ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

Team Udayavani, Mar 17, 2019, 6:38 AM IST

ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಡೆತ್‌ನೋಟ್‌ ಬರೆದಿಟ್ಟು ತನ್ನಿಬ್ಬರು ವಿಶೇಷ ಚೇತನ ಮಕ್ಕಳಿಗೆ ವಿಷವುಣಿಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ವ್ಯಾಪ್ತಿಯ ದೊಡ್ಡತೋಗೂರು ಸಮೀಪ ಶನಿವಾರ ನಡೆದಿದೆ. ದೊಡ್ಡತೋಗೂರಿನ ಮುನಿರೆಡ್ಡಿಪಾಳ್ಯ ನಿವಾಸಿ ರಾಧಮ್ಮ (52) ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೂ ಮೊದಲು ಹಿರಿಯ ಪುತ್ರ ಹರೀಶ್‌ (28), ಕಿರಿಯ ಪುತ್ರ ಸಂತೋಷ್‌ (25)ಗೆ ವಿಷವುಣಿಸಿ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಮಿಳುನಾಡಿನ ತಳಿ ಗ್ರಾಮದ ರಾಧಮ್ಮ, 30 ವರ್ಷಗಳ ಹಿಂದೆ ದಶರಥರೆಡ್ಡಿ ಎಂಬುವವರನ್ನು ವಿವಾಹವಾಗಿದ್ದು, ದಂಪತಿಗೆ ಹರೀಶ್‌ ಮತ್ತು ಸಂತೋಷ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಆದರೆ, ಇಬ್ಬರೂ ಮಕ್ಕಳು ವಿಶೇಷಚೇತನರಾಗಿದ್ದು, ಓಡಾಡಲು ಆಗದೆ ಮಲಗಿದಲ್ಲೇ ಇರಬೇಕಿತ್ತು. ಈ ಮಧ್ಯೆ 20 ವರ್ಷಗಳ ಹಿಂದೆ ದಶರಥರೆಡ್ಡಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ತೊರೆದು ದೂರ ಹೋಗಿದ್ದಾರೆ. ಹೀಗಾಗಿ ರಾಧಮ್ಮ ತನ್ನಿಬ್ಬರು ಮಕ್ಕಳ ಜತೆ ವಾಸವಾಗಿದ್ದರು.

ಬಾಡಿಗೆ ಹಣದಲ್ಲಿ ಜೀವನ ನಿರ್ವಹಣೆ: ದೊಡ್ಡತೋಗೂರಿನಲ್ಲಿ ರಾಧಮ್ಮ ಅವರಿಗೆ ಸೇರಿದ ಮೂರು ಅಂತಸ್ತಿನ ಸ್ವಂತ ಕಟ್ಟಡವಿದೆ. ನೆಲಮಹಡಿ ಮತ್ತು ಮೂರನೇ ಮಹಡಿಯನ್ನು ಬಾಡಿಗೆಗೆ ನೀಡಿದ್ದು, ಮೊದಲೇ ಮಹಡಿಯಲ್ಲಿ ಮಕ್ಕಳ ಜತೆ ವಾಸವಾಗಿದ್ದರು. ಬಾಡಿಗೆ ಹಣದಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಈ ನಡುವೆ ಮಕ್ಕಳಿಗೆ ಹಲವು ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ನೊಂದಿದ್ದ ರಾಧಮ್ಮ, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯೇ ಮೂವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು ಎಂದು ಪೊಲೀಸರು ಹೇಳಿದರು.

ವಿಷವುಣಿಸಿ ಆತ್ಮಹತ್ಯೆ: ಶುಕ್ರವಾರ ರಾತ್ರಿ ಮನೆ ಸಮೀಪದ ಅಂಗಡಿಯೊಂದರಿಂದ ವಿಷದ ಬಾಟಲಿ ತಂದ ರಾಧಮ್ಮ, ಅದನ್ನು ಊಟದಲ್ಲಿ ಬೆರೆಸಿ ತನ್ನ ಇಬ್ಬರು ಮಕ್ಕಳಿಗೆ ಉಣಬಡಿಸಿದ್ದಾರೆ. ಮಕ್ಕಳು ಮೃತಪಟ್ಟ ನಂತರ, ತಾನೂ ವಿಷದ ಊಟ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಧಮ್ಮ ಅವರ ಕಟ್ಟಡದ ನೆಲಮಹಡಿಯಲ್ಲಿ ವಾಸವಾಗಿರುವ ಬಾಡಿಗೆದಾರರೊಬ್ಬರು ಪ್ರತಿ ನಿತ್ಯ ರಾಧಮ್ಮ ಅವರ ಮನೆಗೆ ಹಾಲು ತಂದು ಕೊಡುತ್ತಿದ್ದರು. ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಹಾಲು ತೆಗೆದುಕೊಂಡು ಬಂದ ಆತ, ಹಲವು ಬಾರಿ ಮನೆ ಬಾಗಿಲು ಬಡಿದಿದ್ದಾರೆ.

ಆದರೆ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಆತಂಕಗೊಂಡು ಸ್ಥಳೀಯರಿಗೆ ತಿಳಿಸಿ, ಕಿಟಕಿಯ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು, ಪರಿಶೀಲನೆ ನಡೆಸಿ, ಸ್ಥಳದಲ್ಲಿ ದೊರೆತ ಡೆತ್‌ನೋಟ್‌ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಡೆತ್‌ನೋಟ್‌ ಪತ್ತೆ: “ಅಂಗವೈಕಲ್ಯದಿಂದ ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಸೋಲುಂಡಿದ್ದೇವೆ. ನಮ್ಮ ತಾಯಿ ಕೂಡ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಜೀವನದಲ್ಲಿ ಜುಗುಪ್ಸೆಗೊಂಡು ಮೂವರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಾವಿಗೆ ಯಾರು ಕಾರಣರಲ್ಲ’ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು ಮೂಲಕ ದುಡಿಮೆ: ಕಿರಿಯ ಪುತ್ರ ಸಂತೋಷ್‌ ಅಂಗವೈಕಲ್ಯದ ನಡುವೆಯೂ ಎಸ್‌ಎಸ್‌ಎಲ್‌ಸಿವರೆಗೂ ವ್ಯಾಸಂಗ ಮಾಡಿದ್ದ. ನಂತರ ಮನೆಯಿಂದಲೇ ಆನ್‌ಲೈನ್‌ ಮೂಲಕ ಜಾಹೀರಾತು ನೀಡುವ ಕೆಲಸ ಮಾಡುವ ಮೂಲಕ ಮಾಸಿಕ 15ರಿಂದ 20 ಸಾವಿರ ರೂ. ಗಳಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಪರಿಶೀಲಿಸಬೇಕಿದೆ ಎಂದು ಪೊಲೀಸರು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ