ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಸಿದ್ಧತೆ?
Team Udayavani, Feb 25, 2018, 6:40 AM IST
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವರ್ಗಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಈ ಸಂಬಂಧ ದೊಡ್ಡ ಪಟ್ಟಿಯೊಂದು ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ.
ಆಯಾಕಟ್ಟಿನ ಜಾಗಗಳಲ್ಲಿರುವ 15ಕ್ಕೂ ಹೆಚ್ಚು ಹಿರಿಯ ಐಪಿಎಸ್ ಅಧಿಕಾರಿಗಳ ಪಟ್ಟಿ ಸಿದ್ದಪಡಿಸಿಕೊಳ್ಳಲಾಗಿದ್ದು, ಅಧೀಕೃತ ವರ್ಗಾವಣೆ ಆದೇಶ ಹೊರಡಿಸುವುದಷ್ಟೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಆದರೆ, ವರ್ಗಾವಣೆ ವಿಚಾರವನ್ನು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿಲ್ಲ.
ನೀತಿ ಜಾರಿಗೆ ಬಂದರೆ ವರ್ಗಾವಣೆಗೆ ಅವಕಾಶವಿರುವುದಿಲ್ಲ. ಅದೇ ರೀತಿ ನೀತಿ ಸಂಹಿತೆ ಜಾರಿಯಾಗುವ ಕೆಲವೇ ದಿನಗಳ ಮುಂಚೆ ವರ್ಗಾವಣೆ ಮಾಡಿದರೆ ಪ್ರತಿಪಕ್ಷಗಳಿಂದ ಟೀಕೆಗಳು ಎದುರಿಸಬೇಕಾಗಬಹುದು ಅಥವಾ ಚುನಾವಣಾ ಆಯೋಗದ ಆಕ್ಷೇಪಣೆ ಕೇಳಿಬರಬಹುದು ಎಂಬ ಲೆಕ್ಕಚಾರದಿಂದ ಈಗ ವರ್ಗಾವಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇದೇ ಜ.23ರಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದಕ್ಕೆ ಚುನಾವಣಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅದನ್ನು ತಡೆ ಹಿಡಿದಿತ್ತು ಎನ್ನುವುದು ಗಮನಾರ್ಹ.