ನೀರಾವರಿ ಯೋಜನೆಗೆ ಸರ್ಕಾರ ಆದ್ಯತೆ ನೀಡಲಿ

Team Udayavani, Nov 15, 2019, 5:02 PM IST

ಚಳ್ಳಕೆರೆ: ರಾಜ್ಯದ ನೀರಾವರಿ ಯೋಜನೆಗಳಿಗೆ ಸೂಕ್ತ ಆರ್ಥಿಕ ನೆರವು ಒದಗಿಸದೇ ಇರುವುದರಿಂದ ವಿಶೇಷವಾಗಿ ಮಧ್ಯ ಕರ್ನಾಟಕದ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಇದರಿಂದ ನೀರಿನ ಅಭಾವ ಕಾಣಿಸಿಕೊಂಡಿದ್ದು, ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಒತ್ತಾಯಿಸಿದರು.

ತಾಲೂಕಿನ ನಾಗಗೊಂಡನಹಳ್ಳಿ ಗ್ರಾಮದ ಚೆಲುಮೆರುದ್ರಸ್ವಾಮಿ ಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಹಾಗೂ ಎಸ್‌ಜೆಎಂ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶರಣರು ಆಶೀರ್ವಚನ ನೀಡಿದರು.

ಸರ್ಕಾರ ಜನರ ಮೇಲೆ ಮುನಿಸಿಕೊಂಡರೂ ಪರವಾಗಿಲ್ಲ, ಆದರೆ ಪ್ರಕೃತಿ ಮಾತ್ರ ಮುನಿಸಿಕೊಳ್ಳಬಾರದು. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯೂ ಸೇರಿದಂತೆ ಎಲ್ಲೆಡೆ ಪ್ರಕೃತಿಯಿಂದ ಉತ್ತಮ ಮಳೆಯಾಗಿದೆ. “ಬರದ ನಾಡು’ ಎಂದು ಖ್ಯಾತಿಯಾಗಿದ್ದ ಈ ಭಾಗ ಎಲ್ಲಾ ಗಿಡ, ಮರ, ಕೆರೆ, ಕಟ್ಟೆ ಒಣಗಿ ಭೀಕರ ಬರಗಾಲದ ಸ್ಥಿತಿ ಎದುರಾಗಿತ್ತು. ಇದು ನಮಗೆ ಸದಾ ಕಾಲ ನೋವನ್ನುಂಟು ಮಾಡುತ್ತಿತ್ತು. ಇತ್ತೀಚೆಗೆ ಬಿದ್ದ ಮಳೆಯ ಫಲವಾಗಿ ಬರದ ನಾಡು ಎಂಬ ಹೆಸರನ್ನು ಮರೆಮಾಚಿ ಹಸಿರು ನಾಡಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಪ್ರಕೃತಿ ಮಾತೆಗೆ ಕೃತಜ್ಞಾರಾಗಿಬೇಕು. ನಮ್ಮ ವೈಯಕ್ತಿಕ ಹಿತಾಸಕ್ತಿಗೆ ಗಿಡ-ಮರಗಳನ್ನು ನಾಶ ಮಾಡಬಾರದು ಎಂದರು.

ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳು ಸದಾ ಬರಗಾಲದ ಸ್ಥಿತಿಯನ್ನು ಅನುಭವಿಸುತ್ತಿವೆ. ಈ ಪರಿಸ್ಥಿತಿ ಬದಲಾವಣೆಗೆ ಆಡಳಿತಾರೂಢ ಸರ್ಕಾರ ಯಾವುದಾದರೂ ಯೋಜನೆ ಬಳಸಿಕೊಂಡು ಈ ಭಾಗಕ್ಕೆ ನೀರಿನ ಸೌಲಭ್ಯವನ್ನು ಒದಗಿಸಿಕೊಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂಬ ಮಾಹಿತಿ ಇದೆ. ನಾವು ಇತ್ತೀಚಿಗಷ್ಟೇ ಆ ಭಾಗಕ್ಕೆ ತೆರಳಿ ನೋಡಿ ಬಂದಿದ್ದೇವೆ. ಕಳೆದ ಸುಮಾರು 40 ವರ್ಷಗಳಿಂದ ಈ ಭಾಗಕ್ಕೆ ನೀರು ತರುವ ವಿಚಾರದಲ್ಲಿ ನಡೆದ ಎಲ್ಲಾ ಹೋರಾಟಗಳಿಗೆ ಶ್ರೀಮಠ ಸಹಕಾರ ನೀಡಿದೆ. ಈ ಭಾಗ ಸಮೃದ್ಧವಾಗಿ ನೀರು ಕಂಡರೆ ಹೆಚ್ಚು ಸಂತಸ ಉಂಟಾಗುತ್ತದೆ ಎಂದು ತಿಳಿಸಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಟಿ. ರಘುಮೂರ್ತಿ ಮೂರು ಕಡೆ ಹಲವಾರು ಕೋಟಿ ವೆಚ್ಚದಲ್ಲಿ ಬ್ಯಾರೇಜ್‌ ನಿರ್ಮಿಸಿದ್ದಾರೆ. ಈ ಮೂಲಕ ಈ ಭಾಗದ ನೂರಾರು ಗ್ರಾಮಗಳ ಸಾವಿರಾರು ರೈತರ ನೀರಿನ ಸಮಸ್ಯೆಯನ್ನು ನಿವಾರಿಸಿದ್ದಾರೆ. ಅಭಿವೃದ್ಧಿ
ವಿಚಾರದಲ್ಲೂ ಬೇರೆ ಎಲ್ಲಾ ಶಾಸಕರಿಗಿಂತ ಹೆಚ್ಚು ಪ್ರಗತಿ ಸಾಧಿ ಸಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ಟಿ. ರಘುಮೂರ್ತಿ ಮಾತನಾಡಿ, ನನ್ನನ್ನು ಎರಡನೇ ಬಾರಿ ಚಳ್ಳಕೆರೆ ಕ್ಷೇತ್ರದ ಶಾಸಕನನ್ನಾಗಿ ಆಯ್ಕೆ ಮಾಡುವ ಮೂಲಕ ಇಲ್ಲಿನ ಮತದಾರರು ನನಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ನಾನು ಮೊದಲ ಅವ ಧಿಯಲ್ಲಿ ಶಾಸಕನಾಗಿ ಕ್ಷೇತ್ರಕ್ಕೆ ಸುಮಾರು ಮೂರು ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಮತದಾರರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿದ್ದೇನೆ.

ಮೊದಲ ಅವ ಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌. ಆಂಜನೇಯ ಹೆಚ್ಚು ಸಹಕಾರ ನೀಡಿದ್ದಾರೆ ಎಂದರು. ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಮಾತನಾಡಿ, ಮೊದೂರು, ಲಕ್ಕಗೊಂಡನಹಳ್ಳಿ ಮಧ್ಯಭಾಗದಲ್ಲಿ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್‌ ನಿರ್ಮಿಸಬೇಕು. ಇದರಿಂದ ಆ ಭಾಗದ 30 ಗ್ರಾಮಗಳ ಸುಮಾರು 30 ಸಾವಿರ ಎಕರೆ ಪ್ರದೇಶಗಳಿಗೆ ನೀರಿನ ಸೌಲಭ್ಯ ದೊರೆಯುತ್ತದೆ. ಕ್ಷೇತ್ರದ ಶಾಸಕರು ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾರೇಜ್‌ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್‌ ಅಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯರಾದ ರಂಜಿತಾ,
ಉಮಾ ಜನಾರ್ದನ, ಸಮರ್ಥರಾಯ, ಜಿ. ವೀರೇಶ್‌, ಗ್ರಾಮ ಪಂಚಾಯತ್‌ ಅಧ್ಯಕ್ಷೆ ಭೀಮಕ್ಕ, ರೈತ ಸಂಘದ ರಾಜ್ಯ ಕಾರ್ಯದರ್ಶಿ ರೆಡ್ಡಿಹಳ್ಳಿ ವೀರಣ್ಣ, ಪ್ರಗತಿಪರ ರೈತ ದಯಾನಂದಮೂರ್ತಿ, ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ಶ್ರೀ ಬಸವಕಿರಣ ಸ್ವಾಮೀಜಿ, ತೋಟಗಾರಿಕೆ ಅಧಿ ಕಾರಿ ವಿರೂಪಾಕ್ಷಪ್ಪ, ನಗರಸಭಾ ಸದಸ್ಯ ರಮೇಶ್‌ ಗೌಡ, ಟಿ. ಮಲ್ಲಿಕಾರ್ಜುನ, ವಿರೂಪಾಕ್ಷ, ಗೀತಾಬಾಯಿ, ಪಾಲಯ್ಯ, ಸೈಯದ್‌ ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ