ಚರಂಡಿ ಸ್ವಚ್ಛಗೊಳಿಸಲು ಕ್ರಮ

Team Udayavani, May 14, 2019, 3:00 AM IST

ಶಿಡ್ಲಘಟ್ಟ: ನಗರ ಸೇರಿದಂತೆ ತಾಲೂಕಿನಾದ್ಯಂತ ಸುರಿಯುವ ಮಳೆಯಿಂದ ಆಗುವ ಅನಾಹುತ ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಗರಸಭೆ ಹಾಗೂ ತಾಲೂಕು ಆಡಳಿತ ಸಕಲ ಸಿದ್ಧತೆ ನಡೆಸಿದೆ.

ಮಳೆಗಾಲದಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯಲು ತೊಡಕಾಗಿರುವ ಸ್ಥಳವನ್ನು ಗುರುತಿಸಿ ಅದನ್ನು ಸ್ವಚ್ಛಗೊಳಿಸಲು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಅನಿರುದ್ಧ್ ಶ್ರವಣ್‌ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಹಾಗೂ ನಗರಸಭೆ ಪೌರಾಯುಕ್ತ ಹನುಮಂತರಾಯಪ್ಪ ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ 1, 2 ಹಾಗೂ 3ನೇ ಕಾರ್ಮಿಕ ನಗರದಲ್ಲಿ ಮಳೆ ಬಂದರೆ ನೀರು ಮನೆಯೊಳಗೆ ನುಗ್ಗಿ ದವಸ ದಾನ್ಯಗಳನ್ನು ನೀರು ಪಾಲಾಗುವ ಘಟನೆಗಳು ಸಂಭವಿಸಿರುವುದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ನಗರದಲ್ಲಿ ಮಳೆನೀರು ಮತ್ತು ಕೊಳಚೆ ನೀರು ಸರಾಗವಾಗಿ ಹರಿಯಲು ತ್ಯಾಜ್ಯ ತುಂಬಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದಾರೆ.

ನಗರದ ಕಾಂಗ್ರೆಸ್‌ ಭವನ ರಸ್ತೆ ಹಾಗೂ ಹಳೆ ಆಸ್ಪತ್ರೆಯ ರಸ್ತೆಯಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಲು ಈಗಾಗಲೇ ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದು, ಮಂಗಳವಾರ ಹೊರವಲಯದಲ್ಲಿರುವ ಚರಂಡಿಗಳಲ್ಲಿ ತ್ಯಾಜ್ಯ ಮತ್ತು ಮಣ್ಣು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಿದ್ದಾರೆ.

ಕಳೆದ ಸಾಲಿನಲ್ಲಿ ನಗರದಲ್ಲಿ ಸುರಿದ ಮಳೆಯಿಂದ ಬಹುತೇಕ ಮನೆಗಳಲ್ಲಿ ನೀರು ನುಗ್ಗಿ ಅಪಾರ ಬೆಲೆ ಬಾಳುವ ವಸ್ತುಗಳು ನೀರು ಪಾಲಾದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಮತ್ತು ನಗರಸಭೆ ಪೌರಾಯುಕ್ತ ಜಿ.ಎನ್‌.ಚಲಪತಿ ಮತ್ತು ಸಿಬ್ಬಂದಿ ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಿ

-ನಗರದ 1ನೇ ಕಾರ್ಮಿಕ ನಗರದಲ್ಲಿರುವ ಬೃಹತ್‌ ಚರಂಡಿ ಸ್ವಚ್ಛಗೊಳಿಸಿ ಕ್ರಮ ಕೈಗೊಂಡಿದ್ದರು. ಇದೀಗ ಪುನಃ ಚರಂಡಿ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಲು ಸುಳಿವು ನೀಡಿದ್ದು ಮತ್ತೂಮ್ಮೆ ಜೆಸಿಬಿ ಸದ್ದುಕೇಳುವ ಲಕ್ಷಣಗಳು ಕಾಣುತ್ತಿವೆ.

ಶಿಡ್ಲಘಟ್ಟ ನಗರ ಸಹಿತ ತಾಲೂಕಿನಾದ್ಯಂತ ಕೆರೆ-ಕುಂಟೆ ಹಾಗೂ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. ಮಳೆಯ ನೀರು ಸರಾಗವಾಗಿ ಹರಿಯಲು ಚರಂಡಿಗಳನ್ನು ಸ್ವಚ್ಛಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
-ಅಜಿತ್‌ ಕುಮಾರ್‌ ರೈ, ತಹಶೀಲ್ದಾರ್‌ ಶಿಡ್ಲಘಟ್ಟ

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಗರಸಭೆ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ತೋಟಗಾರಿಕೆ ಇಲಾಖೆ ಆವರಣದಲ್ಲಿರುವ ಬೃಹತ್‌ ಚರಂಡಿ ಸ್ವಚ್ಛಗೊಳಿಸಲು ಯೋಜನೆ ರೂಪಿಸಲಾಗಿದೆ. ಮಂಗಳವಾರ ಹೊರ ವಲಯದಲ್ಲಿರುವ ಚರಂಡಿಗಳನ್ನು ಬಾಡಿಗೆ ಜೆಸಿಬಿಗಳ ಮೂಲಕ ಸ್ವಚ್ಛಗೊಳಿಸಲಾಗುವುದು.
-ಹನುಂತರಾಯಪ್ಪ, ಪೌರಾಯುಕ್ತರು ನಗರಸಭೆ ಶಿಡ್ಲಘಟ್ಟ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ