ತುಳು ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು: ನಟ ಆದಿತ್ಯ
Team Udayavani, May 26, 2022, 3:41 PM IST
“ನನಗೆ ತುಳು ಚಿತ್ರದಲ್ಲಿ ಅಭಿನಯಿಸುವ ಆಸೆ ಮೊದಲಿನಿಂದಲೂ ಇತ್ತು. ನನ್ನ ಅಜ್ಜಿ ಹಾಗೂ ಅಮ್ಮ ಇಬ್ಬರೂ ದಕ್ಷಿಣ ಕನ್ನಡದವರು. ನಾನು ಚಿತ್ರದಲ್ಲಿ ಅಭಿನಯಿಸುವ ವಿಷಯ ನನಗೆ ಗೊತ್ತಿರಲಿಲ್ಲ. ನಿರ್ಮಾಪಕರು ಈ ರೀತಿ ಪಾತ್ರವಿದೆ. ನೀವು ಮಾಡಬೇಕೆಂದರು. ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಮೊದಲ ದಿನ ಚಿತ್ರೀಕರಣಕ್ಕೆ ಸಿದ್ದವಾಗಿ ಬಂದಾಗ ಅಲ್ಲಿದವರೆಲ್ಲ ನನ್ನ ನೋಡಿ ಆಶ್ಚರ್ಯಪಟ್ಟರು” ಹೀಗೆ ಹೇಳಿದವರು ನಟ ಆದಿತ್ಯ.
ರಾಜೇಂದ್ರ ಸಿಂಗ್ ಬಾಬು ಅವರ ತುಳು ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ‘ವೀರ ಕಂಬಳ’ ಚಿತ್ರದಲ್ಲಿ ನಟಿಸಿರುವ ಆದಿತ್ಯ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಲ್ಲದೆ ತನ್ನ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡದ ಅವರು, “ಚಿತ್ರ ಬಿಡುಗಡೆಯಾದಾಗ ನನ್ನ ಪಾತ್ರದ ಬಗ್ಗೆ ನಿಮಗೂ ತಿಳಿಯಬಹುದು ಎಂದರು.
ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿರುವ ರಾಧಿಕಾ ಚೇತನ್ ಮಾತನಾಡಿ, ಎಷ್ಟೋ ಜನಕ್ಕೆ ನಾನು ತುಳುನಾಡಿನವಳೆಂದು ತಿಳಿದಿಲ್ಲ. ನನ್ನ ಮಾತೃ ಭಾಷೆ ಕೂಡ ತುಳು. ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ವಂದನೆಗಳು ಎಂದರು.
ಇದನ್ನೂ ಓದಿ:ಅಕ್ಟೋಬರ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ವೀರ ಕಂಬಳ’ ಚಿತ್ರ ಬಿಡುಗಡೆ
ಎ.ಆರ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿರುವ ‘ವೀರ ಕಂಬಳ’ ಚಿತ್ರದ ನಿರ್ದೇಶನವನ್ನು ಎಸ್ .ವಿ .ರಾಜೇಂದ್ರ ಸಿಂಗ್ ಬಾಬು ಮಾಡುತ್ತಿದ್ದಾರೆ. ಅರ್ ಗಿರಿ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ಆರ್ ಬಾಬು ಸಂಕಲನವಿದೆ.
ಆದಿತ್ಯ, ರಾಧಿಕಾ ಚೇತನ್, ಗೋಪಿನಾಥ್ ಭಟ್, ಭೋಜರಾಜ್ ವಾಮಾಂಜೂರು, ಮೈಮ್ ರಮೇಶ್, ರಾಜಶೇಖರ ಕೋಟ್ಯಾನ್, ಉಷಾ ಭಂಡಾರಿ, ಶ್ರೀನಿವಾಸ ಗೌಡ, ಸ್ವರಾಜ್ ಶೆಟ್ಟಿ, ವೀಣಾ ಪೊನ್ನಪ್ಪ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಕ್ಟೋಬರ್ ನಲ್ಲಿ ತೆರೆಗೆ ಬರುವ ಯೋಚನೆಯಲ್ಲಿದೆ ಚಿತ್ರತಂಡ.