ತಾಂಡವ್ ವೆಬ್‌ಸಿರೀಸ್ ತಂಡ ಕ್ಷಮೆಯಾಚನೆ
Team Udayavani, Jan 19, 2021, 7:15 AM IST
ಮುಂಬಯಿ: ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪ ಎದುರಿಸಿ, ಭಾರೀ ವಿವಾದಕ್ಕೆ ಕಾರಣವಾದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅಭಿನಯದ “ತಾಂಡವ್’ ವೆಬ್‌ಸಿರೀಸ್ ತಂಡ ಕೊನೆಗೂ ಕ್ಷಮೆ ಯಾಚಿಸಿದೆ.
ಸೋಮವಾರ ಈ ಕುರಿತು ಪ್ರಕಟಣೆ ಹೊರಡಿಸಿದ ತಂಡ, “ತಾಂಡವ್ ಒಂದು ಕಾಲ್ಪನಿಕ ಕಥೆಯಾಗಿದ್ದು, ಯಾವುದೇ ಧರ್ಮ, ಜಾತಿ, ಸಮುದಾಯ, ಪಂಗಡಕ್ಕೆ ಅಥವಾ ಅವರ ನಂಬಿಕೆಗೆ, ಭಾವನೆಗೆ ಧಕ್ಕೆ ತರುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ. ಯಾರಿಗಾದರೂ ಇದರಿಂದ ನೋವಾಗಿದ್ದರೆ, ಅದಕ್ಕೆ ನಾವು ಬೇಷರತ್ ಕ್ಷಮೆ ಯಾಚಿಸುತ್ತೇವೆ’ ಎಂದು ಹೇಳಿದೆ. ಇದಕ್ಕೂ ಮುನ್ನ, ಅಮೆಜಾನ್ ಪ್ರೈಮ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ “ತಾಂಡವ್’ ನಿರ್ದೇಶಕ ಅಲಿ ಅಬ್ಟಾಸ್ ಝಫರ್, ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ, ಚಿತ್ರಸಾಹಿತಿ ಗೌರವ್ ಸೋಲಂಕಿ, ಅಮೆಜಾನ್ ಪ್ರೈಮ್ ಇಂಡಿಯಾ ಮುಖ್ಯಸ್ಥ ಅಪರ್ಣಾ ಪುರೋಹಿತ್ ವಿರುದ್ಧ ಉತ್ತರಪ್ರದೇಶದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್ಐಆರ್ ಕೂಡ ದಾಖಲಾಗಿತ್ತು. ಜತೆಗೆ ಹಲವೆಡೆ ತಾಂಡವ್ ತಂಡದ ವಿರುದ್ಧ ಪ್ರತಿ ಭಟನೆಗಳೂ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಮುಂಬಯಿನ ಸೈಫ್ ಕಚೇರಿ, ಅಮೆಜಾನ್ ಕಚೇರಿಯಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.