ರಾಗಿಗೆ 5 ಸಾವಿರ ರೂ. ಬೆಂಬಲ ಬೆಲೆ ನೀಡಿ
ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ರೈತಸಂಘದಿಂದ ‘ಬಾರುಕೋಲು ಚಳವಳಿ'ಯ ಎಚ್ಚರಿಕೆ
Team Udayavani, Apr 26, 2022, 3:54 PM IST
ಕಡೂರು: ರಾಗಿ ಖರೀದಿ ಕೇಂದ್ರಗಳು ಒಂದು ಕ್ವಿಂಟಾಲ್ ರಾಗಿಗೆ ಈಗ ನೀಡುತ್ತಿರುವ 3,200 ರೂಗಳ ಬೆಂಬಲ ಬೆಲೆಯನ್ನು ಕೇಂದ್ರ-ರಾಜ್ಯ ಸರಕಾರವು ಕೂಡಲೇ 5 ರಿಂದ 6 ಸಾವಿರಕ್ಕೆ ಏರಿಸಬೇಕೆಂದು ರೈತ ಸಂಘವು ಆಗ್ರಹಿಸುತ್ತದೆ ಎಂದು ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ ತಿಳಿಸಿದರು.
ರಾಜ್ಯ ರೈತ ಸಂಘದಿಂದ ಸೋಮವಾರ ರಾಗಿ ಖರೀದಿಗೆ ಒತ್ತಾಯಿಸಿ ಹಾಗೂ ಪಂಪ್‌ಸೆಟ್ ಗಳಿಗೆ ವಿದ್ಯುತ್ ಸರಬರಾಜು ಮತ್ತು ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮನವಿ ಸಲ್ಲಿಸಿ ಅವರು ಮಾತನಾಡಿದರು.
ರಾಗಿಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕು. ಒಂದೆರಡು ಎಕರೆ ಭೂಮಿ ಇರುವವರನ್ನು ಸಣ್ಣ ರೈತ, ದೊಡ್ಡ ರೈತ ಎಂಬ ತಾರತಮ್ಯವನ್ನು ಮೊದಲು ತೆಗೆಯಬೇಕು. 3200 ರೂ. ಬೆಂಬಲ ಬೆಲೆಯನ್ನು ಯಾವ ಆಧಾರದ ಮೇಲೆ ಘೋಷಣೆ ಮಾಡಲಾಗಿದೆ ಎಂಬುದನ್ನು ರೈತರಿಗೆ ತಿಳಿಸಬೇಕು. ಅವೈಜ್ಞಾನಿಕವಾಗಿ ಬೆಂಬಲ ಬೆಲೆ ನಿರ್ಧರಿಸಿರುವುದು ರೈತರಿಗೆ ಮಾರಕವಾಗಿದೆ. ಇದನ್ನು ಕೂಡಲೇ 6 ಸಾವಿರ ರೂ.ಗಳಿಗೆ ಬೆಂಬಲ ಬೆಲೆಯನ್ನು ನಿಗದಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಕೇಂದ್ರ ಸರಕಾರವು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆಯಂತೆ ರಾಜ್ಯಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಉತ್ತರ ಪ್ರದೇಶಕ್ಕೆ 35 ಸಾವಿರ ಕೋಟಿ ನೀಡಿದರೆ ನಮ್ಮ ರಾಜ್ಯಕ್ಕೆ 400 ಕೋಟಿ ಹಣ ನೀಡುತ್ತದೆ. ನಮ್ಮ ತೆರಿಗೆಯನ್ನು ಕೇಂದ್ರ ಪಡೆಯುವುದಿಲ್ಲವೇ ಎಂದು ಪ್ರಶ್ನಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತರನ್ನು ಗುರುತಿಸಿ ವಸತಿ ನೀಡಲಿ. ಅದು ಬಿಟ್ಟು ರಸ್ತೆ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡುವುದು ಯಾವ ಅಭಿವೃದ್ಧಿ ಎಂದು ಕುಟುಕಿದರು.
ಸರಕಾರ ಭ್ರಷ್ಟಾಚಾರದಿಂದ ಕೂಡಿದೆ. ಅನುದಾನ ಪಡೆಯಲು ಸಹ ಕಮಿಷನ್ ನೀಡಬೇಕೆಂದು ಸ್ವಾಮಿಗಳೊಬ್ಬರು ಬಹಿರಂಗವಾಗಿ ಹೇಳುತ್ತಿದ್ದಾರೆ. ಇತ್ತೀಚಿನ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಯೂ ಸಹ ಇಂತಹ ಕಮಿಷನ್ ಪ್ರಕರಣದ ಮೇಲೆಯೆ ನೀಡಿದ್ದಾರೆ ಎಂದು ಆರೋಪಿಸಿದರು.
ಬಗರಹುಕುಂ ಸಾಗುವಳಿದಾರರಿಗೆ ಕೂಡಲೇ ಸಾಗುವಳಿ ಚೀಟಿ ನೀಡಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತರೆ ತಾಲೂಕುಗಳಲ್ಲಿ ಸಾಗುವಳಿ ಚೀಟಿ ನೀಡಲಾಗುತ್ತಿದೆ. ಆದರೆ ಕಡೂರು ತಾಲೂಕು ಹಿಂದೆ ಬಿದ್ದಿದೆ ಎಂದು ದೂರಿದರು. ರೈತಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥ್ ಮಾತನಾಡಿ, ವರ್ಷದಾದ್ಯಂತ ರಾಗಿಗೆ ಬೆಂಬಲ ಬೆಲೆಯನ್ನು ಖರೀದಿಸುವ ಕೇಂದ್ರವನ್ನು ತೆರೆದಿರಬೇಕು ಎಂದು ಒತ್ತಾಯಿಸಿದರು. ಸರಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ‘ಬಾರಿಕೋಲಿನ ಚಳುವಳಿ’ ಆರಂಭಿಸುವುದಾಗಿ ಎಚ್ಚರಿಸಿದರು.
ಜಿಲ್ಲಾ ರೈತ ಮುಖಂಡರಾದ ಬಸವರಾಜಪ್ಪ, ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಕೃಷ್ಣೇಗೌಡರು, ಕಡೂರು ಕೆ.ಟಿ. ಆನಂದ್, ವಿಜಯಕುಮಾರ್, ಈಶ್ವರಪ್ಪ, ಬ್ಯಾಗಡೇಹಳ್ಳಿ ಬಸವರಾಜು, ಅಜ್ಜಂಪುರದ ಪದ್ಮನಾಭ, ಹನುಮಂತಪ್ಪ, ಚಿಕ್ಕಮಗಳೂರಿನ ಚಂದ್ರಶೇಖರ್, ಮೂಡಿಗೆರೆಯ ವನಶ್ರೀ ಲಕ್ಷ್ಮಣಗೌಡ, ಹಾಲಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.