ಕಾಂಗ್ರೆಸ್ ನಾಯಕತ್ವಕ್ಕೆ ಮೂವರ ಪೈಪೋಟಿ!

Team Udayavani, Sep 22, 2019, 9:35 AM IST

ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್‌ ನಾಯಕತ್ವ ಬದಲಾವಣೆಗೆ ಕೈ ನಾಯಕರು ಈಗ ಗಂಭೀರ ಚಿಂತನೆ ನಡೆಸಿದ್ದು, ಜಿಲ್ಲಾ ಅಧ್ಯಕ್ಷರ ಬದಲಾವಣೆಗಾಗಿಯೇ ಕೆಪಿಸಿಸಿಯಿಂದ ನೇಮಕಗೊಂಡಿದ್ದ ವೀಕ್ಷಕರು, ಜಿಲ್ಲೆಗೆ ಆಗಮಿಸಿ ಅಭಿಪ್ರಾಯ ಪಡೆದೂ ಹೋಗಿದ್ದಾರೆ. ಇದೀಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಘಟನೆಯ ಹೊಣೆ ಹೊರಲು ಮೂವರ ಹೆಸರು ರೇಸ್‌ನಲ್ಲಿವೆ.

ಜಿಪಂ ಮಾಜಿ ಅಧ್ಯಕ್ಷ ಎಂ.ಬಿ. ಸೌದಾಗರ ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಪಕ್ಷ ಮುನ್ನಡೆಸಿದ್ದಾರೆ. ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಹತ್ತು ವರ್ಷಗಳ ಹಿಂದೆ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ರಾಜ್ಯದಲ್ಲಿ ಪಕ್ಷ ಅ ಧಿಕಾರದಲ್ಲಿರಲಿಲ್ಲ. ಜಿಲ್ಲೆಯಲ್ಲೂ ಒಬ್ಬರೂ ಶಾಸಕರು ಇರಲಿಲ್ಲ. ಅಂತಹ ಸಂದರ್ಭದಲ್ಲೂ ಪಕ್ಷ ಮುನ್ನಡೆಸಿದ, ಅಲ್ಲದೇ ಸು ದೀರ್ಘ‌ 10 ವರ್ಷಗಳ ಅವಧಿಗೆ ಅಧ್ಯಕ್ಷರಾಗಿದ್ದ ಖ್ಯಾತಿಯೂ ಅವರಿಗಿದೆ.

ಯಾರಿಗೆ ಅವಕಾಶ?: ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರು ಕೇಳಿ ಬಂದಿದ್ದವು. ಪಕ್ಷ ನಿಷ್ಠೆಯ ಜನತೆಗೆ ಹಿರಿಯರಿಗೆ ಅವಕಾಶ ಕೊಡಿ ಎಂದು ಹಲವರು ಕೇಳಿಕೊಂಡಿದ್ದರೆ, ಮತ್ತೂಂದೆಡೆ ಯುವಕರಿಗೆ ಅವಕಾಶ ಸಿಗಲಿ. ಜಿಲ್ಲೆಯಾದ್ಯಂತ ಓಡಾಡಿ ಪಕ್ಷ ಸಂಘಟಿಸುತ್ತಾರೆ. ಅಲ್ಲದೇ ಕಾಂಗ್ರೆಸ್‌ನಲ್ಲಿ 2ನೇ ಹಂತದ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೊಸ ಮುಖ ಹಾಗೂ ಯುವಕರಿಗೆ ಅವಕಾಶ ಕೊಡಬೇಕೆಂಬ ಬೇಡಿಕೆಯನ್ನು ಈಚೆಗೆ ಜಿಲ್ಲೆಗೆ ಬಂದಿದ್ದ ವೀಕ್ಷಕರೆದುರು ಹಲವರು ಬೇಡಿಕೆ ಇಟ್ಟಿದ್ದಾರೆ. ಬಾದಾಮಿ ಕ್ಷೇತ್ರ ಪ್ರತಿನಿಧಿಸುವ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ವಿಧಾನ ಪರಿಷತ್‌ ಸದಸ್ಯರಾದ ಎಸ್‌. ಆರ್‌. ಪಾಟೀಲ, ಆರ್‌.ಬಿ. ತಿಮ್ಮಾಪುರ, ಸುನೀಲಗೌಡ ಪಾಟೀಲ, ಮಾಜಿ ಸಚಿವರಾದ ಎಚ್‌.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಉಮಾಶ್ರೀ, ಮಾಜಿ ಶಾಸಕರಾದ ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಾರಾದರೆ ಸೂಕ್ತ ಎಂಬ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.

ರಡ್ಡಿ-ನೇಕಾರ-ಜಂಗಮ: ಜಿಲ್ಲಾಧ್ಯಕ್ಷ ಸ್ಥಾನ ಈವರೆಗೆ ಅಲ್ಪಸಂಖ್ಯಾತರಿಗೇ ನೀಡಲಾಗಿತ್ತು. ಈ ಬಾರಿ ಒಬಿಸಿ ಇಲ್ಲವೇ ಲಿಂಗಾಯತ ಸಮುದಾಯಕ್ಕೆ ಅವಕಾಶ ಕೊಡಬೇಕೆಂಬ ಚಿಂತನೆ ಸಿದ್ದರಾಮಯ್ಯ ಅವರಿಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಮೂವರು ಹೆಸರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬರುತ್ತಿವೆ. ಲಿಂಗಾಯತ ಸಮುದಾಯಕ್ಕೆ ಅವಕಾಶ ಕೊಡುವುದಾದರೆ ವಿದ್ಯಾರ್ಥಿ (ಎನ್‌ಎಸ್‌ಯುಐ) ಕಾಂಗ್ರೆಸ್‌ನಿಂದಲೂ ಪಕ್ಷದ ಸಂಘಟನೆಯಲ್ಲಿರುವ, ಯುವ ಘಟಕದ ಮಾಜಿ ಅಧ್ಯಕ್ಷ ಮಂಜುನಾಥ ವಾಸನದ ಹಾಗೂ ಗುಳೇದಗುಡ್ಡದ ಮಾಜಿ ಶಾಸಕ ಎಸ್‌.ಜಿ. ನಂಜಯ್ಯನಮಠ ಅವರ ಹೆಸರು ಮುಂಚೂಣಿಯಲ್ಲಿವೆ. ಇವರಿಬ್ಬರಲ್ಲಿ ಒಬ್ಬರು ಅಧ್ಯಕ್ಷರಾಗುವುದು ಬಹುತೇಕ ನಿಶ್ಚಿತ ಎಂದೂ ಹೇಳಲಾಗುತ್ತಿದೆ. ಆದರೆ, ಹಿಂದುಳಿದ ವರ್ಗದವರಿಗೂ ಒಂದು ಬಾರಿ ಅವಕಾಶ ದೊರೆಯಲೆಂಬ ಬೇಡಿಕೆ ಕೇಳಿ ಬಂದಿದ್ದು, ಈ ಕೋಟಾದಡಿ ಕೆಎಚ್‌ಡಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಒಬಿಸಿ ಘಟಕದ ಮಾಜಿ ಅಧ್ಯಕ್ಷರೂ ಆಗಿರುವ ನೇಕಾರ ಸಮುದಾಯದ ರವೀಂದ್ರ ಕಲಬುರಗಿ ಹೆಸರೂ ರೇಸ್‌ನಲ್ಲಿ ಸ್ಥಾನ ಪಡೆದಿದೆ.

ಒಟ್ಟಾರೆ, ಕಾಂಗ್ರೆಸ್‌ ಜಿಲ್ಲಾಕ್ಷಕ್ಷ ಸ್ಥಾನ ಯಾರಿಗೆ ದೊರೆಯಲಿದೆಂಬ ರಾಜಕೀಯ ಲೆಕ್ಕಾಚಾರ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಬೆಂಗಳೂರುಮೂಲಗಳು ಖಚಿತಪಡಿಸಿವೆ.

 

.ಶ್ರೀಶೈಲ ಕೆ. ಬಿರಾದಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ