Ayodhya Special: ಶ್ರೀರಾಮಚಂದ್ರನ ತೃತೀಯ ವನವಾಸ ಈಗ ಸಂಪನ್ನ!

ಮೊದಲು ಸೀತೆ ಪ್ರಾಪ್ತಿ, ಬಳಿಕ ರಾಜ್ಯ ಪ್ರಾಪ್ತಿ, ಇದೀಗ ಜನ್ಮಭೂಮಿ ಪ್ರಾಪ್ತಿ

Team Udayavani, Jan 22, 2024, 11:54 AM IST

Ayodhya Special: ಶ್ರೀರಾಮಚಂದ್ರನ ತೃತೀಯ ವನವಾಸ ಈಗ ಸಂಪನ್ನ!

ಮೊದಲು ವಿಶ್ವಾಮಿತ್ರರ ಜತೆ ವನದಲ್ಲಿ ಯಜ್ಞ ರಕ್ಷಣೆ, ಸೀತಾ ಪ್ರಾಪ್ತಿ. ಎರಡನೆಯದು ಹದಿನಾಲ್ಕು ವರ್ಷ ವನವಾಸ, ಸೀತಾ ಪ್ರಾಪ್ತಿ, ರಾಜ್ಯ ಪ್ರಾಪ್ತಿ. ಇದೀಗ ಶ್ರೀರಾಮಮಂದಿರದಲ್ಲಿ ಮರಳಿ ಸ್ಥಾಪನೆ, ಮರಳಿ ಪಟ್ಟ. ಹೀಗೆ ಈ ಕಾಲದವರೆಗೆ ಬೆಳೆದ ರಾಮಕಥೆಯು ಮೂರು ಚಕ್ರಗಳಿಂದ ಕೂಡಿದೆ. ಅದೇ ಬೆಳೆಯುವ ಮಹಾಕಾವ್ಯ. ಕಳೆದುಕೊಂಡುದನ್ನು ಪಡೆಯುವುದು ಪ್ರತ್ಯಭಿಜ್ಞೆ ಎಂದು ಶೈವ ಪ್ರತ್ಯಭಿಜ್ಞಾದರ್ಶನದ ತಾತ್ಪರ್ಯ. ಹೀಗೆ ರಾಮಪಟ್ಟಾಭಿಷೇಕವು, ಮಂದಿರ ನಿರ್ಮಾಣವು ಶಿವರಾಮ ಪ್ರಾಪ್ತಿಯೂ ಹೌದು.

ಅಯೋಧ್ಯಾ ನಗರೀಧನ್ಯಾ
ಯಾ ದದರ್ಶ ಜಯೋಜ್ವಲಮ್‌||
ಸೀತಾತೃಪ್ತಂ ಲಕ್ಷಪ್ರಾಪ್ತಮ್‌ |
ಶ್ರೀರಾಮಂ ಪುನರಾಗತಮ್‌ |
ಧನ್ಯಃ ತಪಸ್ವೀ ಭರತಃ
ಸೌಭ್ರಾತ್ರಾ ವಿಷ್ಟ ಮಾನಸಃ
ರಾಜಪೀಠಮನಾರುಹ್ಯ
ಯೋ ಭೂದ್ರಾಜ್ಯಧುರಂಧರಃ

ಹೌದು. ಹದಿನಾಲ್ಕು ವರ್ಷಗಳ ವನವಾಸ ಮುಗಿದಿದೆ. ರಾಮರಥದ ಚಕ್ರ ತಿರುತಿರುಗಿ ಸುದರ್ಶನವಾಗಿ, ಅಯೋಧ್ಯೆಗೆ ಮರಳಿದೆ. ಈಗ ಈ ಸೀತಾರಾಮರ “ನಿಜ’ ಪಟ್ಟಾಭಿಷೇಕ, ಪ್ರಾಣಪ್ರತಿಷ್ಠೆ. ಕೈಕೆ, ಶೂರ್ಪನಖೀ, ಕನಕಮೃಗ, ಕನಕಲಂಕಾಧೀಶ ದಶಕಂಠರಿಂದ ಕನಕಲಂಕೆಯ ಸೆರೆಯಾಗಿದ್ದ ಜಾನಕಿಗೆ ಪರೀಕ್ಷೆ ಮತ್ತು ಬಿಡುಗಡೆಯಾಗಿದೆ. ಇನ್ನು ಪುಷ್ಪಕವೇ ಮಾರ್ಗ. ಸೀತಾ ಚರಿತ್ರ ಪೌಲಸ್ತ್ಯ ವಧವೆಂದೂ ಹೆಸರಿರುವ ಶ್ರೀಮದ್ರಾಮಾಯಣ ಕಾವ್ಯವು ಒಂದು ಚಕ್ರ ಅಯನ. ಹುಟ್ಟು- ಅಗಲಿಕೆ- ಕಷ್ಟ- ಶೋಧ- ಕಳಕೊಳ್ಳುವಿಕೆ- ಪ್ರಾಪ್ತಿ ಇದೇ ಷಟ್ಕಾಂಡ ರಾಮಾಯಣ. ಇದರ ಕೊನೆಯ ಭಾಗದಲ್ಲಿ ಬರುವ ಶ್ರೀರಾಮನ ಅಯೋಧ್ಯಾ ಆಗಮನ, ಇದೀಗ ಪುರಾಣದ ಪುನರಾವರ್ತನೆ. ಯಾವುದೂ ಹೊಸತಲ್ಲ, ಎಲ್ಲವೂ ಹಳೇ ಹೊಸತು ಪುರಾ-ನವ. ಅದೇ ಅಯನ-ಪ್ರಯಾಣ. ರಾಮನೇ ಸತತ ಪಥಿಕ. ರಾಮಾ ರಾಮಾ ಎಂಬುದೇ ಶೈವ ಪ್ರತ್ಯಭಿಜ್ಞಾ ಪ್ರಜ್ಞೆ-ಮರಳಿ ಪಡೆಯುವಿಕೆ. ಪರಾತ್ಪರ ಮಹಾಕವಿ, ಕವಿತಾ ಶಾಖೆಯನ್ನೇರಿದ ಕವಿಕೋಗಿಲೆ, ಕವಿ ಕ್ರೌಂಚ.

ಕೂಜಂತಂ ರಾಮರಾಮೇತಿ
ಮಧುರಂ ಮಧುರಾಕ್ಷರಂ||
ಆರುಹ್ಯ ಕವಿತಾಶಾಖಾಂ
ವಂದೇ ವಾಲ್ಮೀಕಿ ಕೋಕಿಲಂ||

ಇಂತಹ ವಿಶ್ವವಿರಳ ಕವಿ, ರಾಮನ ಮರಳಿ ಬರುವಿಕೆಯನ್ನು ಅತಿರೇಕ, ಭಾವುಕತೆ ಇಲ್ಲದೆ ಚಿತ್ರಿಸಿದ್ದಾನೆ. ಇಂತಹ ನೈಜ್ಯ ಮ್ಯಾಟರ್‌ ಆಫ್‌ ಫ್ಯಾಕ್ಟ್, ಅಂತಹ ಮಹಾಕವಿಗೆ ಪ್ರಾಚೇತಸನಿಗೆ ಮಾತ್ರ ಸಾಧ್ಯ. ದೌಷ್ಟé ದಶಮುಖನ ವಧೆ ಆಗಿದೆ. (ರಾವಣ-  ತ್ವವು ಮರುಹುಟ್ಟಿಗೆ ಕಾಯುತ್ತಿರಬಹುದು). ವಿಭೀಷಣ ಪಟ್ಟ, ಸೀತೆಗೆ, ರಾಮನಿಗೂ, ಲಕ್ಷ್ಮಣನಿಗೂ ಒದಗಿದ ದಂಡಕಾರಣ್ಯ ಅತ್ತ ಭರತನಿಗೂ ಶತ್ರುಘ್ನರಿಗೂ ವನವಾಸ ಮುಗಿದಿದೆ. ಅಗ್ನಿ ಪರೀಕ್ಷೆಯಲ್ಲಿ ದೇವತೆಗಳೂ ಸೀತಾಪರಿಶುದ್ಧಿಯನ್ನು ಹೇಳಿದ್ದಾರೆ. ಪಿತೃಲೋಕದಿಂದ ಕಾಣಿಸಿದ ದಶರಥನೇ ಒಪ್ಪಿದ್ದಾನೆ. ಅದೆಷ್ಟು ರುದ್ರ ರಮಣೀಯವಾಗಿದೆ.

“ಅದ್ಯ ದುಃಖಾತ್‌ ವಿಮುಕ್ತೋಹಂ’.. ನನ್ನ ದುಃಖ ನಿವೃತ್ತಿ  ಯಾಯಿತು, ನಿನ್ನ ಮಾತು ಉಳಿಸು, ಪ್ರತಿಜ್ಞೆ ಪೂರೈಸಿದ್ದೀ (ಪ್ರತಿಜ್ಞಾ ಸಫಲಾ ಕೃತಃ)’ ಲಕ್ಷ್ಮಣ ನೀನು ಸೀತಾರಾಮರ ಸೇವೆಯಿಂದ ಧರ್ಮ, ಕೀರ್ತಿಗಳನ್ನು ಸಂಪಾದಿಸಿದ್ದಿ(ಆವಾಪ್ತಂ ಧರ್ಮಚರಣಂ ಯಶಶ್ಚ ವಿಪುಲಂ ತ್ವಯಾ). ರಾಮನು ದೈವತಂ ಪರಂ. ಆದರೆ ತಾನು ಕೇವಲ ಮನುಷ್ಯ, ದಶರಥನ ಮಗ ಎಂದು ರಾಮನ ವಚನವಿದೆಯಷ್ಟೆ..

ಆತ್ಮಾನಂ ಮಾನುಷಂ ಮನ್ಯೆà
ರಾಮಂ ದಶರಥಾತ್ಮಜಂ||

ವನವಾಸಕ್ಕೆ ಕಳಿಸಿದ ದಶರಥನಿಂದಲೇ ಅಯೋಧ್ಯಾ ಪ್ರವೇಶಕ್ಕೆ, ನಿಜಪಟ್ಟಕ್ಕೆ ವೇದಿಕೆ ಸಿದ್ಧವಾಗಿದೆ. ನಿಜವನ್ನೆ ಪವಾಡದ ಭಾಷೆಯಲ್ಲಿ ವಾಲ್ಮೀಕಿ ಮಾತ್ರ ಹೀಗೆ ಹೇಳಬಲ್ಲ. ವಿಜಯಶಾಲಿಯಾದ ಶ್ರೀರಾಮನಿಗೆ ಸತ್ಕಾರ ಮಾಡಲು ವಿಭೀಷಣನು ಉಪಕ್ರಮಿಸುತ್ತಾನೆ. ಶ್ರೀರಾಮನು ಅದನು ಸ್ವೀಕರಿಸದೆ “ನನಗಾಗಿ ಚಿಂತಿಸುತ್ತಿರುವ ಭರತನನ್ನು ಕಾಣದೆ ಈ ಸಮ್ಮಾನವನ್ನು ಸ್ವೀಕಾರ ಮಾಡಲಾರೆ’ ಎಂದು ನಿರಾಕರಿಸುತ್ತಾನೆ. ತನಗಾಗಿ ಹೋರಾಡಿದ ವಾನರರನ್ನು ಸತ್ಕರಿಸುವಂತೆ ಸೂಚಿಸುತ್ತಾನೆ. ಕಪಿಗಳನ್ನು ತಮ್ಮ ಊರಿಗೆ ತೆರಳಿರೆಂದು ಬೀಳ್ಕೊಡುವ ಮಾತನ್ನು ಆಡಿದಾಗ ಅವರು ಹೇಳಿದ್ದು :ನಾವು ನಿನ್ನ ಪಟ್ಟಾಭಿಷೇಕವನ್ನು ನೋಡಲು ಕಾತರರು, ಅಷ್ಟೇ ಅಲ್ಲ ನಿನ್ನ ತಾಯಿ ಕೌಸಲ್ಯಾ ದೇವಿಯನ್ನು ಕಾಣುವ ಅಭಿಲಾಷೆ ಇದೆ ಎನ್ನುವರು. ಶ್ರೀರಾಮನಂತಹ ಮಾನವ ದೇವರನ್ನು ಪಡೆದ ಆ ತಾಯಿಯನ್ನು ಕಾಣುವ ಬಯಕೆ ಆ ಕಪಿಗಳದ್ದು. ಅರ್ಥಾತ್‌ ಪರಮಜ್ಞಾನಿಗಳದ್ದು.

ಸೀತೆ, ಲಕ್ಷ್ಮಣ, ಸುಗ್ರೀವ, ವಿಭೀಷಣ ಈ ಬಳಗ ಸಹಿತ ಪುಷ್ಪಕ ವಿಮಾನವನ್ನು ಏರಿದ ಶ್ರೀರಾಮನು ಲಂಕಾದ್ವೀಪ ಯುದ್ದಭೂಮಿಗಳನ್ನು ಸೀತೆಗೆ ತೋರಿಸುತ್ತಿರುವುದು ಮುಂದೆ ಮೈನಾಕ ಪರ್ವತ, ಕಿಷ್ಕಿಂದೆಯನ್ನು ಕಾಣಿಸುವುದು ವಿಮಾನ ಪ್ರಯಾಣದ ಅತ್ಯಂತ ಸಹಜ ಚಿತ್ರಣ. ಅಲ್ಲಿಯೇ ಇನ್ನೊಂದು
ವಿಶಿಷ್ಟವಾದ ಸೀತಾ ಚರಿತ್ರೆ ಕಾಣಿಸುತ್ತಿದೆ. ಕಿಷ್ಕಿಂಧೆಯ ಕಪಿ ಸ್ತ್ರೀಯರು ಅಯೋಧ್ಯೆಗೆ ಬರಲಿ ಎಂಬ ಸೀತೆಯ ಆಶಯ-ಇದು ರಾಮಾಯಣದ ನೂರಾರು ಸೂಕ್ಷ್ಮ
“ಮಹಾಪ್ರತಿಮೆ’ಗಳಲ್ಲಿ ಒಂದು. ಮುಂದೆ ಶ್ರೀರಾಮನು ಋಷ್ಯಮೂಕ, ಪಂಪಾಸರಸ್ಸು, ಜನಸ್ಥಾನ, ಜಟಾಯು- ರಾವಣರ ಯುದ್ದದ ಸ್ಥಳ, ತಾವು ವಾಸಿಸಿದ್ದ ಪಂಚವಟಿಯ ಪರ್ಣಶಾಲೆ, ಗೋದಾವರಿ ನದಿ, ಅಗಸ್ತ್ಯಾಶ್ರಮ, ಶೃಂಗಿ ಬೇರಪುರ, ಗಂಗಾತೀರಗಳನ್ನು ಕಾಣಿಸುವುದು, ಭರದ್ವಾಜ ಮುನಿಗಳನ್ನು ಸಂದರ್ಶಿಸುವುದು-ಶ್ರೀರಾಮನು ತಾನು ನಡೆದು ಬಂದ ದಾರಿಯನ್ನು ಮರೆತಿಲ್ಲ ಎಂಬುದರ ದ್ಯೋತಕ. ಆಗ ಶ್ರೀರಾಮ ಭರದ್ವಾಜನಲ್ಲಿ ಕೇಳಿದ ವರ “ನನಗೇನೂ ಬೇಡ ಅಯೋಧ್ಯೆ ದಾರಿಯಲ್ಲಿ ವೃಕ್ಷಗಳು ಫಲಪುಷ್ಪಗಳಿಂದ ತುಂಬಿರಲಿ’ ಸಾಕಲ್ಲ! ರಾಮ ಸಂಕಲ್ಪದ ಒಂದೇ ಮಾತಿನ ಅಸಾಮಾನ್ಯ ಚಿತ್ರಣ.

ಭರದ್ವಾಜರ ಆಶ್ರಮದಿಂದ ರಾಮನು ಭರತನಿಗೆ ತನ್ನ ಆಗಮನವನ್ನು ತಿಳಿಸಲು ಮಾತ್ರವಲ್ಲ ಭರತನ ಮನಸ್ಸನ್ನು ತಿಳಿಯಲು ಅರ್ಥಾತ್‌ ಅವನು ರಾಮನಿಗೆ ರಾಜ್ಯವನ್ನು ಒಪ್ಪಿಸುವ ಮನಸ್ಥಿತಿಯಲ್ಲಿ ಈಗಲೂ ಇದ್ದಾನೋ ಇಲ್ಲವೋ ಎಂದು ತಿಳಿಯಲು ಹನುಮಂತನನ್ನು ಕಳುಹಿಸುತ್ತಾನೆ ! ಹೌದು, ವಾಲ್ಮೀಕಿಯು ಒಂದು ಸ್ಥರದಲ್ಲಿ ಆಧ್ಯಾತ್ಮಿಕ ಕವಿ. ಆದರೆ ಮತ್ತೂಂದು ಸ್ಥರದಲ್ಲಿ ಪರಮವಾಸ್ತವವಾದಿ. ಮಾನವಮನಸ್ಸಿನ ಸೂಕ್ಷ್ಮಗಳನ್ನು ನಿಜಗಳನ್ನು ನೇರವಾಗಿ ಮುಚ್ಚುಮರೆಯಿಲ್ಲದೆ
ವರ್ಣಿಸುವ ದಾರ್ಶನಿಕ ಕವಿ.

“ಭರತಸ್ಯ ಇಂಗಿತಾನಿ … ತತ್ವೇನ ಮುಖವರ್ಣೇನ ದೃಷ್ವ ವ್ಯಾಭಾಷಣೇನಚ’ ಭರತನ ನಿಜ ಮನಸ್ಸನ್ನು ಮಾತು, ನೋಟ ಮತ್ತು ಮಾತುಗಳ ರೀತಿಯಿಂದ ತಿಳಿ! ಕೈಗೆ ಬಂದ ರಾಜ್ಯ ಯಾರಿಗೆ ಬೇಡವಾದೀತು? ತಸ್ಯ ಬುದ್ದಿಂಚ ವಿಜ್ಞಯ ! ಅವನ ಮಾನಸಿಕತೆ ತಿಳಿದು ಬಾ (ಉಲ್ಲೇಖ ಯುದ್ದಕಾಂಡ 128) ಇಂತಹ ಮನುಷ್ಯ ವರ್ಣನೆಯ ವರ್ತನೆಯ ಸೂಕ್ಷ್ಮ ಪರಿಶೀಲನೆಗಳು ರಾಮಾಯಣದುದ್ದಕ್ಕೂ ಕಾಣುತ್ತವೆ. ವಾಲ್ಮೀಕಿಯ ಕಾವ್ಯವು ಮಾನವ ಮನಸ್ಸಿನ ವಿಡಿಯೊಗ್ರಫಿ.

ಹನುಮಂತನ ವಾರ್ತೆಯಿಂದ ಭರತನು ಹರ್ಷದಿಂದ ಉಬ್ಬಿ ಹೊರಳಾಡಿದನು. ಸುವಾರ್ತೆಯನ್ನು ತಂದ ಆತನನ್ನು ತಬ್ಬಿದನು. ಬಳಿಕ ಹನುಮಂತನಿಂದ ಶ್ರೀರಾಮ ಸೀತಾ ಲಕ್ಷ್ಮಣರ ವನವಾಸದ ಕಥನವಿದೆ. ಅದೇ ಸ್ವಯಂ ಒಂದು ಖಂಡ ಕಾವ್ಯ. (ಯುದ್ಧಕಾಂಡ 129)

ಮುಂದೆ ಬರುವುದು ರಾಮ-ಭರತ, ಶತ್ರುಘ್ನ ಸಮಾಗಮ. ಅದಕ್ಕಾಗಿ ನಗರ ಶೃಂಗಾರ, ಮಂತ್ರಿ, ಸಾಮಂತ, ಸೈನ್ಯ, ಪುರಜನರಿಂದ ಭವ್ಯ ಸ್ವಾಗತ. ಭರತನು ಬಹುಷಃ ನಿಷೇಧಿಸಿದ್ದರೂ ಕೈಕೆಯು ತಾನಾಗಿಯೇ ಬಂದಳು. ಎಂತಹ ಸಶಕ್ತ ಧ್ವನಿ ! ಅಯೋಧ್ಯಾ ನಗರವೇ ನಂದಿ ಗ್ರಾಮಕ್ಕೆ ಬಂದಂತೆ ಇತ್ತಂತೆ. ಜನರ ಬದ್ಧಾಂಜಲಿಗಳೇ ಸಾವಿರಾರು ಕಮಲಗಳಂತೆ ಇದ್ದವಂತೆ. ಭರತನು ಹಿಂದೆ ಪಡೆದ ಆ ರಾಮ ಪಾದುಕೆಗಳನ್ನು ಹೊತ್ತು ತಂದು ರಾಮನಿಗೆ ತೊಡಿಸಿದನು. ಸುಗ್ರೀವ, ವಿಭೀಷಣರ ಕಣ್ಣಲ್ಲಿ ನೀರು. ರಾಮನು ಪುಷ್ಪಕ ವಿಮಾನವನ್ನು ಮರಳಿ ಅದರ ಸ್ವಾಮಿಯಾದ ಕುಬೇರನಿಗೆ ಕಳುಹಿಸಿದನು.

ಭರತನು ಶ್ರೀರಾಮನಿಗೆ ರಾಜ್ಯವನ್ನು ಒಪ್ಪಿಸಿ ಈಗ ದಶರಥನು ಬೆಳೆಸಿದ ಮಹಾ ವೃಕ್ಷವು ಫಲ ಕೊಡುವ ಕಾಲವೆಂದು ಹೇಳಿದನು. ಬಳಿಕ ಕೌಸಲ್ಯೆಯಿಂದ, ವಾನರ ಸ್ತ್ರೀಯರಿಂದ ಸೀತೆಗೆ ಅಲಂಕಾರ. ಆ ಬಳಿಕ ಮೆರವಣಿಗೆ. ಸುಗ್ರೀವಾದಿಗಳಿಗೆ ಭವ್ಯ ಭವನದಲ್ಲಿ ವಸತಿ. ವಾನರರು 500 ಪುಣ್ಯ ನದಿಗಳ, ಸಮುದ್ರಗಳ ಜಲವನ್ನು ತರುತ್ತಾರೆ. ಆಗ ಸೀತೆಗೆ ಶ್ರೀರಾಮನು, ತಾನು ತೊಟ್ಟ ದಿವ್ಯವಾದ ಮುತ್ತಿನ ಹಾರವನ್ನು ನೀಡಲಾಗಿ ಅದನ್ನು ಶ್ರೀರಾಮನ ಅನುಮತಿಯಂತೆ
ಆಂಜನೇಯನಿಗೆ ತೊಡಿಸುವಳು. ರಾಮ-ಸೀತೆಯರ ಸಮಾಗಮಕ್ಕೆ ಕಾರಣನಾದ ಅವನಿಗೆ ಯಶೋಮಾಲಿಕೆಯನ್ನು ನೀಡುವುದು ಅತ್ಯಂತ ಸುಂದರ ಸನ್ನಿವೇಶ.
ಶ್ರೀರಾಮನು ಯುವರಾಜ ಪದವಿಯನ್ನು ಲಕ್ಷ್ಮಣನಿಗೆ ನೀಡಿದಾಗ, ಆತನು ನಿರಾಕರಿಸಿದಾಗ ಶ್ರೀರಾಮನು ಭರತನನ್ನು ಯುವರಾಜನನ್ನಾಗಿ ನೇಮಿಸುವುದೂ ಅರ್ಥಪೂರ್ಣ.
ಮುಂದೆ..

ದಶವರ್ಷ ಸಹಸ್ರಾಣಿ ದಶವರ್ಷ ಶತಾನಿಚ |
ಭಾತೃಭಿಃ ಸಹಿತಃ ರಾಜ್ಯಂ ಶ್ರೀಮಾನ್‌ |
ರಾಮೋರಾಜ್ಯ ಮಕಾರಯತ್‌||

ತಮ್ಮಂದಿರೊಂದಿಗೆ ಹನ್ನೊಂದು ಸಾವಿರ ವರ್ಷಗಳ ಕಾಲ ರಾಜ್ಯವಾಳುತ್ತಾನೆ. ಮುಂದೆ ಅಲ್ಲೇ ರಾಮಾಯಣದ ಫಲಶ್ರುತಿ ಬರುತ್ತದೆ. ಹಿಂದೆ ನಾರದ ವಾಕ್ಯವೆಂಬ, ವಾಲ್ಮೀಕಿಗೆ ನಾರದರು ಹೇಳಿದ ಸಂಕ್ಷಿಪ್ತ ರಾಮಾಯಣದಲ್ಲಿ ಇದೇ ಮಾತು ಇದ್ದು, ರಾಮೋ ರಾಜ್ಯಂ ಉಪಾಸಿತ್ವಾ ಬ್ರಹ್ಮಲೋಕಂ ಪ್ರಯಾಸ್ಯತಿ
(ಬಾಲಕಾಂಡ 1/97) ರಾಮನು ಬ್ರಹ್ಮಲೋಕಕ್ಕೆ ಹೋದನು ಎಂದೇ ಇದೆ. ಜತೆಗೆ ಅಲ್ಲೂ ರಾಮಾಯಣ ಪಠಣದ ಫಲವೂ ಹೇಳಿದೆ. ಇದರಿಂದಾಗಿ ಮುಂದಿನ ಉತ್ತರ ಕಾಂಡವು ವಾಲ್ಮೀಕಿ ರಚಿತವಾದ ರಾಮಾಯಣದ ಭಾಗವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ರಾಮಾಯಣವು ಆದಿ ಕಾವ್ಯ, ಆರ್ಷ ಋಷಿ ವಚನ, ವೇದ ಸಮ.

ಆದಿಕಾವ್ಯಮಿದಂತು ಆರ್ಷಂ
ಪುರಾ ವಾಲ್ಮೀಕಿನಾ ಕೃತಂ…
ವೇದವೇದ್ಯೇ ಪರೇ ಪುಂಸಿ
ಜಾತೇ ದಶರಥಾತ್ಮಜೇ
ವೇದಃ ಪ್ರಾಚೇತಸಾತ್‌ ಅಸೀತ್‌
ಸಾಕ್ಷಾತ್‌ ರಾಮಾಯಣ ಸ್ತದಾ

– ಡಾ| ಎಂ.ಪ್ರಭಾಕರ ಜೋಶಿ, ವಿಮರ್ಶಕ, ಯಕ್ಷಗಾನ ವಿದ್ವಾಂಸ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.