ರವಿಚಂದ್ರನ್‌ ಪುತ್ರನ ಚಿತ್ರಕ್ಕೆ ದರ್ಶನ್‌ ಸಾಥ್‌

Team Udayavani, Aug 18, 2019, 12:02 PM IST

ಚಿತ್ರರಂಗಕ್ಕೆ ಬರುವ ಹೊಸಬರು ಎಷ್ಟೇ ಹೊಸ ಪ್ರಯೋಗ ಮಾಡಿದರೂ, ಆ ಹೊಸತನ ಜನರಿಗೆ ತಲುಪಲು ಚಿತ್ರರಂಗದವರ ಸಹಕಾರ ಕೂಡಾ ಬೇಕು. ಅದರಲ್ಲೂ ಹೊಸಬರಿಗೆ ಸ್ಟಾರ್‌ನಟರು ಸಾಥ್‌ ಕೊಟ್ಟರೆ ಅವರಿಗೆ ಅದು ಆನೆಬಲ ಬಂದಂತೆ. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳು ಹೊಸಬರಿಗೆ ಸಾಥ್‌ ಕೊಡುತ್ತಿದ್ದಾರೆ. ಈಗ ಯಾಕೆ ಸ್ಟಾರ್‌ ಹಾಗೂ ಹೊಸಬರ ಸುದ್ದಿ ಎಂದರೆ ಅದಕ್ಕೆ ಉತ್ತರ ‘ಪ್ರಾರಂಭ’. ರವಿಚಂದ್ರನ್‌ ಪುತ್ರ ಮನೋರಂಜನ್‌ ನಾಯಕರಾಗಿ ನಟಿಸುತ್ತಿರುವ ‘ಪ್ರಾರಂಭ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಈಗ ಚಿತ್ರಕ್ಕೆ ದರ್ಶನ್‌ ಎಂಟ್ರಿ ಕೊಟ್ಟಿದ್ದಾರೆ! ಹೀಗೆಂದಾಕ್ಷಣ ಚಿತ್ರದಲ್ಲಿ ದರ್ಶನ್‌ ನಟಿಸುತ್ತಾರೆಂದು ನೀವಂದು ಕೊಳ್ಳುವಂತಿಲ್ಲ. ಬದಲಾಗಿ ಚಿತ್ರಕ್ಕೆ ದರ್ಶನ್‌ ಧ್ವನಿ ನೀಡಿದ್ದಾರೆ.

ಹೊಸಬರು ತಮ್ಮ ಚಿತ್ರದ ಆರಂಭ ಅಥವಾ ಕೊನೆಯಲ್ಲಿ ಸ್ಟಾರ್‌ ನಟರಿಂದ ವಾಯ್ಸ ಓವರ್‌ ಕೊಡಿಸುತ್ತಿದ್ದಾರೆ. ಈಗಾಗಲೇ ದರ್ಶನ್‌ ಸೇರಿದಂತೆ ಅನೇಕ ಸ್ಟಾರ್‌ಗಳು ಹೊಸಬರ ಚಿತ್ರಕ್ಕೆ ಸಾಥ್‌ ನೀಡಿದ್ದಾರೆ. ಅದರಂತೆ ಈಗ ದರ್ಶನ್‌ ‘ಪ್ರಾರಂಭ’ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ದರ್ಶನ್‌ ಧ್ವನಿ ನೀಡಿರುವುದರಿಂದ ಚಿತ್ರತಂಡ ಖುಷಿಯಾಗಿದೆ. ‘ಬೃಹಸ್ಪತಿ’ ಮತ್ತು ‘ಸಾಹೇಬ’ ಚಿತ್ರಗಳ ಬಳಿಕ ‘ಪ್ರಾರಂಭ’ ಮನೋರಂಜನ್‌ ಅಭಿನಯಿಸುತ್ತಿರುವ ಮೂರನೇ ಚಿತ್ರವಾಗಿದೆ. ಚಿತ್ರದಲ್ಲಿ ಮನೋರಂಜನ್‌ಗೆ ನಾಯಕಿಯಾಗಿ ಕೀರ್ತಿ ಕಲಕೇರಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಮನು ಕಲ್ಯಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ‘ಜೇನುಶ್ರೀ ತನುಷ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಜಗದೀಶ್‌ ಕಲ್ಯಾಡಿ ನಿರ್ಮಿಸುತ್ತಿದ್ದಾರೆ.

ನನ್ನ ಪ್ರಕಾರ ಟ್ರೇಲರ್‌ ಮೆಚ್ಚಿದ ದರ್ಶನ್‌: ‘ನನ್ನ ಪ್ರಕಾರ’ ಚಿತ್ರತಂಡಕ್ಕೂ ದರ್ಶನ್‌ ಸಾಥ್‌ ನೀಡಿದ್ದು, ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ. ಟ್ರೇಲರ್‌ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ ದರ್ಶನ್‌, ‘ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ಹೊಸಬರು ಒಳ್ಳೆಯ ಸಿನಿಮಾಗಳನ್ನು ಕೊಡುತ್ತಿದ್ದಾರೆ. ಚಿತ್ರರಂಗಕ್ಕೆ ಹೊಸದಾಗಿ ಬರುವವರಿಗೆ ಪ್ರೋತ್ಸಾಹ, ಬೆಂಬಲ ನೀಡೋದು ನಮ್ಮ ಕರ್ತವ್ಯ. ‘ನನ್ನ ಪ್ರಕಾರ’ ಚಿತ್ರ ಕೂಡಾ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸವಿದೆ’ ಎಂದರು. ಕಿಶೋರ್‌, ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಪ್ರಿಯಾಮಣಿ ಇಲ್ಲಿ ವೈದ್ಯೆಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ವಿನಯ್‌ ನಿರ್ದೇಶಿಸಿದ್ದು, ಚಿತ್ರ ಆಗಸ್ಟ್‌ 23 ರಂದು ತೆರೆಕಾಣುತ್ತಿದೆ.ಪ್ರಾರಂಭಕ್ಕೆ ಧ್ವನಿ ನೀಡಿದ ಚಾಲೆಂಜಿಂಗ್‌ ಸ್ಟಾರ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ