ಸ್ವೀಟಿಗೆ ತಟ್ಟಿದ ಪೈರಸಿ ಕಾಟ
Team Udayavani, Sep 2, 2020, 12:47 PM IST
2013ರಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ನಟಿಸಿ, ನಿರ್ಮಿಸಿದ್ದ “ಸ್ವೀಟಿ ನನ್ನ ಜೋಡಿ’ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಬಹುಸಮಯದ ನಂತರ ರಾಧಿಕಾ ಅಭಿನಯಿಸಿದ್ದ ಈ ಚಿತ್ರವನ್ನು ಅವರ ಕಂ ಬ್ಯಾಕ್ ಸಿನಿಮಾ ಎಂದೇ ಹೇಳಲಾಗಿತ್ತು. ಆದರೆ “ಸ್ವೀಟಿ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡಲಿಲ್ಲ. ಆದರೆ ಬಿಡುಗಡೆಯಾಗಿ ಸುಮಾರು ಆರುವರೆ ವರ್ಷಗಳ ಬಳಿಕ ಆ ಚಿತ್ರ ಮತ್ತೆ ಸದ್ದು ಮಾಡುತ್ತಿದೆ. ಅದೂ ಪೈರಸಿಯ ವಿಚಾರವಾಗಿ.
ಹೌದು, ರಾಧಿಕಾ ಅವರ “ಸ್ವೀಟಿ ನನ್ನ ಜೋಡಿ’ ಚಿತ್ರವನ್ನು ಅವರ ಅನುಮತಿಯಿಲ್ಲದೆ ಯಾರೋ ಕಿಡಿಗೇಡಿಗಳು ಯೂ-ಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರಂತೆ. ಈ ಬಗ್ಗೆ ಗರಂ ಆಗಿರುವ ರಾಧಿಕಾ, ಕಾನೂನು ಬಾಹಿರವಾಗಿ ತಮ್ಮ ಚಿತ್ರವನ್ನು ಅಪ್ಲೋಡ್ ಮಾಡಿದವರ ವಿರುದ್ದ ಕ್ರಮಕೈಗೊಳ್ಳುವಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು ಮೂರು ಕೋಟಿ ವೆಚ್ಚದಲ್ಲಿ “ಸ್ವೀಟಿ ನನ್ನ ಜೋಡಿ’ ಕನ್ನಡ ಸಿನಿಮಾವನ್ನು ನಿರ್ಮಿಸಲಾಗಿತ್ತು. ಆದರೆ ಯಾರೋ
ಅಪರಿಚಿತರು ಸಿನಿಮಾ ವಿಡಿಯೋವನ್ನು ತನ್ನ ಅನುಮತಿ ಪಡೆಯದೆ ಹಾಗೂ ಗಮನಕ್ಕೆ ತರದೆ ಯೂ-ಟ್ಯೂಬ್ನಲ್ಲಿ ಸಿನಿಮಾವನ್ನು ಅಪ್ಲೋಡ್ ಮಾಡುವ ಮೂಲಕ ಪೈರಸಿ ಮಾಡಿದ್ದಾರೆ. ಹೀಗಾಗಿ ಸಿನಿಮಾ ಅಪ್ಲೋಡ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ರಾಧಿಕಾ ದೂರಿನಲ್ಲಿ ಮನವಿ ಮಾಡಿದ್ದಾರೆ. ಅಂದಹಾಗೆ, “ಸ್ವೀಟಿ ನನ್ನ ಜೋಡಿ’ ಚಿತ್ರ ಬಳಿಕ ರಾಧಿಕಾ “ಕಾಂಟ್ರ್ಯಾಕ್ಟ್’, “ರಾಜೇಂದ್ರ ಪೊನ್ನಪ್ಪ’, “ಭೈರಾದೇವಿ’ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮತ್ತೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.