ಮನೆ ಮೇಲೆ ಶೀಟ್ ಹಾಕುವಾಗ ವಿದ್ಯುತ್ ತಗುಲಿ ಇಬ್ಬರು ಸಾವು
Team Udayavani, Sep 5, 2022, 10:38 PM IST
ಬೆಳಗಾವಿ: ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಗಡಿಬಿಡಿಯಲ್ಲಿ ಮನೆಯ ಮೇಲೆ ಸ್ಟೀಲ್ ಶೀಟ್ ಗಳನ್ನು ಹಾಕುತ್ತಿದ್ದಾಗ ವಿದ್ಯುತ್ ತಗುಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಸುಳಗಾ(ಹಿಂಡಲಗಾ) ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಸುಳಗಾ ಗ್ರಾಮದ ವಿನಾಯಕ ಕಲಖಾಂಬಕರ(24) ಹಾಗೂ ಬೆನಕನಹಳ್ಳಿ ಗ್ರಾಮದ ವಿಲಾಸ ಅಗಸಗೇಕರ(52) ಮೃತಪಟ್ಟಿದ್ದಾರೆ. ಬೆನಕನಹಳ್ಳಿಯ ದೀಪಕ ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿನಾಯಕ ಕಲಖಾಂಬಕರ ಅವರ ಎರಡು ಕೊಠಡಿಯ ಮನೆ ಕಟ್ಟಡ ಕೆಲಸ ನಡೆದಿತ್ತು. ಮನೆಯ ಮೇಲೆ ಶೀಟ್ ಗಳನ್ನು ಏರಿಸುವಾಗ ವಿದ್ಯುತ್ ತಂತಿ ತಗುಲಿದೆ. ಆಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಇಬ್ಬರಿಗೂ ವಿದ್ಯುತ್ ತಗುಲಿದೆ. ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಬ್ಬ ಗಾಯಗೊಂಡಿದ್ದಾನೆ.
ವಿಲಾಸ ಅಗಸಗೇಕರ ರಿಕ್ಷಾ ಚಾಲಕನಿದ್ದು, ವಿನಾಯಕನ ಮನೆ ಕೆಲಸಕ್ಕೆ ಸಹಾಯ ಮಾಡಲು ಬಂದಿದ್ದನು. ವಿನಾಯಕ ವಾಟರ್ ಸಪ್ಲೈರ್ ಆಗಿ ಕೆಲಸ ಮಾಡುತ್ತಿದ್ದನು. ಘಟನೆ ನಡೆದ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.