ಮಳೆಯಿಂದ ಸೂರು ಕಳಕೊಂಡವರಿಗೆ ಪರಿಹಾರ

Team Udayavani, May 9, 2019, 3:00 AM IST

ನೆಲಮಂಗಲ: ಚಂಡಮಾರುತದ ಪರಿಣಾಮ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ಹಾನಿಯಾಗಿದ್ದ ತಾಲೂಕಿನ ಮಲ್ಲಾಪುರ ಗ್ರಾಮದ 13 ಮನೆಗಳಿಗೆ ಬುಧವಾರ ತಹಶೀಲ್ದಾರ್‌ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದರು.

ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಈ ಹಿಂದೆ ಸುರಿದ ಭಾರೀ ಮಳೆಯಿಂದ ಅನೇಕ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿತ್ತು. ಮತ್ತೆ ಸಮಸ್ಯೆ ಮರುಕಳಿಸದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾಲೂಕು ಆಡಳಿತ ಭರವಸೆ ನೀಡಿತ್ತು.

ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಮತ್ತೆ ಅದೇ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಹತ್ತಾರು ಮರಗಳು ಮನೆಗಳ ಮೇಲೆ ಉರುಳಿ ಬಿದ್ದಿವೆ. ಬಿರುಗಾಳಿಯ ರಭಸಕ್ಕೆ 13 ಮನೆಗಳ ಮೇಲ್ಛಾವಣಿ ಧರೆಗುರುಳಿದ್ದು, ಗ್ರಾಮದ ಜನರು ಆತಂಕದಲ್ಲಿದ್ದಾರೆ.

ಗಂಭೀರ ಗಾಯ: ಮಲ್ಲಾಪುರ ಗ್ರಾಮದ ಶಿವಣ್ಣ ಎಂಬುವ‌ರ ಮನೆಯ ಗೋಡೆ ಮತ್ತು ಮೇಲ್ಛಾವಣಿಯ ಶೀಟುಗಳು ಗಾಳಿಯ ರಭಸಕ್ಕೆ ಬಿದ್ದು ಮನೆಯಲ್ಲಿದ್ದ ರಾಕೇಶ್‌(14)ಹಾಗೂ ಬಿಂದು(7)ಎಂಬ ಮಕ್ಕಳಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ತಹಶೀಲ್ದಾರ್‌ ಕೆ.ಎನ್‌.ರಾಜಶೇಖರ್‌, ಮಕ್ಕಳ ಬಗ್ಗೆ ಮಾಹಿತಿ ಪಡೆದು, ಸಮಾಧಾನ ಹೇಳಿದರು. ಅಲ್ಲದೇ, ಚಿಕಿತ್ಸೆಯ ವೆಚ್ಚ ಭರಿಸುವ ಭರವಸೆಯನ್ನು ನೀಡಿದ್ದಾರೆ.

ಅಪಾಯದಿಂದ ಪಾರು: ಮಲ್ಲಾಪುರ ಗ್ರಾಮದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಿಂದ ದಾದಾಪೀರ್‌, ಹನುಮಂತರಾಯಪ್ಪ, ಅಂಬಿಕಾರಾಜು ಸೇರಿದಂತೆ 6ಕ್ಕೂ ಹೆಚ್ಚು ಮನೆಗಳ ಮೇಲೆ ಮರಗಳು ಬಿದ್ದು ಮೇಲ್ಛಾವಣಿ ಮತ್ತು ಗೋಡೆಗಳಿಗೆ ಹಾನಿಯಾಗಿದೆ.

ಮನೆಯಲ್ಲಿದ್ದ ಜನರು ಅಪಾಯದಿಂದ ಪಾರಾಗಿದ್ದಾರೆ. ಕೆಲವು ಮನೆಗಳಲ್ಲಿ ಶೀಟುಗಳು ಮುರಿದು ಬಿದ್ದು ಕೆಲವರಿಗೆ ಗಾಯಗಳಾಗಿವೆ. ಇನ್ನೂ ಅಂಬಿಕಾರಾಜು ಎಂಬವರ ಎರಡು ಬೈಕ್‌ಗಳ ಮೇಲೆ ಮರ ಬಿದ್ದ ಪರಿಣಾಮ ಬೈಕ್‌ಗಳು ಜಖಂಗೊಂಡು ಸಂಪೂರ್ಣ ಹಾಳಾಗಿವೆ.

ಭರವಸೆ: ಮಲ್ಲಾಪುರ ಗ್ರಾಮದಲ್ಲಿ ಸುರಿದ ಭಾರೀ ಮಳೆಯಿಂದ ಹಾನಿಯಾಗಿರುವ 13 ಮನೆಗಳಿಗೆ ಸರ್ಕಾರ ಸೂಚಿಸುವ ಪರಿಹಾರವನ್ನು ನೀಡಲಾಗುವುದು. ವಾಜರಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಮಾಡಲು ತಿಳಿಸಲಾಗುತ್ತದೆ.

ಮಲ್ಲಾಪುರ ಗ್ರಾಮದಲ್ಲಿ ಪದೇ ಪದೆ ಈ ರೀತಿಯ ಘಟನೆಗಳು ಸಂಭವಿಸಿದ್ದು, ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹಾನಿಯಾಗಿರುವ ಮನೆಗಳಿಗೆ ಭೇಟಿ ನೀಡಿದ ತಹಶೀಲ್ದಾರ್‌ ಭರವಸೆ ನೀಡಿದರು.

ಧರೆಗುರುಳಿದ ಕಂಬಗಳು: ಧಾರಾಕಾರ ಮಳೆಯಿಂದಾಗಿ ಪಟ್ಟಣದ ಹೊರವಲಯದಲ್ಲಿರುವ ದೇವಣ್ಣನ ಪಾಳ್ಯ ಸೇರಿದಂತೆ ಮತ್ತಿತರ ಬಡಾವಣೆಗಳಲ್ಲಿ ಮತ್ತು ಗ್ರಾಮಗಳಲ್ಲಿ ವಿದ್ಯುತ್‌ ಕಂಬಗಳು ನೆಲಕಚ್ಚಿದ್ದು, ರಾತ್ರಿಯಿಡೀ ವಿದ್ಯುತ್‌ ವ್ಯತ್ಯಯ ಉಂಟಾಗಿ ನಾಗರಿಕರು ಕತ್ತಲಲ್ಲಿ ರಾತ್ರಿ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ವಾಜರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜಮ್ಮ, ಸದಸ್ಯರಾದ ಜಿ.ಶಿವಣ್ಣ, ಎಚ್‌.ಎಸ್‌ ಮಂಜುನಾಥ್‌, ವರಲಕ್ಷ್ಮೀ ಮಂಜುನಾಥ್‌, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ್‌, ರಾಜಸ್ವ ನಿರೀಕ್ಷಕ ಅಶ್ವತ್ಥ್, ಗ್ರಾಮಲೆಕ್ಕಾಧಿಕಾರಿ ರವಿಕುಮಾರ್‌ ಮತ್ತಿತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ