KC ಕಾರಿಯಪ್ಪ ಪ್ರೇಮ ಪ್ರಕರಣ: ಡ್ರಗ್ಸ್ ಸೇವನೆ ಖಾತ್ರಿಯಾದರೆ ಎನ್ಡಿಪಿಎಸ್ ಅಡಿ ಕೇಸು
Team Udayavani, Dec 27, 2023, 10:55 AM IST
ಬೆಂಗಳೂರು: ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ಮತ್ತು ದಿಶಾ ಕಾರಿಯಪ್ಪ ಪ್ರೇಮ ಪ್ರಕರಣ ಸಂಬಂಧ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳ ಸಂಬಂಧ ದೂರುದಾರರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಿಯಪ್ಪ ಮತ್ತು ದಿಶಾ ಎಂಬವರು ಪ್ರತ್ಯೇಕವಾಗಿ ಆರ್.ಟಿ.ನಗರ ಮತ್ತು ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೂಂದೆಡೆ ಇಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಮಾದಕ ವಸ್ತು ಸೇವನೆಯ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ. ಅಲ್ಲದೆ, ಕಾರಿಯಪ್ಪ, ಪ್ರೇಯಸಿ ದಿಶಾ ಮಾದಕ ವಸ್ತು ಸೇವನೆಯ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ಒಂದು ವೇಳೆ ಪ್ರಕರಣದ ತನಿಖೆಯಲ್ಲಿ ಇಬ್ಬರು ಮಾದಕ ವಸ್ತು ಸೇವಿಸಿರುವುದು ಪತ್ತೆಯಾದರೆ ಅಥವಾ ಖರೀದಿಸಿರುವುದು ಖಾತ್ರಿಯಾದರೆ ಎನ್ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗುತ್ತದೆ ಎಂದು ಹೇಳಿದರು.