ಶಾಲೆ ಬಿಟ್ಟ ಮಕ್ಕಳ ಕರೆತರಲು ಯತ್ನ

ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 506: ಡಿಡಿಪಿಐ ನಂಜಯ್ಯ ಮಾಹಿತಿ

Team Udayavani, Jul 7, 2019, 11:15 AM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶಾಲೆ ಬಿಟ್ಟಿರುವ 506 ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ರೂಪಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ನಂಜಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 556 ಮಕ್ಕಳು ಶಾಲೆ ಬಿಟ್ಟಿರುವ ಮಾಹಿತಿ ಕಲೆ ಹಾಕಿದ ನಂತರ, 50 ಮಕ್ಕಳು ಇಲಾಖೆ ಯತ್ನದಿಂದ ಶಾಲೆಗೆ ಮರಳಿದ್ದಾರೆ. ಉಳಿದ 506 ಮಕ್ಕಳ ವಿಳಾಸ ಪತ್ತೆ ಮಾಡಲಾಗುತ್ತಿದೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿ ಮತ್ತು ಸಿಆರ್‌ಸಿ ಅವರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಉದ್ಯೋಗ ಹುಡುಕಿಕೊಂಡು ವಲಸೆ ಹೋಗುವ ಪೋಷಕರ ಮಕ್ಕಳ ಸಂಖ್ಯೆ ಜಿಲ್ಲೆಯಲ್ಲಿ 235 ಇದ್ದು, ಆ ಪೈಕಿ ಬಾಲಕರ ಸಂಖ್ಯೆ 127, ಬಾಲಕಿಯರ ಸಂಖ್ಯೆ 108 ಇದೆ. ಪೋಷಕರಿಗೂ ತಿಳಿಸದೆ ಕಡೂರು ತಾಲೂಕಿನಿಂದ ಓರ್ವ ಬಾಲಕ ಶಾಲೆ ಬಿಟ್ಟು ಪರಾರಿಯಾಗಿದ್ದರೆ, ಅಂಗವೈಕಲ್ಯದಿಂದ ಓರ್ವ ಬಾಲಕ ಶಾಲೆಯಿಂದ ಹೊರಗುಳಿದಿದ್ದಾನೆಎಂದು ಹೇಳಿದರು.

4 ಬಾಲಕರು ಹಾಗೂ ಇಬ್ಬರು ಬಾಲಕಿಯರು ಸಾವಪ್ಪಿದ್ದಾರೆ. ಅನಾರೋಗ್ಯದಿಂದ ಶಾಲೆ ಬಿಟ್ಟ ಮಕ್ಕಳಲ್ಲಿ ಮೂರು ಬಾಲಕರು, ಏಳು ಮಂದಿ ಬಾಲಕಿಯರಿದ್ದಾರೆ ಎಂದು ಮಾಹಿತಿ ನೀಡಿದರು. ಕೌಟುಂಬಿಕ ಕಲಹದಿಂದ ಶಾಲೆಗೆ ಬರಲಾಗದ ನಾಲ್ಕು ಮಂದಿ ವಿದ್ಯಾರ್ಥಿಗಳಲ್ಲಿ ಮೂರು ಮಂದಿ ಬಾಲಕರಾದರೆ ಓರ್ವ ಬಾಲಕಿ ಇದ್ದಾಳೆ. ಅಲೆಮಾರಿ ಜನಾಂಗಕ್ಕೆ ಸೇರಿದ ಓರ್ವ ಬಾಲಕ ಹಾಗೂ ಓರ್ವ ಬಾಲಕಿ ಶಾಲೆಗೆ ಬರುತ್ತಿಲ್ಲ ಎಂದು ಡಿಡಿಪಿಐ ಮಾಹಿತಿ ನೀಡಿದರು.

ಮಕ್ಕಳನ್ನು ಶಾಲೆಗೆ ಕಳುಹಿಸಲು ಆಸಕ್ತಿ ತೋರದ ಪೋಷಕರ ಮನೋಭಾವದಿಂದ 149 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದೇ ವಿಷಾದದ ಸಂಗತಿ. ಇವರಲ್ಲಿ 52 ಮಂದಿ ಬಾಲಕರಾದರೆ, 88 ಮಂದಿ ಬಾಲಕಿಯರಿದ್ದು, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿರುವ ಹಿಂಜರಿಕೆ ಸ್ಪಷ್ಟವಾಗುತ್ತದೆ. ದುಡಿದು ಕುಟುಂಬಕ್ಕೆ ಆಸರೆಯಾಗಲಿ ಎಂಬ ಮನೋಭಾವದಿಂದ ಬಾಲಕರನ್ನು ಕೆಲವು ಪೋಷಕರು ಶಾಲೆಗೆ ಕಳುಹಿಸಲು ಮುಂದಾಗದಿರುವುದು ಜಿಲ್ಲೆಯಲ್ಲಿ ಕಂಡು ಬಂದಿದೆ ಎಂದು ತಿಳಿಸಿದರು.

ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆಸಕ್ತಿ ಇದ್ದರೂ ಶಾಲೆಗೆ ಹೋಗಲು ಇಷ್ಟಪಡದ ಮಕ್ಕಳ ಸಂಖ್ಯೆ 137 ಇದೆ. ಇವರಲ್ಲಿ 88 ಮಂದಿ ಬಾಲಕರು ಮತ್ತು 49 ಮಂದಿ ಬಾಲಕಿಯರಿದ್ದಾರೆ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಚಿಕ್ಕಮಗಳೂರು ಶೈಕ್ಷಣಿಕ ಬ್ಲಾಕ್‌ನಲ್ಲಿ ಅಧಿಕವಾಗಿದ್ದರೆ, ನಂತರದ ಸ್ಥಾನವನ್ನು ಬೀರೂರು, ತರೀಕೆರೆ, ಮೂಡಿಗೆರೆ, ನರಸಿಂಹರಾಜಪುರ, ಕಡೂರು, ಕೊಪ್ಪ ಬ್ಲಾಕ್‌ಗಳದ್ದಾಗಿದೆ. ಶೃಂಗೇರಿ ಬ್ಲಾಕ್‌ನಲ್ಲಿ ಅತಿ ಕಡಿಮೆ ಮಕ್ಕಳು ಶಾಲೆ ಬಿಟ್ಟಿದ್ದಾರೆ. ಇಲ್ಲಿ ಕೇವಲ ನಾಲ್ಕು ಮಕ್ಕಳು ಶಾಲೆಯಿಂದ ಹೊರ ಗುಳಿದಿದ್ದಾರೆ ಎಂದು ತಿಳಿಸಿದರು.

ಬೀರೂರು ಬ್ಲಾಕ್‌ನಲ್ಲಿ 49ಬಾಲಕಿಯರು ಹಾಗೂ 34 ಬಾಲಕರು ಶಾಲೆ ಬಿಟ್ಟಿದ್ದಾರೆ. ಚಿಕ್ಕಮಗಳೂರು ಬ್ಲಾಕ್‌ನಲ್ಲಿ 103 ಬಾಲಕಿಯರು, 88 ಬಾಲಕರು, ಕಡೂರು ಬ್ಲಾಕ್‌ನಲ್ಲಿ 25, 14, ಕೊಪ್ಪ ಬ್ಲಾಕ್‌ನಲ್ಲಿ 18, 7, ಮೂಡಿಗೆರೆ ಬ್ಲಾಕ್‌ನಲ್ಲಿ 41, 31, ನ.ರಾ.ಪುರ. 37, 23, ಶೃಂಗೇರಿ 3, 1, ತರೀಕೆರೆ 52, 30 ಸೇರಿ ಒಟ್ಟಾರೆ 328 ಬಾಲಕಿಯರು ಮತ್ತು 228 ಬಾಲಕರು ಶಾಲೆಯಿಂದ ಹೊರಗುಳಿದಿದ್ದಾರೆ. ಹಾಗಾಗಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಎಲ್ಲಾ ರೀತಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ