ತೇಜ್ ‘ರಿವೈಂಡ್’ ರಿಲೀಸ್ಗೆ ಕೌಂಟ್ ಡೌನ್
Team Udayavani, Apr 3, 2021, 12:02 PM IST
ನಟ ತೇಜ್ ಅಭಿನಯದ “ರಿವೈಂಡ್’ ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿ ಸೆನ್ಸಾರ್ನಿಂದಲೂ ಪಾಸಾಗಿರುವ “ರಿವೈಂಡ್’ ಇದೇ ಏ. 16ಕ್ಕೆ ತೆರೆಗೆ ಬರುತ್ತಿದೆ. ಸಸ್ಪೆನ್ಸ್- ಥ್ರಿಲ್ಲರ್ ಕಥಾಹಂದರ ಹೊಂದಿರುವ “ರಿವೈಂಡ್’ ಚಿತ್ರದಲ್ಲಿ ನಟ ತೇಜ್ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಾಯಕ ನಟ, “ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಒಮ್ಮೆ ನಮ್ಮ ಲೈಫ್ನ ರಿವೈಂಡ್ ಮಾಡಲು ಸಾಧ್ಯವಾಗುವುದಾದರೆ, ಏನೆಲ್ಲ ಮಾಡಬಹುದು? ಅದರಿಂದಾಗುವ ಅನುಕೂಲ, ಅನಾನುಕೂಲಗಳೇನು ಅನ್ನೋದು ಸಿನಿಮಾದ ಕಥೆಯ ಒಂದು ಎಳೆ. ಕಾಲ್ಪನಿಕ ಕಥೆಯಾದರೂ ಒಂದು ಲಾಜಿಕ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಕನ್ನಡ ಹಾಗ ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ:ಮತ್ತೆ ಆತಂಕದಲ್ಲಿ ಕನ್ನಡ ಚಿತ್ರರಂಗ: ಸಿನಿಮಾ ಬಿಡುಗಡೆಯಲ್ಲಿ ಆಗಲಿದೆ ವ್ಯತ್ಯಯ
ಇನ್ನು “ರಿವೈಂಡ್’ ಚಿತ್ರದಲ್ಲಿ ತೇಜ್ ಅವರೊಂದಿಗೆ ಹಿರಿಯ ನಟ ಸುಂದರ್ ರಾಜ್, ಸಂದೀಪ್ ಮಲಾನಿ, ಧರ್ಮ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ತನ್ನ ಟೈಟಲ್, ಪೋಸ್ಟರ್ ಮತ್ತು ಟ್ರೇಲರ್ ಮೂಲಕ ಒಂದಷ್ಟು ಕುತೂಹಲ ಮೂಡಿಸಲು ಯಶಸ್ವಿಯಾಗಿರುವ “ರಿವೈಂಡ್’ ತೆರೆಮೇಲೆ ಹೇಗಿರಲಿದೆ ಅನ್ನೋದು ಇದೇ ತಿಂಗಳು ಗೊತ್ತಾಗಲಿದೆ.