ಪೈಲ್ವಾನ್ ಪೋಸ್ಟರ್ ನಕಲಿ ಎಂದವರಿಗೆ ಸುದೀಪ್ ಹೇಳಿದ್ದೇನು ಗೊತ್ತಾ?
Team Udayavani, Nov 21, 2018, 11:08 AM IST
ಕೆಲವು ದಿನಗಳ ಹಿಂದಷ್ಟೇ ಸುದೀಪ್ ಅಭಿನಯದ “ಪೈಲ್ವಾನ್’ ಚಿತ್ರದ ಪೋಸ್ಟರ್ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಸುದೀಪ್ ಬರೀ ಮೈಯಲ್ಲಿ ಸಖತ್ ರಗಡ್ ಆಗಿ, ಕುಸ್ತಿ ಅಖಾಡದಲ್ಲಿ ನಿಂತಿರುವ ಪೋಸ್ಟರ್ ಅನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದರು. ಸುದೀಪ್ ಇಷ್ಟು ವರ್ಷದ ಸಿನಿಮಾ ಕೆರಿಯರ್ನಲ್ಲಿ ಯಾವತ್ತೂ ಬರೀ ಮೈಯಲ್ಲಿ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ.
ಪಾತ್ರಕ್ಕಾಗಿ ಜಿಮ್ಗೆ ಹೋಗಿ ವರ್ಕೌಟ್ ಮಾಡಿ, ಫಿಟ್ ಆಗಿ ಕಾಣಿಸಿಕೊಂಡಿರುವ ಸುದೀಪ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವ ಜೊತೆಗೆ ಒಂದಷ್ಟು ಮಂದಿ ಸಂದೇಹ ಕೂಡಾ ವ್ಯಕ್ತಪಡಿಸಿದ್ದರು. “ಇದು ನಕಲಿ ಪೋಸ್ಟರ್, ಯಾರಧ್ದೋ ದೇಹಕ್ಕೆ ಸುದೀಪ್ ತಲೆ ಅಂಟಿಸಲಾಗಿದೆ’ ಎಂಬ ಮಾತುಗಳು ಕೂಡಾ ಕೇಳಿಬರಲಾರಂಭಿಸಿತ್ತು. ಇದನ್ನು ಗಮನಿಸಿದ ಸುದೀಪ್ ತಮ್ಮ ಟ್ವೀಟರ್ ಮೂಲಕ ಅವರಿಗೆ ತಿರುಗೇಟು ನೀಡಿದ್ದಾರೆ.
“ಪೈಲ್ವಾನ್ ಚಿತ್ರದ ಪೋಸ್ಟರ್ ನಕಲಿ ಎಂದವರನ್ನು ನಾನು ದೂಷಿಸುವುದಿಲ್ಲ. ಅವರಿಗೆ ಆ ರೀತಿಯ ಭಾವನೆ ಬರುವಂತೆ ನಾನೇ ಮಾಡಿರಬಹುದು. “ಪೈಲ್ವಾನ್’ ಚಿತ್ರ ನನಗೊಂದು ಎಕ್ಸೈಟ್ಮೆಂಟ್. ನಾನು ತುಂಬಾ ಖುಷಿಯಿಂದ ಈ ಸಿನಿಮಾ ಮಾಡುತ್ತಿದ್ದೇನೆ. ಸ್ಕ್ರಿಪ್ಟ್ ಬಯಸಿದ್ದರಿಂದ ನಾನು ಜಿಮ್ಗೆ ಹೋದೆ’ ಎಂದು ಟ್ವೀಟ್ ಮಾಡಿ, ತಿರುಗೇಟು ನೀಡಿದ್ದಾರೆ ಸುದೀಪ್. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, “ಹೆಬ್ಬುಲಿ’ ಚಿತ್ರ ನಿರ್ದೇಶಿಸಿದ್ದ ಕೃಷ್ಣ ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಅವರದೇ.