ರಸೆಲ್‌ ಮಾರುಕಟ್ಟೆ ದುಸ್ಥಿತಿ ಕೇಳುವವರಿಲ್ಲ!

ಮಾರುಕಟ್ಟೆಗೆಂದು ಕಾಯಕಲ್ಪ?

Team Udayavani, Jun 10, 2019, 3:09 AM IST

ಚಿತ್ರ: ಫ‌ಕ್ರುದ್ದೀನ್‌ ಎಚ್‌.

ಬೆಂಗಳೂರು: ರಸೆಲ್‌ ಮಾರುಕಟ್ಟೆಯನ್ನು ಬ್ರಿಟಿಷರು ಸೈನಿಕರಿಗಾಗಿ ಕಟ್ಟಿಸಿದ್ದರು. ಈ ಮಾರುಕಟ್ಟೆ ಬೆಂಗಳೂರಿಗರಿಗೆ ಬ್ರಿಟಿಷರು ನೀಡಿದ ಕೊಡುಗೆಯೂ ಹೌದು. 1927ರಲ್ಲಿ ಮಾರುಕಟ್ಟೆ ಉದ್ಘಾಟನೆಗೊಂಡಿತ್ತು.

ಇಂಡೋ-ಇಸ್ಲಾಮಿಕ್‌ ಶೈಲಿಯಲ್ಲಿ ರಸೆಲ್‌ ಮಾರ್ಕೆಟ್‌ ಕಟ್ಟಡವನ್ನು ಕಟ್ಟಲಾಗಿದ್ದು, ಅಂದಿನ ಮುನ್ಸಿಪಾಲ್‌ ಕಮೀಷನರ್‌ ಆಗಿದ್ದ ಟಿ.ಬಿ.ರಸೆಲ್‌ ಅವರ ಹೆಸರನ್ನೇ ಈ ಮಾರುಕಟ್ಟೆಗೆ ನಾಮಕರಣ ಮಾಡಲಾಗಿದೆ. ಬ್ರಿಟಿಷರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಸೈನಿಕರಿಗೆ ಸುಲಭವಾಗಿ ನಿತ್ಯದ ಸಮಾಗ್ರಿಗಳು ಸಿಗಲಿ ಎನ್ನುವ ಉದ್ದೇಶದಿಂದ ರಸೆಲ್‌ ಮಾರುಕಟ್ಟೆ ಸ್ಥಾಪಿಸಲಾಗಿತ್ತು ಎಂದು ವಿವರಿಸುತ್ತಾರೆ ಇತಿಹಾಸ ತಜ್ಞರು.

ಈ ಭವ್ಯ ಪರಂಪರೆಯ ಕಟ್ಟಡವನ್ನು ಉಳಿಸಿಕೊಳ್ಳುವ ಯಾವ ಕೆಲಸವೂ ನಡೆದಿಲ್ಲ. “ಮಾರುಕಟ್ಟೆಯ ಮೇಲೆ ಗೋಪುರದಲ್ಲಿದ್ದ ಗೋಡೆಗಡಿಯಾರದ ಘಂಟೆ 20 ವರ್ಷಗಳ ಹಿಂದೆಯೇ ಕಳುವಾಗಿದೆ. ಆ ಕಾಲದಲ್ಲಿ ಇಡೀ ಊರಿಗೆ ಗಡಿಯಾರದ ಘಂಟೆ ಸದ್ದು ಕೇಳಿಸುತಿತ್ತು. ಈಗ ಅದು ನೆನಪಷ್ಟೇ ಇಂದಿನ ಪೀಳಿಗೆಗೆ ಗೋಡೆ ಗಡಿಯಾರದ ಬಗ್ಗೆ ಗೊತ್ತೇ ಇಲ್ಲ’ ಎಂದು ವಿಷಾದ ವ್ಯಕ್ತಪಡಿಸುತ್ತಾರೆ ರಸೆಲ್‌ ಮಾರುಕಟ್ಟೆಯ ವ್ಯಾಪಾರಿ ಅಸ್ಲಂ.

ರಸೆಲ್‌ ಮಾರುಕಟ್ಟೆ ಎಂದೋ ತನ್ನ ಬಣ್ಣವನ್ನು ಕಳೆದುಕೊಂಡಿದೆ. ಗೋಡೆಯ ಚೆಕ್ಕೆಗಳು ಕಳಚಿ ಬೀಳುತ್ತಿವೆ. ಮಾಂಸದ ಅಂಗಡಿಗಳ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗದೆ, ಮಾರುಕಟ್ಟೆಯ ಸುತ್ತಲ ಪ್ರದೇಶಗಳಲ್ಲಿ ದುರ್ನಾತ ಬೀರುತ್ತಿದೆ. ಪಾರಂಪರಿಕ ಕಟ್ಟಡದ ಗೋಡೆಗಳ ಮೇಲೆ ಗುಟ್ಕಾ ಕಲೆಯೇ ತುಂಬಿಕೊಂಡಿದೆ. ಅಂದು ಅಳವಡಿಸಿದ್ದ ದ್ವಾರಗಳು ತುಕ್ಕು ಹಿಡಿದಿವೆ. ಇದು ನಮ್ಮ ಪಾರಂಪರಿಕ ಕಟ್ಟಡದ ಬಗ್ಗೆ ಅಧಿಕಾರಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಎಷ್ಟು ಕಾಳಜಿ ವಹಿಸಿದ್ದಾರೆ ಎನ್ನುವುದಕ್ಕೆ ಉದಾಹರಣೆಯಷ್ಟೇ.

ಪಾರಂಪರಿಕ ಕಟ್ಟಡ ಒಂದು ಲೆಕ್ಕದಲ್ಲಿ ಅಕ್ಷರಶಃ ಅನಾಥವಾಗಿದೆ. ಮಳೆ ಬಂದರೆ ರಸೆಲ್‌ ಮಾರುಕಟ್ಟೆಯಲ್ಲಿ ಸಣ್ಣ ರಾಜಕಾಲುವೆಯೇ ಸೃಷ್ಟಿಯಾಗುತ್ತದೆ. ಮಾಂಸತ್ಯಾಜ್ಯ, ಸುತ್ತಮುತ್ತಲ ಪ್ರದೇಶಗಳ ಹೊಲಸು ಮಾರುಕಟ್ಟೆಯೊಳಗೆ ಸೇರಿಕೊಳ್ಳುತ್ತದೆ. ಮಳೆ ಬಂದಾಗ ಹೊಲಸು ನೀರು ಒಳಗೆ ಬರದಂತೆ ತಡೆಯಲು ವ್ಯವಸ್ಥೆ ಮಾಡಿಲ್ಲ. ಪಾರಂಪರಿಕ ಕಟ್ಟಡದಲ್ಲಿರುವ ಈ ಮಾರುಕಟ್ಟೆಗೆ ತನ್ನದೇ ಆದ ಮಹತ್ವವಿದೆ.

ಪ್ರತಿದಿನ ಬೆಳಗ್ಗೆ 4 ಗಂಟೆಗೆ ಶುರುವಾಗುವ ವ್ಯಾಪಾರ ರಾತ್ರಿಯವರೆಗೂ ನಡೆಯುತ್ತದೆ. ಮಾರುಕಟ್ಟೆಯ ಮೊದಲ ಮಹಡಿಯಲ್ಲಿ ಬೆಳಗ್ಗೆ ಹೋಲ್‌ಸೇಲ್‌ ದರದಲ್ಲಿ ತರಕಾರಿಗಳ ಮಾರಾಟ ಪ್ರಾರಂಭವಾಗುತ್ತದೆ. ವ್ಯಾಪಾರ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಮೊದಲ ಮಹಡಿಯಲ್ಲಿ ಕಸದ ತೊಟ್ಟಿಯೇ ಸೃಷ್ಟಿಯಾಗುತ್ತದೆ. ಮೊದಲ ಮಹಡಿಯ ಮೂಲೆಗಳನ್ನು ಕೆಲವರು ಮೂತ್ರ ವಿರ್ಸಜನೆ ಮಾಡಲು ಬಳಸಿಕೊಳ್ಳುತ್ತಿರುವುದರಿಂದ ಪಾರಂಪರಿಕ ಕಟ್ಟಡದ ಗೋಡೆಗಳು ಸೊರಗುತ್ತಿವೆ!

ಈ ಪ್ರದೇಶದಲ್ಲಿ ದೇವಾಲಯ, ಚರ್ಚ್‌ ಮತ್ತು ಮಸೀದಿ ಎಲ್ಲವೂ ಇರುವುದರಿಂದ ಎಲ್ಲ ಸಮುದಾಯ, ವರ್ಗದ ಜನರೂ ಇಲ್ಲಿ ವ್ಯಾಪಾರಕ್ಕೆ ಬರುತ್ತಾರೆ. ರಂಜಾನ್‌ ಸಮಯದಲ್ಲಿ ರಸೆಲ್‌ ಮಾರುಕಟ್ಟೆ ಆರ್ಕಷಣೆಯ ಕೇಂದ್ರ ಬಿಂದುವಾಗುತ್ತದೆ. ರಂಜಾನ್‌ಗೆ ಒಣ ಹಣ್ಣು, ಖರ್ಜೂರ ಮತ್ತು ಹಣ್ಣುಗಳ ವ್ಯಾಪಾರ ಭರ್ಜರಿಯಾಗೇ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಪಾರ್ಕಿಂಗ್‌ಗೆ ಸೂಕ್ತ ಸ್ಥಳ ಸಿಗದೆ ಇರುವುದರಿಂದ ಗ್ರಾಹಕರ ಸಂಖ್ಯೆ ಕುಸಿದಿದೆ ಎನ್ನುತ್ತಾರೆ ವ್ಯಾಪಾರಿಗಳು.

ಮಾಂಸ ತ್ಯಾಜ್ಯ ಕಗ್ಗಂಟು: ರಸೆಲ್‌ ಮಾರುಕಟ್ಟೆಯ ಪಕ್ಕದ ರಸ್ತೆ ಮಾಂಸ ತ್ಯಾಜ್ಯ, ಹಸಿ ತ್ಯಾಜ್ಯದಿಂದ ತುಂಬಿಕೊಂಡು ಸುತ್ತಮುತ್ತಲಿನ ಅರ್ಧ ಕಿ.ಮೀವರೆಗೆ ದುರ್ನಾತ ಹಬ್ಬಿರುತ್ತದೆ. ಈ ದುರ್ನಾತದ ಸಮಸ್ಯೆಯಿಂದ ಇಲ್ಲಿನ ಸಾರ್ವಜನಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಐದು ನಿಮಿಷ ಇಲ್ಲಿ ನಿಂತರೂ ಹೊಟ್ಟೆ ತೊಳೆಸಿದ ಅನುಭವವಾಗುತ್ತದೆ. “ನಿತ್ಯ ಈ ದುರ್ನಾತದಿಂದ, ಆರೋಗ್ಯ ಹದಗೆಟ್ಟಿದೆ. ಇಲ್ಲಿ ದುಡಿಯುವ ಹಣವೆಲ್ಲಾ ಆಸ್ಪತ್ರೆಗೆ ಸುರಿಯುತ್ತಿದ್ದೇನೆ’ ಎನ್ನುತ್ತಾರೆ ಮೀನು ಅಂಗಡಿಯಲ್ಲಿ ಕೆಲಸ ಮಾಡುವ ಜಾನ್‌.

ಎಚ್ಚೆತ್ತುಕೊಳ್ಳದ ಬಿಬಿಎಂಪಿ: 2012ರಲ್ಲಿ ರಸೆಲ್‌ ಮಾರುಕಟ್ಟೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸಿ ಹಲವು ಮಳಿಗೆಗಳು ಭಸ್ಮವಾಗಿದ್ದವು. ಇದಾದ ಬಳಿಕ ಸಮಿತಿ ರಚಿಸಿ, ವರದಿ ಆಧರಿಸಿ ರಸೆಲ್‌ ಮಾರುಕಟ್ಟೆಯನ್ನು ತಕ್ಕಮಟ್ಟಿಗೆ ನವೀಕರಣ ಮಾಡಲಾಗಿತ್ತು. ಆದರೆ, ಬೆಂಕಿ ನಂದಿದರೂ ಹೊಗೆ ನಿಲ್ಲಲಿಲ್ಲ ಎನ್ನುವಂತೆ ಇಂದಿಗೂ ಬೆಂಕಿ ಅವಘಡದ ಆತಂಕವನ್ನು ವ್ಯಾಪಾರಿಗಳು, ಗ್ರಾಹಕರು ಎದುರಿಸುತ್ತಲೇ ಇದ್ದಾರೆ. ಮಾರುಕಟ್ಟೆಯಲ್ಲಿ ಮತ್ತೆ ಬೆಂಕಿ ಅವಘಡ ಸಂಭವಿಸಿದರೆ ಅದನ್ನು ನಂದಿಸಲು ಸಣ್ಣ ಅಗ್ನಿಶಮನ ಸಾಧನವೂ ಲಭ್ಯವಿಲ್ಲ.

ವಾಹನಗಳ ಪಾಕಿಂಗ್‌ ಸಮಸ್ಯೆ: ಉಳಿದ ಮಾರುಕಟ್ಟೆಗಳ ರೀತಿಯೇ ರಸೆಲ್‌ ಮಾರುಕಟ್ಟೆಯಲ್ಲೂ ಪಾರ್ಕಿಂಗ್‌ ಸಮಸ್ಯೆ ಇದೆ. ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ದ್ವಿಚಕ್ರವಾಹನಗಳಿಗೆ ಸ್ಪಲ್ಪ ಸ್ಥಳಾವಕಾಶ ನೀಡಲಾಗಿದೆಯಾದರೂ, ಯಾವುದೇ ಭದ್ರತೆ ಇಲ್ಲ. ಸುತ್ತಮುತ್ತಲ ಪ್ರದೇಶದಲ್ಲಿ ಕಾರ್‌ಗಳ ನಿಲುಗಡೆಗೆ ಸ್ಥಳಾವಕಾಶವೇ ಇಲ್ಲ.

ಯುದ್ಧ ನಡೆದಿದ್ದು 1791ರಲ್ಲಿ…: ಭಾನುವಾರ ಪ್ರಕಟವಾದ ಮಾರುಕಟ್ಟೆಗೆಂದು ಕಾಯಕಲ್ಪ ಸರಣಿ ಭಾಗ-3ರಲ್ಲಿನ ಯುದ್ಧಭೂಮಿಯ ವರ್ಷದ ಉಲ್ಲೇಖನ ತಪ್ಪಾಗಿತ್ತು. 1791ರಲ್ಲಿ ಟಿಪ್ಪು ಸುಲ್ತಾನ್‌ ಸೈನ್ಯ ಮತ್ತು ಬ್ರಿಟಿಷರ ನಡುವೆ ಯುದ್ಧ ನಡೆದಿತ್ತು ಎನ್ನುವುದು ಸರಿ.

* ಹಿತೇಶ್‌ ವೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ