ಭಯೋತ್ಪಾದನೆ ವಿರುದ್ಧ ಹೋರಾಟ ನಿಲ್ಲಬಾರದು

Team Udayavani, May 3, 2019, 6:00 AM IST

ಪಾಕಿಸ್ತಾನದ ಕಡು ಪಾತಕಿ ಉಗ್ರ ಮೌಲಾನ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವಲ್ಲಿ ಭಾರತ ಕೊನೆಗೂ ಸಫ‌ಲವಾಗಿದ್ದು, ಇದು ಕೇಂದ್ರ ಸರ್ಕಾರದ ಚತುರ ರಾಜತಾಂತ್ರಿಕ ನಡೆಗೆ ಸಿಕ್ಕಿದ ಬಹುದೊಡ್ಡ ಯಶಸ್ಸು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಮೂರು ದಶಕಗಳಿಂದ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದ ಅಜರ್‌ನನ್ನು ಕಟ್ಟಿ ಹಾಕುವುದು ಪಾಲಿಗೆ ಅನಿವಾರ್ಯವಾಗಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಿತ್ಯ ರಕ್ತದೋಕುಳಿ ಹರಿಯಲು ಕಾರಣನಾಗಿದ್ದ ಅಜರ್‌ ಹಾಗೂ ಅವನ ಉಗ್ರ ಸಂಘಟನೆ ಜೈಶ್‌-ಎ-ಮುಹಮ್ಮದ್‌ ಎಂದೋ ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆಯಾಗಬೇಕಿತ್ತು. ಆದರೆ ಇದಕ್ಕೆ ತಡೆಯಾಗಿದ್ದದ್ದು ಪಾಕಿಸ್ತಾನದ ಪರಮಾಪ್ತ ಮಿತ್ರ ಚೀನ. ಭಾರತದ ನಾಲ್ಕು ಪ್ರಯತ್ನಗಳನ್ನು ಚೀನ “ತಾಂತ್ರಿಕ ಕಾರಣ’ದ ನೆಪವೊಡ್ಡಿ ತಡೆ ಹಿಡಿದಿತ್ತು. ಆದರೆ ಐದನೇ ಪ್ರಯತ್ನದಲ್ಲಿ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವವನ್ನು ಚೀನ ವಿರೋಧಿಸದಂಥ ಪರಿಸ್ಥಿತಿಯನ್ನು ಭಾರತ ಸೃಷ್ಟಿಸಿತ್ತು. ಭಾರತದ ಈ ಪ್ರಯತ್ನದಲ್ಲಿ ಬೆಂಗಾವಲಾಗಿ ನಿಂತದ್ದು ಫ್ರಾನ್ಸ್‌, ಅಮೆರಿಕ ಮತ್ತು ಬ್ರಿಟನ್‌. ಅಂತೆಯೇ ಚೀನ ಹೊರತುಪಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಳಿದ ಖಾಯಂ ಸದಸ್ಯ ರಾಷ್ಟ್ರಗಳು ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ನಿರ್ಣಯದ ಪರವಾಗಿ ಇದ್ದವು.

ಈ ಸಲವೂ ಚೀನ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ನಿರ್ಣಯವನ್ನು ವಿರೋಧಿಸಿದರೆ ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ಈ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬಹಿರಂಗ ಚರ್ಚೆಗೆ ಹಾಕುವ ತೀರ್ಮಾನ ಮಾಡಿದ್ದವು. ಬಹಿರಂಗ ಚರ್ಚೆಯಲ್ಲಿ ಇಡೀ ಜಗತ್ತಿನೆದುರು ತಾನು ಒಂಟಿಯಾಗಬೇಕಾಗುತ್ತದೆ ಎಂಬ ಭೀತಿಯಿಂದ ಚೀನ ತಾಂತ್ರಿಕ ಕಾರಣದ ನೆಪವನ್ನು ಹಿಂತೆಗೆದುಕೊಂಡಿತು. ಜೊತೆಗೆ ವಿವಿಧ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಭಾರತ ಹಾಕಿದ ಒತ್ತಡ, ಬಾಲಕೋಟ್‌ ವಾಯುದಾಳಿ ನಡೆದ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸಮುದಾಯ ಭಯೋತ್ಪಾದನೆಯತ್ತ ಶೂನ್ಯ ಸಹನೆ ಧೋರಣೆಯನ್ನು ವ್ಯಕ್ತಪಡಿಸಿದ್ದನ್ನು ಗಮನಿಸಿದ ಬಳಿಕ ಚೀನ ಈ ಸಲ ವಿರೋಧ ವ್ಯಕ್ತಪಡಿಸುವ ಸ್ಥಿತಿಯಲ್ಲಿ ಇರಲಿಲ್ಲ. ಒಂದು ವೇಳೆ ವಿರೋಧಿಸಿದ್ದರೆ ಜಾಗತಿಕವಾಗಿ ಅದು ಒಂಟಿಯಾಗುತ್ತಿತ್ತು.ಹೀಗೆ ಮನಸ್ಸಿಲ್ಲದ ಮನಸ್ಸಿನಿಂದ ಚೀನ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದೆ.

ಇತ್ತ ಆರ್ಥಿಕವಾಗಿ ಕಂಗಾಲಾಗಿರುವ ಪಾಕಿಸ್ತಾನಕ್ಕೂ ಅಜರ್‌ನನ್ನು ಜಾಗತಿಕ ಉಗ್ರನೆಂದು ಒಪ್ಪಿಕೊಳ್ಳುವ ಅನಿವಾರ್ಯತೆ ಇತ್ತು. ಒಪ್ಪಿಕೊಳ್ಳದಿದ್ದರೆ ಹಣಕಾಸು ಕಾರ್ಯಪಡೆ (ಫೈನಾನ್ಶಿಯಲ್‌ ಆ್ಯಕ್ಷನ್‌ ಟಾಸ್ಕ್ ಫೋರ್ಸ್‌) ಪಾಕ್‌ನ್ನು ಕಪ್ಪುಪಟ್ಟಿಗೆ ಸೇರಿಸಲು ಮುಂದಾಗಿತ್ತು. ಕಪ್ಪುಪಟ್ಟಿಗೆ ಸೇರಿದ ಬಳಿಕ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಕೊಡಲುದ್ದೇಶಿಸಿರುವ ಸಾಲದ ಸಹಿತ ಯಾವುದೇ ಅಂತರಾಷ್ಟ್ರೀಯ ನೆರವು ಸಿಗುವುದಿಲ್ಲ. ಹೀಗಾದರೆ ಈಗಾಗಲೇ ದಿವಾಳಿ ಹಂತದಲ್ಲಿರುವ ದೇಶದ ಪರಿಸ್ಥಿತಿ ಸಂಪೂರ್ಣ ಹದಗೆಡುವ ಸಾಧ್ಯತೆಯಿತ್ತು. ಇದನ್ನು ಮನಗಂಡೇ ಈ ಸಲ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ನಿರ್ಣಯವನ್ನು ವಿರೋಧಿಸುವುದು ಬೇಡ ಎಂದು ಪಾಕಿಸ್ತಾನ ಚೀನವನ್ನು ಕೇಳಿಕೊಂಡಿತ್ತು.

ಹಾಗೆಂದು ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಿದ ಮಾತ್ರಕ್ಕೆ ಭಯೋತ್ಪಾದನೆಯ ಸಮಸ್ಯೆ ಬಗೆಹರಿಯಿತು ಅಥವಾ ಕನಿಷ್ಠ ಅವನ ಅವನ ಉಪಟಳ ಕೊನೆಗೊಂಡಿತು ಎಂದು ಭಾವಿಸಬೇಕಿಲ್ಲ.ಎಲ್ಲಿಯ ತನಕ ಪಾಕಿಸ್ಥಾನ ತನ್ನ ನೆಲದಲ್ಲಿ ಉಗ್ರವಾದ ಹರಡಲು ಅವಕಾಶ ಕೊಡುವುದಿಲ್ಲವೋ ಅಷ್ಟರ ತನಕ ಜಗತ್ತಿಗೆ ಉಗ್ರರ ಕಾಟ ತಪ್ಪಿದ್ದಲ್ಲ. ಲಷ್ಕರ್‌-ಎ-ತೊಯ್ಯಬಾ ಉಗ್ರ ಸಂಘಟನೆಯ ಸ್ಥಾಪಕ ಹಫಿಜ್‌ ಸಯೀದ್‌ನನ್ನು ವಿಶ್ವಸಂಸ್ಥೆ ಕೆಲವರ್ಷಗಳ ಹಿಂದೆಯೇ ಜಾಗತಿಕ ಉಗ್ರನೆಂದು ಘೋಷಿಸಿದೆ. ಆದರೆ ಇದರಿಂದ ಅವನ ಚಟುವಟಿಕೆಗೆ ಯಾವುದೇ ರೀತಿಯ ಅಡ್ಡಿಯಾಗಿಲ್ಲ. ಈಗಲೂ ಅವನು ಪಾಕಿಸ್ತಾನ‌ದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾನೆ, ರ್ಯಾಲಿಗಳಲ್ಲಿ ಭಾಷಣ ಮಾಡುತ್ತಾ ಭಾರತದ ವಿರುದ್ಧ ವಿಷ ಕಾರುತ್ತಿದ್ದಾನೆ ಹಾಗೂ ತನ್ನ ಉಗ್ರ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸುತ್ತಿದ್ದಾನೆ. ಅದೇ ರೀತಿ ಅಮೆರಿಕ ಮತ್ತು ಭಾರತ ಜಾಗತಿಕ ಉಗ್ರನೆಂದು ಘೋಷಿಸಿರುವ ಭೂಗತ ಜಗತ್ತಿನ ಪಾತಕಿ ದಾವೂದ್‌ ಇಬ್ರಾಹಿಂನನ್ನು ಕೂಡಾ ಪಾಕಿಸ್ಥಾನ ಸರಕಾರ ಬಿಗು ಭದ್ರತೆ ನೀಡಿ ಕಾಪಾಡಿಕೊಂಡಿದೆ. ಯಾವ ಅಂತರಾಷ್ಟ್ರೀಯ ಒತ್ತಡದಿಂದಲೂ ಈ ಉಗ್ರರನ್ನು ಕಟ್ಟಿಹಾಕಲು ಸಾಧ್ಯವಾಗಿಲ್ಲ. ಹೀಗಿರುವಾಗ ಅಜರ್‌ನ ಚಟುವಟಿಕೆಗಳಿಗೆ ಪಾಕ್‌ ಸರಕಾರ ಕಡಿವಾಣ ಹಾಕಬಹುದು ಎಂದು ನಿರೀಕ್ಷಿಸು ವುದು ದುಬಾರಿಯಾದೀತು. ತನ್ನ ನೆಲದಿಂದ ಉಗ್ರವಾದ ಮೂಲೋತ್ಪಾಟನೆಯಾಗ ಬೇಕೆಂಬ ಪ್ರಾಮಾಣಿಕ ಇಚ್ಛೆ ಪಾಕಿಸ್ತಾನಕ್ಕೆ ಇದ್ದರಷ್ಟೇ ಇಂಥ ನಿಷೇಧಗಳಿಂದ ಏನಾ ದರೂ ಪ್ರಯೋಜನವಾಗಬಹುದಷ್ಟೆ. ಹೀಗಾಗಿ ಸದ್ಯಕ್ಕೆ ನಾವು ರಾಜತಾಂತ್ರಿಕ ನಡೆಯಲ್ಲಿ ಮಾತ್ರ ಗೆದ್ದಿದ್ದೇವೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬಹಳಷ್ಟು ಸಾಧಿಸಬೇಕಾದದ್ದು ಇನ್ನೂ ಬಹಳಷ್ಟಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಟ್ರಂಪ್‌ ಭೇಟಿಯ ವೇಳೆಯಲ್ಲೇ, ಸಿಎಎ-ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯು ಏಕಾಏಕಿ ಹಿಂಸಾಚಾರಕ್ಕೆ ತಿರುಗಿರುವುದರ...

  • ಪ್ರಸ್ತುತ 18 ವರ್ಷ ಪ್ರಾಯವಾದವರು ಸಿಗರೇಟು ಅಥವಾ ಬೇರೆ ಯಾವುದೇ ತಂಬಾಕು ಉತ್ಪನ್ನಗಳನ್ನು ಅಂಗಡಿಯಿಂದ ಖರೀದಿಸಿ ಸೇವಿಸಬಹುದು. ಈ ವಯೋಮಿತಿಯನ್ನು 21 ವರ್ಷಕ್ಕೇರಿಸಿ...

  • ರಾಜತಾಂತ್ರಿಕವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಮೋದಿ ಮತ್ತು ಟ್ರಂಪ್‌ ನಡುವೆ ಆತ್ಮೀಯತೆಯ ಸೆಲೆಯೊಂದು ಇದೆ. ಇದು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗುಣಾತ್ಮಕವಾದ...

  • ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಗಳಲ್ಲಿ ಅನೇಕ ಬಾರಿ ಪಾಕ್‌ ಪರವಾದ ಘೋಷಣೆ, ಪಾಕ್‌ ಗುಣಗಾನಗಳು ನಡೆದಿರುವುದು ಪ್ರತಿಭಟನೆಯ ನೈಜ ಉದ್ದೇಶವನ್ನು ಪ್ರಶ್ನಿಸುವಂತೆ...

  • ಹಲವು ಪ್ರಮುಖ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿ ರಾಕೇಶ್‌ ಮಾರಿಯಾ ಅವರ ದಕ್ಷತೆ ಬಗ್ಗೆ ಯಾರೂ ಅನುಮಾನ ಪಡುವಂತಿಲ್ಲ. ಭಯೋತ್ಪಾದನಾ ಪ್ರಕರಣಗಳ...

ಹೊಸ ಸೇರ್ಪಡೆ