ಬೆಳಗಾವಿಗೆ ಕಚೇರಿಗಳ ಸ್ಥಳಾಂತರ
Team Udayavani, Sep 16, 2018, 6:20 AM IST
ಬೆಳಗಾವಿ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಕೇಂದ್ರ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಹೇಳಿದರು.
ಕರ್ನಾಟಕ ಕಾನೂನು ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿಯ ಮೇಲೆ ಮೊದಲಿಂದಲೂ ನನಗೆ ವಿಶೇಷ ಪ್ರೀತಿ ಇದೆ. ಇಲ್ಲಿ ಮೊದಲ ಅಧಿವೇಶನ ನಡೆಸಿರುವುದು ಹಾಗೂ ಸುವರ್ಣ ವಿಧಾನಸೌಧ ಸ್ಥಾಪನೆ ಮಾಡಿರುವುದೇ ಇದಕ್ಕೆ ಸಾಕ್ಷಿ. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಇಡೀ ದೇಶದ ಗಮನ ಸೆಳೆದ ಗ್ರಾಮ ವಾಸ್ತವ್ಯವನ್ನು ಆರಂಭ ಮಾಡಿದ್ದು ಇದೇ ಬೆಳಗಾವಿ ಜಿಲ್ಲೆಯಿಂದ. ಬೆಳಗಾವಿಯು ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಸಂಸ್ಕೃತಿಯ ಸಮ್ಮಿಶ್ರಣವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬೆಳಗಾವಿ, ರಾಜಕೀಯ ಮತ್ತು ಸಾಂಸ್ಕೃತಿಕ ವೈಶಿಷ್ಟÂತೆಯಿಂದ ಗಮನ ಸೆಳೆಯುತ್ತದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಅಪಾರ ಹಾನಿ ಸಂಭವಿಸಿದಾಗ ರಾಷ್ಟ್ರಪತಿಗಳು ಸ್ವತಃ ಕರೆ ಮಾಡಿ ಪರಿಸ್ಥಿತಿಯ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡಿದರು. ಇದು ತಮಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಹಾಯಕವಾಯಿತು. ಅಲ್ಲದೆ, ಹೊಸ ಹುಮ್ಮಸ್ಸು ನೀಡಿತು. ಇದಕ್ಕೆ ನಾನು ರಾಷ್ಟ್ರಪತಿಗಳಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ ಎಂದರು.