ಪೆಟ್‌ ಪ್ರಾಣಿಗಳ ಬಿಂಕ, ಬಿನ್ನಾಣ…!

Team Udayavani, Nov 17, 2019, 3:08 AM IST

ಬೆಂಗಳೂರು: ರ್‍ಯಾಂಪ್‌ ಮೇಲೆ ಲಲನೆಯರ ಕ್ಯಾಟ್‌ ವಾಕ್‌ ನೋಡಿರುತ್ತೀರಿ. ಆದರೆ, ಇಲ್ಲಿ ಬೆಕ್ಕು ಹಾಗೂ ಶ್ವಾನಗಳ ಬಿಂಕದ ನಡಿಗೆಗೆ ಲಲನೆಯರ ಸಾಥ್‌ ನೀಡಿದರು. ಇಂಥದೊಂದು ವಿಶಿಷ್ಟತೆಗೆ ವೇದಿಕೆಯಾಗಿದ್ದು ಪೆಟ್‌ಫೆಡ್‌ ಉತ್ಸವ. ನಗರದ ಜಯಮಹಲ್‌ ಪ್ಯಾಲೆಸ್‌ ಹೋಟೆಲ್‌ ಆವರಣದಲ್ಲಿ ಎರಡು ದಿನಗಳ ಭಾರತದ ಅತಿದೊಡ್ಡ ಪೆಟ್‌ಫೆಡ್‌ ಉತ್ಸವ ನಡೆಯುತ್ತಿದೆ. ಉತ್ಸವದಲ್ಲಿ ಎತ್ತ ಕಣ್ಣಾಡಿಸಿದರು ಚಂದ ಚಂದದ ಶ್ವಾನಗಳು.

ಅವುಗಳನ್ನು ಪಳಗಿಸುತ್ತಿರುವ ಮಾಲೀಕರು. ಕರ್ನಾಟಕ ಪೊಲೀಸ್‌ ಇಲಾಖೆಯ ಸಹಯೋಗದೊಂದಿಗೆ ಪೊಲೀಸ್‌ ಶ್ವಾನದಳ ಪ್ರದರ್ಶನ ಮತ್ತು ವರ್ಲ್ಡ್ ಕ್ಯಾಟ್‌ ಫೆಡರೇಷನ್‌ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಬೆಕ್ಕು ಪ್ರದರ್ಶನದ ಜತೆಗೆ ಸಾಕು ಪ್ರಾಣಿಗಳ ನಡಿಗೆ, ದತ್ತು ಸ್ವೀಕಾರ ಸೇರಿದಂತೆ ಶ್ವಾನ ಮತ್ತು ಬೆಕ್ಕುಗಳಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಮೊದಲ ದಿನವಾದ ಶನಿವಾರ 1,300 ಶ್ವಾನಗಳು 130 ಬೆಕ್ಕುಗಳು ಭಾಗವಹಿಸಿದ್ದವು. ಫ್ಯಾಷನ್‌ ಶೋನಲ್ಲಿ ಶ್ವಾನ ಹಾಗೂ ಬೆಕ್ಕುಗಳು ತಮ್ಮ ಮಾಲೀಕರ ಜತೆ ರ್‍ಯಾಂಪ್‌ ಮೇಲೆ ನಡೆದು ಗಮನಸೆಳೆದವು. ಪ್ರತ್ಯೇಕ ಆಟದ ವಲಯಗಳಲ್ಲಿ ರಿಂಗ್‌ ಆಟ, ಕಿಟ್‌ ಪ್ಲೇ ಪೆಬ್‌, ಈಜು ಚೆಂಡಿನ ಆಟ, ಜಾರು ಬಂಡೆ ಸೇರಿ ವಿವಿಧ ಆಟಗಳನ್ನು ಆಯೋಜಿಸಲಾಗಿದೆ.

ಸಾಕು ಪ್ರಾಣಿ ದತ್ತು ಜಾಗೃತಿ: “ದತ್ತು ಪಡೆಯಿರಿ ಕೊಲ್ಲಬೇಡಿ’ ಎಂಬ ವಾಕ್ಯದೊಂದಿಗೆ ಸಾಕು ಪ್ರಾಣಿಗಳ ದತ್ತು ಸ್ವೀಕಾರದ ಬಗ್ಗೆ ವರ್ಲ್ಡ್ ಫಾರ್‌ ಆಲ್‌, ಸಿಯುಪಿಎ, ಪಿಎಫ್ಎ ಮುಂತಾದ ಎನ್‌ಜಿಒಗಳು ಜಾಗೃತಿ ಮೂಡಿಸಿದವು. ಇದೇ ಮೊದಲ ಬಾರಿ ಲಿಮ್ಕಾ ವಿಶ್ವ ದಾಖಲೆ ಮಾಡಿರುವ ಶ್ವಾನ ಕಾರ್ನಿವಲ್‌ ಕೂಡ ಭಾಗವಹಿಸಿರುವುದು ಉತ್ಸವದ ವಿಶೇಷ.

ಇಂದೂ ಇರಲಿದೆ ಉತ್ಸವ: ಭಾನುವಾರವೂ ಉತ್ಸವ ಮುಂದುವರಿಯಲಿದ್ದು, ಮಧ್ಯಾಹ್ನದಿಂದ ರಾತ್ರಿವರೆಗೂ ಶ್ವಾನ ಸಂಗೀತ ಕಾರ್ಯಕ್ರಮ, ಪೊಲೀಸ್‌ ಶ್ವಾನ ಪ್ರದರ್ಶನ, ಶ್ವಾನ ಹಾಗೂ ಬೆಕ್ಕುಗಳ ಪ್ಯಾಷನ್‌ ಶೋ ಹಾಗೂ ಪ್ರಶಸ್ತಿ ಪ್ರದಾನ ಸಮಾರಮಭ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ