ಮಾರ್ಗದುದ್ದಕ್ಕೂ ವಸ್ತುಗಳ ಎಸೆದು ಹೋದ ಹಂತಕರು

Team Udayavani, Mar 22, 2019, 6:36 AM IST

ಬೆಂಗಳೂರು: ಕುಖ್ಯಾತ ರೌಡಿ ಲಕ್ಷ್ಮಣನ ಹತ್ಯೆಗೈದ ಆರೋಪಿಗಳು, ಹತ್ಯೆ ವೇಳೆ ಬಳಸಿದ ಮೊಬೈಲ್‌ ಹಾಗೂ ಇತರೆ ವಸ್ತುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಸುಬ್ರಹ್ಮಣ್ಯ, ತಮಿಳುನಾಡಿನ ಕನ್ಯಾಕುಮಾರಿ ಹಾಗೂ ಇತರೆಡೆ ಬಿಸಾಡಿರುವುದು ಸಿಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ 12 ಮಂದಿ ಆರೋಪಿಗಳ ಪೈಕಿ ಆರು ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ಮಾ.25ರವರೆಗೆ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಮಾ.7ರಂದು ಕೃತ್ಯ ಎಸಗಿದ ಬಳಿಕ ಆರೋಪಿಗಳು ಎರಡು ಕಾರುಗಳಲ್ಲಿ ತಲೆಮರೆಸಿಕೊಂಡಿದ್ದರು. ಮಾರ್ಗ ಮಧ್ಯೆ ಕಾರುಗಳನ್ನು ಬಿಟ್ಟು, ಮೊಬೈಲ್‌ಗ‌ಳನ್ನು ಸ್ವಿಚ್‌ ಆಫ್ ಮಾಡಿಕೊಂಡು ಬಸ್‌ಗಳ ಮೂಲಕ ಕುಕ್ಕೆಸುಬ್ರಹ್ಮಣ್ಯ ಹಾಗೂ ಕನ್ಯಾಕುಮಾರಿಗೆ ತೆರಳಿದ್ದಾರೆ.

ಈ ವೇಳೆ ಮಾರ್ಗದುದ್ದಕ್ಕೂ ತಮ್ಮ ಮೊಬೈಲ್‌ಗ‌ಳು, ಬಟ್ಟೆ, ಮಾರಕಾಸ್ತ್ರಗಳು ಹಾಗೂ ಇತರೆ ವಸ್ತುಗಳನ್ನು ಅಲ್ಲಲ್ಲಿ ಬಿಸಾಡಿದ್ದಾರೆ. ಅಷ್ಟೇ ಅಲ್ಲದೆ, ರೂಪೇಶ್‌ ಮತ್ತು ವರ್ಷಿಣಿ ಮೊಬೈಲ್‌ಗ‌ಳಲ್ಲಿ ಎರಡರಿಂದ ಮೂರು ಜಿಬಿಯಷ್ಟು ಎಸ್‌ಎಂಎಸ್‌, ವ್ಯಾಟ್ಸ್‌ಆ್ಯಪ್‌ ಮತ್ತು ಕರೆ ವಿವರಗಳ ಮಾಹಿತಿ ಇದೆ.

ಜತೆಗೆ ಕೊಲೆಗೂ ಒಂದು ವಾರ ಮೊದಲು ಬೇರೆ-ಬೇರೆ ವ್ಯಕ್ತಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಹಣಕಾಸಿನ ವ್ಯವಸ್ಥೆ ಮಾಡಿಕೊಂಡಿರುವುದು ಕಂಡು ಬಂದಿದೆ. ಆದರೆ, ಆರೋಪಿಗಳು ಬಳಸಿದ ಕಾರುಗಳ ಮೂಲ ಮಾಲೀಕರ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಆರೋಪಿಗಳ ಪೈಕಿ ರೂಪೇಶ್‌ ಕೃತ್ಯ ಎಸಗಿದ ಬಳಿಕ ಚನ್ನಪಟ್ಟಣದ ಎಲೆತೋಟದಹಳ್ಳಿಯಲ್ಲಿರುವ ಆತನ ಜಮೀನಲ್ಲಿ ತನ್ನ ಮೊಬೈಲ್‌ನ್ನು ಬಚ್ಚಿಟ್ಟಿದ್ದ. ಹಲಗೂರಿನ ರಾಧಕೃಷ್ಣ ಬಟ್ಟೆ ಅಂಗಡಿಯಲ್ಲಿ ಎಲ್ಲ ಆರೋಪಿಗಳು ಬಟ್ಟೆಗಳನ್ನು ಖರೀಸಿದಿದ್ದಾರೆ.

ನಂತರ ದೇವೀರಹಳ್ಳಿಯಲ್ಲಿ ನಾಗೇಶ್‌ ಎಂಬುವರ ರೇಷ್ಮೆಹುಳದ ಮನೆ ಸಮೀಪದಲ್ಲಿ ಮಾರಕಾಸ್ತ್ರಗಳನ್ನು ತೊಳೆದು, ಬಟ್ಟೆ ಬದಲಿಸಿದ್ದಾರೆ. ಅನಂತರ ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಸಾತನೂರಿನ ಹೊನ್ನಾಗಾನಹಳ್ಳಿಯ ಬಿಡಬ್ಲ್ಯೂಎಸ್‌ಎಸ್‌ಬಿ ಪೈಪ್‌ಲೈನ್‌ ರಸ್ತೆ ಪಕ್ಕದಲ್ಲಿರುವ ಖಾಲಿ ಜಮೀನಲ್ಲಿ ಬಿಟ್ಟು ಹೋಗಿದ್ದರು.

ಇನ್ನು ಹೇಮಂತ್‌ ಅಲಿಯಾಸ್‌ ಹೇಮಿ, ಆಕಾಶ್‌ ಮತ್ತು ದೇವರಾಜ್‌ ತಮ್ಮ ರಕ್ತದ ಕಲೆಯಿದ್ದ ಬಟ್ಟೆಗಳನ್ನು ನಂಜನಗೂಡಿನ ಕಪಿಲಾ ನದಿ ಸಮೀಪದ ಸೇತುವೆ ಕೆಳಗೆ ಬಿಸಾಡಿದ್ದರು. ಈ ಪೈಕಿ ರೂಪೇಶ್‌ ಮೊಬೈಲ್‌, ಸ್ಕಾರ್ಪಿಯೋ, ಮಾರಕಾಸ್ತ್ರಗಳು ಹಾಗೂ ಆರೋಪಿಗಳ ರಕ್ತದ ಕಲೆಗಳಿರುವ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಕೃತ್ಯಕ್ಕೆ ಬಳಸಲಾಗಿದ್ದ ಟಾಟಾ ಇಂಡಿಕಾ ಕಾರನ್ನು ಉಲ್ಲಾಳ ಉಪನಗರದಲ್ಲಿ ವಶಕ್ಕೆ ಪಡೆಯಲಾಗಿದೆ.

ಕ್ಯಾಟ್‌ರಾಜನ ಮೂವರು ಸಹಚರರ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಟ್‌ರಾಜನ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆ ನಿವಾಸಿ ಉದಯ್‌(23), ಪೀಣ್ಯ ನಿವಾಸಿ ಚೇತನ್‌ ಅಲಿಯಾಸ್‌ ಕರಿಯ ಚೇತು (21), ಕುರುಬರಹಳ್ಳಿಯ ಚೇತನ್‌ ಅಲಿಯಾಸ್‌ ಹಂದಿಚೇತು (25)ಬಂಧಿತರು.

ಈ ಮೂಲಕ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಆರೋಪಿಗಳ ಪೈಕಿ ಹಂದಿ ಚೇತು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಅಲ್ಲಿಂದಲೇ ಲಕ್ಷ್ಮಣನ ಕೊಲೆಗೆ ಸಹಕಾರ ನೀಡಿದ್ದಾನೆ. ಪ್ರಕರಣದಲ್ಲಿ ಇತರೆ ಆರೋಪಿಗಳ ಕೈವಾಡ ಕೂಡ ಇದ್ದು, ಶೋಧ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಆರು ಮಂದಿ ಪೊಲೀಸರ ವಶಕ್ಕೆ: ಬಂಧಿತ ಹನ್ನೆರಡು ಮಂದಿ ಆರೋಪಿಗಳ ಪೈಕಿ ಆರು ಮಂದಿಯನ್ನು ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮಾ.25ರವರಗೆ ಪೊಲೀಸ್‌ ವಶಕ್ಕೆ ಪಡೆದುಕೊಂಡಿದ್ದಾರೆ. ರೂಪೇಶ್‌, ವರ್ಷಿಣಿ, ದೇವರಾಜು, ವರುಣ್‌ ಕುಮಾರ್‌, ಮಧುಕುಮಾರ್‌, ಅಲೋಕ ಆರೋಪಿಗಳನ್ನು ಗುರುವಾರ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು, ಮಾ.25ರವರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಕಾ ಕಾಯ್ದೆ ಜಾರಿ?: ಬಂಧಿತ ಎಲ್ಲ ಆರೋಪಿಗಳ ವಿರುದ್ಧ “ಕೋಕಾ ಕಾಯ್ದೆ’ ಅಡಿ ಪ್ರಕರಣ ದಾಖಲಿಸಲು ಸಿಸಿಬಿ ಪೊಲೀಸರು ಸಿದ್ದತೆ ನಡೆಸಿದ್ದಾರೆ. ಆರೋಪಿಗಳು ಸಂಘಟಿತವಾಗಿ ವ್ಯವಸ್ಥಿತ ರೀತಿಯಲ್ಲಿ ಕೃತ್ಯ ಎಸಗಿರುವುದು ಇದುವರೆಗಿನ ತನಿಖೆಯಲ್ಲಿ ಕಂಡು ಬಂದಿದೆ. ಅಲ್ಲದೆ, ಪ್ರಕರಣದಲ್ಲಿ ಭಾಗಿಯಾಗಿರುವ 12 ಮಂದಿ ಪೈಕಿ 11 ಮಂದಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಕೋಕಾ ಕಾಯ್ದೆ ಜಾರಿ ಮಾಡಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.


ಈ ವಿಭಾಗದಿಂದ ಇನ್ನಷ್ಟು

 • ಬೆಂಗಳೂರು: ಸಮಸ್ಯೆಗೆ ಸೂಚಿಸಿದ ಪರಿಹಾರವೇ ಸಮಸ್ಯೆಯಾಗಿ ಪರಿಣಮಿಸಿದರೆ ಏನಾಗಬಹುದು? ಇದನ್ನು ತಿಳಿಯಲು ನೀವು ಒಮ್ಮೆ ಕೆ.ಆರ್‌.ಪುರದ ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ...

 • ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಒಂದು ತಿಂಗಳಲ್ಲಿ 203 ಮಂದಿಯಲ್ಲಿ ರೋಗ ದೃಢಪಟ್ಟಿದೆ. ಇದಕ್ಕೆ ಸಾಂಕ್ರಾಮಿಕ...

 • ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು. ಕನ್ನಡ...

 • ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲೂ ಪಕ್ಷ ಇಟ್ಟುಕೊಂಡಿದ್ದ ಗುರಿ ತಲುಪಲು ಶ್ರಮಿಸಿದ...

 • ಬೆಂಗಳೂರು: ಪ್ರಧಾನಿ ಮೋದಿಯವರ ಪ್ರಚಂಡ ಬಹುಮತಕ್ಕಾಗಿ ಬಿಜೆಪಿ ನಾಯಕರು, ಕಾಯಕರ್ತರಂತೆ ಮೋದಿ ಅಭಿಮಾನಿಗಳು, ಅಭಿಮಾನಿ ಸಂಘಟನೆಗಳು ತೆರೆ ಮರೆಯಲ್ಲಿ ಮಾಡಿದ್ದ...

ಹೊಸ ಸೇರ್ಪಡೆ

 • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

 • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

 • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

 • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...