ಏನ್‌ ಛಂದ್‌ ಐತ್ರಿ ಆಲಮಟ್ಟಿ…

ಬೇಸಿಗೆಯಲ್ಲೂ ನಳನಳಿಸುತ್ತಿವೆ ಉದ್ಯಾನಗಳು•ಬಿಸಿಲಲ್ಲೂ ಹೆಚ್ಚುತ್ತಿದೆ ಪ್ರವಾಸಿಗರ ದಂಡು

Team Udayavani, May 12, 2019, 11:16 AM IST

ಆಲಮಟ್ಟಿ: ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯವೆಂದರೆ ಕೇವಲ ನೀರು ಸಂಗ್ರಹ ಮಾಡುವ ಸ್ಥಳ ಮಾತ್ರವಲ್ಲದೇ ನಿತ್ಯ ಹರಿದ್ವರ್ಣದಂತಿರುವ ಹಸಿರಿನಿಂದ ಕಂಗೊಳಿಸುತ್ತಿದ್ದು ಮಲೆನಾಡನ್ನು ನೆನಪಿಸುವಂತಿದೆ.

ಉತ್ತರ ಕರ್ನಾಟಕವೆಂದರೆ ಕೇವಲ ಬಿಸಿಲ ನಾಡು ಎನ್ನುವವರಿಗೆ ಆಲಮಟ್ಟಿ ತೋರಿಸುವಂತಿದೆ. ಆಲಮಟ್ಟಿ ತನ್ನ ಬಳಿಗೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವದರೊಂದಿಗೆ ಹೊಸ ಹೊಸ ಪಕ್ಷಿಗಳು ಬಂದು ತಮ್ಮ ಸಂತಾನೋತ್ಪತ್ತಿ ಮಾಡಿಕೊಳ್ಳುವ ಬೀಡಾಗಿದೆ.

ಉತ್ತರದ ಕಾಶ್ಮೀರ: ವಿಜಯಪುರ ಜಿಲ್ಲೆಯೆಂದರೆ ಎಲ್ಲರಿಗೂ ನೆನಪಾಗುವುದು ಅದೇ ಬಿಸಿಲನಾಡು, ಎಲ್ಲಿ ನೋಡಿದರೂ ಒಣಗಿ ನಿಂತ ಗಿಡ ಮರಗಳು, ಗ್ರಾಮೀಣ ಪ್ರದೇಶದ ಜನರು ನೆರೆ ರಾಜ್ಯಗಳಿಗೆ ಗುಳೆ ಹೋಗುವದು. ಜಿಲ್ಲೆಯಲ್ಲಿ ಆಲಮಟ್ಟಿಯೆಂಬ ಪ್ರವಾಸಿ ತಾಣವೀಗ ತನ್ನ ಸುತ್ತಲೂ ಹಸಿರು ಗಿಡಗಳಿಂದ ಕಂಗೊಳಿಸಿ ಎಲ್ಲಿ ಕುಳಿತರೂ ತಂಪು-ತಂಪು ಇದರಿಂದ ಒಮ್ಮೆ ಆಲಮಟ್ಟಿಯ ಉದ್ಯಾನಕ್ಕೆ ಭೇಟಿ ನೀಡಿದವರು ಬೇಸಿಗೆಯಲ್ಲಿ ತಪ್ಪದೇ ತಮ್ಮ ಕುಟುಂಬ ಸದಸ್ಯರೊಂದಿಗೆ ಆಲಮಟ್ಟಿಗೆ ಬರುವುದು ವಾಡಿಕೆಯಾಗಿದೆ.

ಸಸ್ಯಕಾಶಿ: ತಗ್ಗು-ದಿನ್ನೆ, ಕಲ್ಲು ಬಂಡೆಗಳ ಮಧ್ಯದಲ್ಲಿ ನಿರ್ಮಾಣವಾಗಿರುವ ರಾಕ್‌ ಉದ್ಯಾನ, ಮೊಘಲ್ ಉದ್ಯಾನ, ಇಟಾಲಿಯನ್‌ ಉದ್ಯಾನ, ಗೋಪಾಲಕೃಷ್ಣ ಉದ್ಯಾನ, ಲವ-ಕುಶ ಉದ್ಯಾನ ಹೀಗೆ ಆಲಮಟ್ಟಿಯಲ್ಲಿರುವ ವಿವಿಧ ಉದ್ಯಾನಗಳು ಹಸಿರು ಸವಿಯುವವರಿಗೆ ಹಸಿರಾಗಿದ್ದರೆ ಇನ್ನುಳಿದವರಿಗೆ ಔಷಧೀಯ ಸಸ್ಯಗಳನ್ನು ಹೊಂದಿ ನಿತ್ಯ ಹಲವಾರು ನಾಟಿ ವೈದ್ಯರನ್ನು ತನ್ನೆಡೆಗೆ ಸೆಳೆಯುತ್ತಿದೆ.

ರಾಕ್‌ ಉದ್ಯಾನವು ಹಲವಾರು ಔಷಧೀಯ ಸಸ್ಯಗಳನ್ನು ಒಳಗೊಂಡಿದೆ. ಜಲಚರ, ಸರಿಸೃಪ, ವನ್ಯಜೀವಿ, ಪಕ್ಷಿಗಳು, ಬುಡಕಟ್ಟು ಜನಾಂಗ ಹೀಗೆ ಹಲವಾರು ವಿಶೇಷತೆಗಳನ್ನು ತನ್ನ ಒಡಲಲ್ಲಿರಿಸಿಕೊಂಡಿದೆ. ರಾಷ್ಟ್ರದ ನಕ್ಷೆ ಅದರ ಸುತ್ತಲೂ ಸರ್ವ ಜನಾಂಗದ ತೋಟವೆಂಬಂತೆ ಲಿಂಗ ಭೇದವಿಲ್ಲದೇ, ವಯೋ ಭೇದವಿಲ್ಲದೇ ಸರ್ವ ಧರ್ಮಗಳ ಜನತೆ ರಕ್ಷಣೆಗೆ ನಿಂತಿರುವದು, ರಾಷ್ಟ್ರಪಕ್ಷಿ, ರಾಷ್ಟ್ರ ಪ್ರಾಣಿ, ರಾಷ್ಟ್ರೀಯ ಹಣ್ಣು, ಹೂವು ಹೀಗೆ ಎಲ್ಲವನ್ನೂ ತಿಳಿಸುವ ಸೂರ್ಯ ಪಾರ್ಕ್‌ಗಳಂತಹ ವಿವಿಧ ಪಾರ್ಕ್‌ಗಳನ್ನು ಹೊಂದಿದೆ.

ಕೇವಲ ಹಸಿರಿನಿಂದ ಕಂಗೊಳಿಸುತ್ತಿರುವ ಗಿಡ ಮರಗಳ ಮಧ್ಯದಲ್ಲಿಯೂ ರಾಜಸ್ಥಾನದ ಮರುಭೂಮಿಯಲ್ಲಿ ವಾಸಿಸುವ ಕುಟುಂಬಗಳು, ಅಜಂತಾ ಎಲ್ಲೋರಾಗಳನ್ನು ನೆನಪಿಸುವ ಗುಹೆಗಳು, ಆನೆ, ಒಂಟೆ, ಜಿರಾಫೆ, ಘೇಂಡಾಮೃಗ, ಮೊಸಳೆ ಹೀಗೆ ಹಲವಾರು ಪ್ರಾಣಿ ಹಾಗೂ ಪಕ್ಷಿಗಳು ನೈಜ ಎನ್ನುವಷ್ಟರ ಮಟ್ಟಿಗೆ ವಿವಿಧ ಕಲಾವಿದರು ಕಲಾಕೃತಿಗಳನ್ನು ರಚಿಸಿದ್ದಾರೆ.

ಗೋಪಾಲಕೃಷ್ಣ ಉದ್ಯಾನದಲ್ಲಿ ಬಾಲಕೃಷ್ಣನ ಲೀಲೆ ಹಾಗೂ ಮಥುರಾ ಪಟ್ಟಣದ ಚಿತ್ರಣ ಮತ್ತು ಲವ-ಕುಶ ಉದ್ಯಾನದಲ್ಲಿ ಶ್ರೀರಾಮಚಂದ್ರನ ಅಶ್ವಮೇಧದ ಕುದುರೆಯನ್ನು ರಾಮನ ಮಕ್ಕಳಾದ ಲವ-ಕುಶರು ಕಟ್ಟಿಹಾಕಿರುವದು ಅದರ ಬಿಡುಗಡೆಗೆ ಆಗಮಿಸಿದ ರಾಮನ ಸಹೋದರರು ಹಾಗೂ ವಾನರ ಸೇನೆಯೊಂದಿಗೆ ಲವ ಕುಶ ಅವರ ಯುದ್ಧದ ಸನ್ನಿವೇಶ ಮತ್ತು ರಾಮನೊಂದಿಗೆ ಯುದ್ದದ ಚಿತ್ರಣ ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿರುವುದಲ್ಲದೇ ಇಲ್ಲಿಯೂ ಕೂಡ ಹಲವಾರು ಔಷಧೀಯ ಸಂಪತ್ತು ಬೆಳೆಸಲಾಗಿದೆ.

ಸಿಲ್ವರ್‌ ಲೇಕ: ರಾಕ್‌ ಉದ್ಯಾನ ಪ್ರವೇಶ ಮಾಡಿದರೆ ಸಾಕು ಮೊದಲು ಸಿಗುವುದೇ ಸಿಲ್ವರ್‌ ಲೇಕ. ಇಲ್ಲಿ ಎಲ್ಲ ವಯೋಮಾನದ ಲಿಂಗ ಭೇದವಿಲ್ಲದೇ ದೋಣಿ ವಿಹಾರ ಮಾಡಲು ಕೃಷ್ಣಾ ಭಾಗ್ಯಜಲ ನಿಗಮ ವಿಶೇಷ ಕ್ರಮ ಕೈಗೊಂಡಿದೆ.

ಸಂಗೀತ ನೃತ್ಯಕಾರಂಜಿ: ಪ್ರತಿ ದಿನ ಸಂಜೆ 7:30ಕ್ಕೆ ಪ್ರದರ್ಶನ ನೀಡುವ ಸಂಗೀತ ನೃತ್ಯ ಕಾರಂಜಿ ಬಣ್ಣ ಬಣ್ಣದ ನೀರಿನಲ್ಲಿ ನರ್ತಿಸುವ ನೀರನ್ನು ನೋಡಿ ಕಣ್ತುಂಬಿಕೊಳ್ಳುವದೇ ಒಂದು ಸಂತಸದಾಯಕ ಅನುಭವ.

ರಾಷ್ಟ್ರೀಯ ಹೆದ್ದಾರಿ-13ರ ಮೂಲಕ ಆಲಮಟ್ಟಿಯ ಪ್ರವೇಶ ಮಾಡಿದರೆ ಸಾಕು ಸಾಕು ರಸ್ತೆ ಬದಿಯಲ್ಲಿ ಸಾಲು ಸಾಲು ಮರಗಳ ನೆರಳಿನಲ್ಲಿಯೇ ಪ್ರವೇಶ ಮಾಡಬೇಕು. ಇದರಿಂದ ಪಟ್ಟಣಕ್ಕೆ ಬರುವ ಅತಿಥಿಗಳಿಗೆ ವಿಶೇಷ ಸ್ವಾಗತದ ಅನುಭವವಾಗುತ್ತದೆ. ಇದರಿಂದ ಬಿಸಿಲಿನಲ್ಲಿ ಬಸವಳಿದು ಬರುವ ನೂರಾರು ಪ್ರವಾಸಿಗರಿಗೆ ತಂಪು-ತಂಪು ವಾತಾವರಣವು ಅವರನ್ನು ಉಲ್ಲಸಿತರನ್ನಾಗಿ ಮಾಡುವುದು ಸ್ಪಷ್ಟ.

ಶಂಕರ ಜಲ್ಲಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ