆ ಹಾಗೆಂದು ನಾವು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಭಯೋತ್ಪಾದನೆ ಎನ್ನುವುದು ಯಾವುದೇ ಕ್ಷಣದಲ್ಲೂ ತಲೆಎತ್ತುವ ಪಿಡುಗು. ಅದು ಅವಕಾಶಕ್ಕಾಗಿ ಹೊಂಚು ಹಾಕುತ್ತಿರಬಹುದು. ಅದರಲ್ಲೂ ಅಸ್ತವ್ಯಸ್ತವಾಗಿ ಬೆಳೆದಿರುವ ಮತ್ತು ಕಿಕ್ಕಿರಿದು ತುಂಬಿರುವ ನಮ್ಮ ಮಹಾನಗರಗಳು ಭಯೋತ್ಪಾದನೆಗೆ ಸುಲಭ ತುತ್ತಾಗುವ ಸಾಧ್ಯತೆ ಇರುವುದರಿಂದ ಗುಪ್ತಚರ ಪಡೆ ಮತ್ತು ಭದ್ರತಾ ವ್ಯವಸ್ಥೆಗಳು ಕಟ್ಟೆಚ್ಚರದಿಂದ ಇರುವುದು ತೀರಾ ಅಗತ್ಯ.

2014ರಲ್ಲಿ ಐಸಿಸ್‌ ಉತ್ತರ ಮತ್ತು ದಕ್ಷಿಣ ಭಾರತದ ಭೂಪಟವೊಂದನ್ನು ಬಿಡುಗೊಳಿಸಿ ಅದನ್ನು ಇಸ್ಲಾಮಿಕ್‌ ಸ್ಟೇಟ್ ಆಫ್ ಖೋರಸಾನ್‌ ಎಂದು ಬಣ್ಣಿಸಿತ್ತು. ಈ ಭೂಪಟದಲ್ಲಿರುವುದು ಹಿಂದೆ ಮುಸ್ಲಿಮರು ಆಳಿದ ಭೂಪ್ರದೇಶಗಳು. ಸದ್ಯದ ಪರಿಸ್ಥಿತಿಯಲ್ಲಿ ಭಾರತವನ್ನು ಭೋರಸಾನ್‌ ಮಾಡುವುದು ಅಸಾಧ್ಯವಾದರೂ ಶ್ರೀಲಂಕಾದಂಥ ಘಟನೆಗಳ ಮೂಲಕ ಜನರಲ್ಲಿ ಭೀತಿ ಮೂಡಿಸಲು ಪ್ರಯತ್ನಿಸುವ ಸಾಧ್ಯತೆ ಇಲ್ಲದಿಲ್ಲ. 130 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಪ್ರತಿಯೊಬ್ಬರ ಹಿಂದೆ ಪೊಲೀಸ್‌ ಸಿಬಂದಿಯನ್ನಾಗಲಿ, ಗೂಢಚಾರರನ್ನಾಗಲಿ ಕಾವಲಿಡುವುದು ಸಾಧ್ಯವಾಗುವ ಮಾತಲ್ಲ. ಆದರೆ ಗುಪ್ತಚರ ಪಡೆಯನ್ನು ಇನ್ನಷ್ಟು ಬಲಿಷ್ಠ ಹಾಗೂ ಸಶಕ್ತಗೊಳಿಸುವ ಮೂಲಕ ಉಗ್ರರ ಹೆಜ್ಜೆಜಾಡನ್ನು ಮೊದಲೇ ಪತ್ತೆಹಚ್ಚಬಹುದು.ಹಾಗೆಂದು ನಮ್ಮ ಗುಪ್ತಚರ ಪಡೆ ದುರ್ಬಲವಾಗಿದೆ ಎಂದಲ್ಲ. ಲಂಕಾದಲ್ಲಿ ವಿಧ್ವಂಸಕ ಕೃತ್ಯ ನಡೆಯಲಿದೆ ಎಂದು ವಾರಕ್ಕೂ ಮೊದಲೇ ಗುಪ್ತಚರ ಪಡೆ ಎಚ್ಚರಿಕೆ ನೀಡಿತ್ತು. ಆದರೆ ಲಂಕಾ ಸರಕಾರ ಇದನ್ನು ನಿರ್ಲಕ್ಷಿಸಿದ ಪರಿಣಾಮ ಭೀಕರ ಘಟನೆ ಸಂಭವಿಸಿದೆ. ಗುಪ್ತಚರ ಪಡೆಯನ್ನು ಇನ್ನಷ್ಟು ಆಧುನೀಕರಣಗೊಳಿಸಿ ಕಟ್ಟೆಚ್ಚರದ ಸ್ಥಿತಿಯಲ್ಲಿಡಬೇಕು. ದೇಶದಲ್ಲಿ ಸಂಭವಿಸುವ ಇನ್ನೊಂದು ವಿಧ್ವಂಸಕಕಾರಿ ಕೃತ್ಯ ಬಹಳ ದುಬಾರಿಯಾದೀತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ