ಪರಿಹಾರ ಕೇಂದ್ರದಿಂದ ಮನೆಯತ್ತ ಸಂತ್ರಸ್ತರು

•ಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮ•ಪ್ರವಾಹ ಇಳಿಮುಖವಾಗಿದ್ದರೂ ಸೇತುವೆಗಳು ಜಲಾವೃತ

Team Udayavani, Aug 18, 2019, 12:37 PM IST

ಮಹಾಲಿಂಗಪುರ: ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಪ್ರವಾಹವು ಇಳಿಮುಖವಾಗುತ್ತಿರುವುದರಿಂದ ನಂದಗಾಂವ, ಢವಳೇಶ್ವರ, ಮಾರಾಪುರ, ಮಿರ್ಜಿ, ಮಳಲಿ ಸೇರಿದಂತೆ ನೆರೆ ಸಂತ್ರಸ್ತ ಗ್ರಾಮಗಳ ಜನರು ಪ್ರವಾಹದಿಂದ ಮುಕ್ತವಾಗಿರುವ ಗ್ರಾಮಗಳಲ್ಲಿನ ತಮ್ಮ-ತಮ್ಮ ಮನೆಗಳತ್ತ ಹೋಗುತ್ತಿದ್ದಾರೆ.

ಸ್ವಚ್ಛತೆ ಸವಾಲು: ಪ್ರವಾಹದಿಂದ ಜಲಾವೃತಗೊಂಡ ನಂದಗಾಂವ ಮತ್ತು ಢವಳೇಶ್ವರ ಗ್ರಾಮಗಳ ಮನೆಗಳಲ್ಲಿ ಸಾಕಷ್ಟು ಕೆಸರು, ತ್ಯಾಜ್ಯವಸ್ತು ಸೇರಿದೆ. ಅವುಗಳ ಸ್ವಚ್ಛತೆ ಮತ್ತು ಪ್ರವಾಹದಿಂದ ಕೊಚ್ಚಿಹೋಗಿ ಉಳಿದಂತಹ ವಸ್ತು ತೊಳೆದು ಮನೆಯ ವಾತಾವರಣ ಸ್ವಚ್ಛ ಮಾಡಿಕೊಳ್ಳುವುದೇ ಸಂತ್ರಸ್ತರಿಗೆ ಬಹುದೊಡ್ಡ ಸವಾಲಾಗಿದೆ. ಮನೆಯಲ್ಲಿ ಕನಿಷ್ಠ ಒಂದು ಅಡಿಯಷ್ಟು ರಾಡಿ ತುಂಬಿಕೊಂಡಿರುವುದರಿಂದ ಅದನ್ನು ಹೊರಹಾಕಲು ಸಂತ್ರಸ್ತರು ಹೆಣಗಾಡುವಂತಾಗಿದೆ.

ಮನೆಯ ಛಾವಣಿ ಕುಸಿತ, ಗೋಡೆಗಳು ಬಿದ್ದಿರುವ, ಸಂಪೂರ್ಣ ಮನೆಗಳು ನೆಲಸಮವಾಗಿರುವುದರಿಂದ ಸಂತ್ರಸ್ತರ ಸ್ಥಿತಿ ಸಂಕಷ್ಟದಾಯಕವಾಗಿದೆ. ಗ್ರಾಮಗಳ ಪ್ರತಿಯೊಂದು ರಸ್ತೆ, ಚರಂಡಿಗಳು ನೆರೆಯ ರಾಡಿಮಣ್ಣಿನಿಂದ ತುಂಬಿರುವುದರಿಂದ ಗ್ರಾಪಂ ಅಧಿಕಾರಿಗಳು, ನೊಡಲ್ ಅಧಿಕಾರಿಗಳು ಗ್ರಾಮದ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ. ರೋಗ-ರುಜಿನಗಳು ಬಾರದಂತೆ ಮುಂಜಾಗ್ರತವಾಗಿ ಕ್ರಿಮಿಕೀಟನಾಶಕಗಳ ಸಿಂಪರಣೆ ನಿತ್ಯ ಮಾಡಲಾಗುತ್ತಿದೆ.

ಅಪಾರ ಹಾನಿ: ಪ್ರವಾಹದ ಪರಿಣಾಮ ಪ್ರತಿಯೊಂದು ಗ್ರಾಮದಲ್ಲಿನ ವಿದ್ಯುತ್‌ ಕಂಬಗಳು, ಟಿಸಿ, ಪತ್ರಾಸ್‌ ಶೆಡ್‌ಗಳು ನೆಲಕ್ಕುರುಳಿವೆ. ಇದರಿಂದಾಗಿ ಕುಡಿಯುವ ನೀರು ಮತ್ತು ವಿದ್ಯುತ್‌ ಸೌಲಭ್ಯಗಳನ್ನು ತತಕ್ಷಣ ಒದಗಿಸಲು ಸಾಧ್ಯವಿಲ್ಲ. ಸಂತ್ರಸ್ತರು ಗ್ರಾಮಗಳಿಗೆ ತೆರಳಿದರೂ ಸಹ, ಅವರ ಜೀವನ ಸಹಜ ಸ್ಥಿತಿಗೆ ಬರಲು ಇನ್ನು ತಿಂಗಳುಗಳ ಕಾಲ ಕಾಯಲೇಬೇಕಾಗಿದ್ದು ಅನಿವಾರ್ಯವಾಗಿದೆ.

ಸೇತುವೆಗಳು ಇನ್ನು ಜಲಾವೃತ: ಘಟಪ್ರಭಾ ನದಿಯ ಪ್ರವಾಹದಿಂದ ಕಳೆದ ಮೂರು ವಾರಗಳಿಂದ ಜಲಾವೃತವಾಗಿರುವ ಢವಳೇಶ್ವರ-ಢವಳೇಶ್ವರ, ಅವರಾದಿ-ನಂದಗಾಂವ, ಅಕ್ಕಿಮರಡಿ-ಮಿರ್ಜಿ ಸೇತುವೆಗಳು ಇನ್ನು ಜಲಾವೃತವಾಗಿವೆ. ಇದರಿಂದಾಗಿ ಪ್ರವಾಹ ಇಳಿಮುಖವಾಗಿದ್ದರೂ ಸಹ ಸೇತುವೆಗಳು ಜಲಾವೃತವಾಗಿರುವುದರಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ, ಗೋಕಾಕ ತಾಲೂಕಿನ ಹಳ್ಳಿಗಳ ಸಂಪರ್ಕ ಇನ್ನು ಸಾಧ್ಯವಾಗಿಲ್ಲ. ಸೇತುವೆಗಳು ಜಲಾವೃತವಾಗಿರುವದರಿಂದ 20 ದಿನಗಳಿಂದ ಗೋಕಾಕ-ಮಹಾಲಿಂಗಪುರ, ಮಹಾಲಿಂಗಪುರ- ಯಾದವಾಡ ಒಳ ಸಂಚಾರದ ಬಸ್‌ಗಳು ಬಂದಾಗಿವೆ.

ಸರಕಾರದಿಂದ ಆರಂಭಿಸಿರುವ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ಥರಿಗಾಗಿ ಊಟ, ಉಪಹಾರ ನಿರಂತರವಾಗಿದೆ. ಢವಳೇಶ್ವರ ಗ್ರಾಮದ ಶೇ. 25 ಸಂತ್ರಸ್ತರು ಮರಳಿ ಮನೆಗಳತ್ತ ಹೋಗುತ್ತಿದ್ದಾರೆ. ಗ್ರಾಮದಲ್ಲಿ ಡೆಂಗ್ಯೂ ಜ್ವರ, ಕಾಲರಾದಂತ ಕಾಯಿಲೆಗಳು ಹರಡದಂತೆ ಮುಂಜಾಗ್ರತವಾಗಿ ಸ್ವಚ್ಛತಾ ಕಾರ್ಯ ನಿರಂತರವಾಗಿವೆ ನಡೆಯುತ್ತಿವೆ.•ಶ್ರೀಧರ ನಂದಿಹಾಳ, ಢವಳೇಶ್ವರ ಗ್ರಾಮದ ನೋಡಲ್ ಅಧಿಕಾರಿ .

 

•ಚಂದ್ರಶೇಖರ ಮೋರೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ