ಮೇಲ್ಮನೆ ಸದಸ್ಯರಾಗಿ ಸಿ.ಎಂ. ಇಬ್ರಾಹಿಂ ಪ್ರಮಾಣ
Team Udayavani, Aug 27, 2017, 12:28 PM IST
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಯಾಗಿದ್ದ ಕಾಂಗ್ರೆಸ್ನ ಸಿ.ಎಂ. ಇಬ್ರಾಹಿಂ ಶನಿವಾರ ಪರಿಷತ್ತಿನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಕೊಠಡಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಭಾಪತಿಗಳು ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಬ್ರಾಹಿಂ, 36 ವರ್ಷಗಳ ಅನಂತರ ವಿಧಾನ ಪರಿಷತ್ ಪ್ರವೇಶಿಸುತ್ತಿದ್ದು, ಹೆಸರಿಗೆ ತಕ್ಕಂತೆ ಮೇಲ್ಮನೆಯ ಗೌರವ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ರಾಜಕಾರಣದಲ್ಲಿ ನನಗಿರುವ ಅನುಭವದೊಂದಿಗೆ ಪರಿಷತ್ನ ಘನತೆಗೆ ಚ್ಯುತಿ ಬರದಂತೆ ಹಿರಿಯರು ಮತ್ತು ಕಿರಿಯರೊಂದಿಗೆ ಕೆಲಸ ನಿರ್ವಹಿಸುತ್ತೇನೆ ಎಂದರು.
ನಾನು ವಿಧಾನ ಪರಿಷತ್ಗೆ ನಾಮಪತ್ರ ಸಲ್ಲಿಸಿದ್ದು ಶಿವಮೊಗ್ಗ ಜಿಲ್ಲೆ ಭದ್ರಾವತಿಯವರ ಜತೆಗೆ. ಇದೀಗ ಶಿವಮೊಗ್ಗ ಜಿಲ್ಲೆಯವರಿಂದಲೇ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಇದು ನನ್ನ ಪಾಲಿನ ಅತ್ಯಂತ ಖುಷಿಯ ಕ್ಷಣ ಎಂದು ಹೇಳಿದರು.