ಬಡತನ ನಿರ್ಮೂಲನೆಗೆ ಸರ್ಜಿಕಲ್‌ ಸ್ಟ್ರೈಕ್

ರೈತರಿಗಾಗಿಯೇ ಪ್ರತ್ಯೇಕ ಬಜೆಟ್‌ ಮಂಡನೆಮಹಿಳೆಯರಿಗೆ ಶೇ. 33 ಮೀಸಲಾತಿ

Team Udayavani, Apr 14, 2019, 11:20 AM IST

ಚಿತ್ರದುರ್ಗ : ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಬಡತನ ನಿರ್ಮೂಲನೆಗೆ ಸರ್ಜಿಕಲ್‌ ಸ್ಟ್ರೆಕ್ ನಡೆಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ನಗರದಲ್ಲಿ ಶನಿವಾರ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಪಕ್ಷಗಳ
ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರನ್ನು ಟೀಕಿಸುತ್ತಲೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ದೇಶದ ಜನರಿಗೆ ನೀಡುವ ಕೊಡುಗೆ-ಯೋಜನೆಗಳ ಪಟ್ಟಿ ಮಾಡಿದರು. ರೈತರಿಗೆ ಪ್ರತ್ಯೇಕ ಬಜೆಟ್‌ ಮಂಡಿಸುವುದು ತಮ್ಮ ಆಸೆಯಾಗಿದೆ. ಮೋದಿ ತರಹ ಸುಳ್ಳಿನ ಕಂತೆಯ ಬಜೆಟ್‌ ನೀಡದೆ ಪ್ರಣಾಳಿಕೆಯ ಅಂಶಗಳನ್ನು ನೂರಕ್ಕೆ ನೂರರಷ್ಟು ಅನುಷ್ಠಾನಗೊಳಿಸಲಾಗುವುದು ಎಂದರು.

ಶಾಸನಸಭೆಗಳು ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೆ ತರಲಾಗುವುದು. ದೇಶದ ಚೌಕಿದಾರರು ಅಂಬಾನಿ ಅವರಂಥವರಿಗೆ ಬ್ಯಾಂಕ್‌ ಲಾಕರ್‌ ಕೀ ನೀಡುತ್ತಾರೆ. ಆದರೆ ನಾನು ಬ್ಯಾಂಕ್‌ ಲಾಕರ್‌ ಕೀಯನ್ನು ಜನ ಸಾಮಾನ್ಯರಿಗೆ ನೀಡುತ್ತೇನೆ. ಎರಡು ಕೋಟಿ ಉದ್ಯೋಗ ಸೃಷ್ಟಿಗೆ ಕೈ ಹಾಕದೆ ದೇಶದಲ್ಲಿ ಖಾಲಿ ಇರುವ 22 ಲಕ್ಷ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲಾಗುವುದು ಎಂದರು.

ಪ್ರತಿ ಪಂಚಾಯತ್‌ ಮಟ್ಟದಲ್ಲಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಕಳೆದ 40 ವರ್ಷಗಳಲ್ಲಿ ಈಗಿರುವಷ್ಟು ನಿರುದ್ಯೋಗ ಸಮಸ್ಯೆ ಇರಲಿಲ್ಲ. ಆದರೆ ಈಗ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಅದನ್ನು ಅಧಿಕಾರಕ್ಕೆ ಬಂದ ಮೊದಲ ಹತ್ತು ತಿಂಗಳಲ್ಲೇ ಭರ್ತಿ ಮಾಡುವುದಾಗಿ ಘೋಷಿಸಿದರು.

ಚೌಕಿದಾರ್‌ ಮೋದಿ ಶ್ರೀಮಂತ ಉದ್ಯಮಿಗಳ 3.50 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಉದ್ಯಮಿಗಳ್ಯಾರೂ ಸಾಲ ಕಟ್ಟಿಲ್ಲ, ಜೈಲಿಗೂ ಹೋಗಿಲ್ಲ. ಆದರೆ ಸಾಲ ಮರು ಪಾವತಿ ಮಾಡದ ರೈತರನ್ನು ಮೋದಿ ಜೈಲಿಗೆ ಹಾಕಿಸುತ್ತಿದ್ದಾರೆ. ಮೋದಿ ಸಾಲ ಕಟ್ಟದ ರೈತರ ಮೇಲೆ ಕ್ರಮ ಕೈಗೊಂಡಂತೆ ನೀರವ್‌ ಮೋದಿ, ಅಂಬಾನಿ, ಅದಾನಿ, ವಿಜಯಮಲ್ಯ ವಿರುದ್ಧ ಏಕೆ
ಕ್ರಮ ಕೈಗೊಳ್ಳುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಬಡವರಿಗೆ ನೀಡುವೆ: ದೇಶದ ಚೌಕಿದಾರ್‌ ಎಂದು ಹೇಳಿಕೊಳ್ಳುತ್ತಿರುವ ಮೋದಿ ಮಹಾನ್‌ ಸುಳ್ಳುಗಾರ. ದೇಶದ ಹಣವನ್ನು ಇವರು ಎಷ್ಟು ಲೂಟಿ ಮಾಡಿರಬಹುದು ಎಂಬುದನ್ನು ಜನ ಅರಿಯಬೇಕು. ರಫೇಲ್‌ ವಿಮಾನ ಖರೀದಿಯಲ್ಲಿ 30 ಸಾವಿರ ಕೋಟಿ ರೂ. ಲೂಟಿ ಆಗಿದೆ.

ಲೂಟಿ ಮಾಡಿದ ಅನಿಲ್‌ ಅಂಬಾನಿಗೆ ನೋಟಿಸ್‌-ಜೈಲು ಇಲ್ಲ. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ರೈತರು ಸಾಲ ಕಟ್ಟಲು ಸಾಧ್ಯವಾಗದಿದ್ದಲ್ಲಿ ಜೈಲಿಗೆ ಹೋಗದಂತಹ ಹಾಗೂ ಕ್ರಿಮಿನಲ್‌ ಕೇಸ್‌ ದಾಖಲಾಗದಂತಹ ಕಾನೂನು ಜಾರಿಗೆ ತರಲಾಗುವುದು ಅಲ್ಲದೇ ಉದ್ಯಮಿ ಅನಿಲ್‌ ಅಂಬಾನಿಯ ಹಣವನ್ನು ಕಿತ್ತು ಜನಸಾಮಾನ್ಯರ ಜೇಬಿಗೆ ಹಾಕುವುದಾಗಿ ಭರವಸೆ ನೀಡಿದರು.

ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೇವು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇದ್ದಾಗ ಎಂಟು ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.
ಕುಮಾರಸ್ವಾಮಿ 48 ಸಾವಿರ ಕೋಟಿ ರೂ. ಮನ್ನಾ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಯಾವ ರಾಜ್ಯಗಳಲ್ಲಿ ಇದೆಯೋ ಅಲ್ಲೆಲ್ಲ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ನಾನು ನಿಮ್ಮ ಮುಂದೆ ಸುಳ್ಳು ಹೇಳಲು ಬಂದಿಲ್ಲ. ನಿಮ್ಮ ಹೃದಯದ ಮಾತು ಕೇಳಲು ಬಂದಿದ್ದೇನೆ. ಜನರ ಅಪೇಕ್ಷೆ ಏನಿರುತ್ತದೆಯೋ ಅದು ನನ್ನ ಬಾಯಿಂದ ಮಾತಿನ ರೂಪದಲ್ಲಿ ಹೊರಬರುತ್ತದೆ. ನಾನು ನನ್ನ ಮನ್‌ ಕೀ ಬಾತ್‌ ಹೇಳಲ್ಲ. ನಿಮ್ಮ ಮನ್‌ ಕೀ ಬಾತ್‌ ಕೇಳ್ಳೋಕೆ ಬಂದಿದ್ದೇನೆ.
ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ

ಎರಡು ಸಲ ಭಾಷಣ ನಿಲ್ಲಿಸಿದ ರಾಗಾ
ಚಿತ್ರದುರ್ಗ:
ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಜೆಡಿಎಸ್‌-ಕಾಂಗ್ರೆಸ್‌ ಪರಿವರ್ತನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ  ಮಾತನಾಡುವ ಸಂದರ್ಭದಲ್ಲಿ ಎರಡು ಸಲ ಭಾಷಣ ನಿಲ್ಲಿಸಿದ ಪ್ರಸಂಗ ಜರುಗಿತು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಗಮಿಸುವುದಕ್ಕಿಂತ ಮುಂಚಿತವಾಗಿ ಕೋಲಾರದಿಂದ ಆಗಮಿಸಿದ ರಾಹುಲ್‌ ಗಾಂಧಿ ಭಾಷಣ
ಮಾಡುತ್ತಿದ್ದರು. ಸ್ವಲ್ಪ ಸಮಯದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಅರ್ಧಕ್ಕೆ ಭಾಷಣ ಮೊಟುಕುಗೊಳಿಸಿದ ಅವರು, ಭಾಷಣ ಮಾಡುವ ಸ್ಥಳದಿಂದ ವೇದಿಕೆಯ ಮಧ್ಯಭಾಗಕ್ಕೆ ತೆರಳಿ ಕೈಕುಲುಕಿದರು.
ನಂತರ ಒಬ್ಬರಿಗೊಬ್ಬರು ಅಪ್ಪಿಕೊಂಡರು. ಇದಾದ ಸ್ಪಲ್ಪ ಸಮಯದಲ್ಲೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಮತ್ತೆ ಭಾಷಣ ಸ್ಥಗಿತಗೊಳಿಸಿದ ರಾಹುಲ್‌ ಗಾಂಧಿ,  ಸಿದ್ದರಾಮಯ್ಯ ಇರುವ ಕಡೆ ಹೋಗಿ ಕೈಕುಲುಕಿ ಅಪ್ಪಿಕೊಂಡರು. ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ವೇದಿಕೆಗೆ ಆಗಮಿಸುವ ವೇಳೆಗೆ ಭಾಷಣ ಪೂರ್ಣಗೊಳಿಸಿದ್ದ ರಾಹುಲ್‌ ಗಾಂಧಿ, ಖರ್ಗೆಯವರನ್ನೂ  ಅಪ್ಪಿಕೊಂಡು ಸ್ವಾಗತ ಕೋರಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಕೆಲ ಕಾಲ ಚರ್ಚೆ ನಡೆಸಿದ್ದು ಗಮನ ಸೆಳೆಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ