27 ಗ್ರಾ.ಪಂ.ಗಳಿಗೆ ಇನ್ನೂ ಸ್ವಂತ ಕಟ್ಟಡದ ಭಾಗ್ಯ ಬಂದಿಲ್ಲ  !

Team Udayavani, Apr 20, 2017, 3:35 PM IST

ಮಂಗಳೂರು: ಎರಡು ವರ್ಷಗಳ ಹಿಂದೆ ದ.ಕ. ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಒಟ್ಟು 29 ಗ್ರಾಮ ಪಂಚಾಯತ್‌ಗಳ ಪೈಕಿ ಕೇವಲ ಎರಡು ಪಂಚಾಯತ್‌ಗಳು ಮಾತ್ರ ಸ್ವಂತ ಕಟ್ಟಡಗಳನ್ನು ಹೊಂದಿವೆ !

ಉಳಿದ 27 ಪಂ.ಗಳ ಪೈಕಿ ಆರು ಪಂಚಾಯತ್‌ಗಳ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದರೆ, ಇನ್ನುಳಿದ 21 ಗ್ರಾ.ಪಂ.ಗಳು ಇನ್ನೂ ಸ್ವಂತ ಕಟ್ಟಡಕ್ಕಾಗಿ ಪರದಾಡುತ್ತಿವೆ. ಇನ್ನೊಂದೆಡೆ ನೆರೆಯ ಉಡುಪಿ ಜಿಲ್ಲೆಯ ಕಥೆಯೂ ಇದೇ ಆಗಿದೆ. ಈ ಜಿಲ್ಲೆಯಲ್ಲಿ ಒಟ್ಟು 15 ಹೊಸ ಗ್ರಾಮ ಪಂಚಾಯತ್‌ಗಳು ರಚನೆಯಾಗಿದ್ದು, ಇಲ್ಲಿವರೆಗೆ ಯಾವುದೇ ಪಂಚಾಯತ್‌ಗೂ ಸ್ವಂತ ಕಟ್ಟಡ ಹೊಂದುವ ಭಾಗ್ಯ ಬಂದಿಲ್ಲ ಎನ್ನುವುದು ಗಮನಾರ್ಹ.

ರಾಜ್ಯದಲ್ಲಿ ಜನಸಂಖ್ಯೆ ಆಧಾರದಲ್ಲಿ 2015ರಲ್ಲಿ ಒಟ್ಟು 439 ಹೊಸ ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಬಂದಿದ್ದು, ಆ ಪ್ರಕಾರ ದ.ಕ. ಜಿಲ್ಲೆಯಲ್ಲಿಯೂ ಒಟ್ಟು 29 ಹೊಸ ಗ್ರಾ.ಪಂ.ಗಳು ರಚನೆಯಾಗಿದ್ದವು. ಮಾಜಿ ಶಾಸಕ ಎಸ್‌.ಜಿ. ನಂಜಯ್ಯನಮಠ ನೇತೃತ್ವದ ಗ್ರಾಮ ಪಂ. ಪುನರ್‌ ವಿಂಗಡನಾ ಸಮಿತಿ ನೀಡಿದ‌ ಶಿಫಾರಸ್ಸು ಆಧರಿಸಿ ರಾಜ್ಯಕ್ಕೆ ಹೊಸ ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಬಂದಿದ್ದವು. ರಾಜ್ಯದಲ್ಲಿ 5,000 ರಿಂದ 7,000 ಜನಸಂಖ್ಯೆಯುಳ್ಳ ಪ್ರದೇಶವನ್ನು ಪಂಚಾಯತ್‌ ಪ್ರದೇಶ ಘೋಷಿಸಬಹುದಾಗಿದೆ. ಜತೆಗೆ ದ.ಕ. ಹಾಗೂ ಉಡುಪಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ 5ರಿಂದ 10 ಕಿ.ಮೀ. ಒಳಗಿನ ವ್ಯಾಪ್ತಿಯುಳ್ಳ ಪ್ರದೇಶವನ್ನು ಗ್ರಾ.ಪಂ. ಎಂದು ಘೋಷಿಸಬಹುದಾಗಿದೆ ಎಂದು ತಿಳಿಸಿತು. 

ಅನುದಾನ ಹೀಗೆ
ಹೊಸದಾಗಿ ರಚನೆಗೊಂಡಿರುವ ಪ್ರತಿ ಗ್ರಾ.ಪಂ.ಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಸರಕಾರ ಒಟ್ಟು 20 ಲಕ್ಷ ರೂ. ಅನುದಾನ ನೀಡುತ್ತದೆ. ಅದರಲ್ಲಿ 10 ಲಕ್ಷ ರೂ.ಗಳನ್ನು ಈಗಾಗಲೇ ಬಹುತೇಕ ಎಲ್ಲ ಹೊಸ ಗ್ರಾ.ಪಂ.ಗಳಿಗೂ ಮಂಜೂರು ಮಾಡಲಾಗಿದೆ. ಉಳಿದಂತೆ, 18.22 ಲಕ್ಷ ರೂ.ವನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾ ಪಂಚಾಯತ್‌ಗಳ ಮೂಲಕ ನೀಡಲಾಗುತ್ತದೆ. ಹೊಸ ಕಟ್ಟಡಕ್ಕೆ ಹೆಚ್ಚುವರಿ ಹಣದ ಆವಶ್ಯಕತೆಯಿದ್ದರೆ ಗ್ರಾ.ಪಂ.ಗಳೇ ಭರಿಸಬೇಕಾಗುತ್ತದೆ. 

ಬಂಟ್ವಾಳದಲ್ಲೇ ಪೂರ್ಣ
ಹೊಸ ಗ್ರಾ.ಪಂ.ಗಳ ಪೈಕಿ ಸ್ವಂತ ಕಟ್ಟಡ ಹೊಂದಿರುವ ಎರಡೂ ಗ್ರಾ.ಪಂ.ಗಳು ಬಂಟ್ವಾಳ ತಾಲೂಕಿನಲ್ಲಿವೆೆ. ಇಲ್ಲಿನ ಅಮ್ಮುಂಜೆ ಹಾಗೂ ಅರಳ ಗ್ರಾಮ ಪಂಚಾಯತ್‌ಗಳು ಸ್ವಂತ ಕಟ್ಟಡ ನಿರ್ಮಿಸುವಲ್ಲಿ ಯಶಸ್ವಿಯಾಗಿವೆ. ಉಳಿದಂತೆ, ತಾಲೂಕಿನಲ್ಲಿ ಬರಿಮಾರು, ಬೋಳಂತೂರು, ಇರ್ವತ್ತೂರು, ಕಳ್ಳಿಗೆ, ಮಣಿನಾಲ್ಕೂರು, ಮಾಣಿಲ, ನೆಟ್ಲಮುಟ್ನೂರು, ಪೆರಾಜೆ, ಸಜಿಪಪಡು, ಸಾಲೆತ್ತೂರು ಹೀಗೆ ಒಟ್ಟು 10 ಹೊಸ ಪಂಚಾಯತ್‌ಗಳಿಗೆ ಇನ್ನೂ ಸ್ವಂತ ಕಟ್ಟಡ ಹೊಂದುವ ಕನಸು ಈಡೇರಿಲ್ಲ. 

ಬೆಳ್ತಂಗಡಿ ತಾಲೂಕಿನಲ್ಲಿ ಕಡಿರುದ್ಯಾ ವರ, ಕಳಂಜ, ಪಿಲ್ಯ, ನಾವೂರು, ತೆಕ್ಕಾರು ಹೀಗೆ ಒಟ್ಟು ಐದು ಗ್ರಾ.ಪಂ.ಗಳು ರಚನೆ ಗೊಂಡಿದ್ದು, ಯಾವ ಗ್ರಾ.ಪಂ.ಗಳಕಟ್ಟಡ ಕಾಮಗಾರಿಯೂ ಪ್ರಾರಂಭ ಗೊಂಡಿಲ್ಲ. ಸುಳ್ಯ ತಾಲೂಕಿನಲ್ಲಿ ರಚನೆ ಗೊಂಡಿರುವ ಏಕ ಮಾತ್ರ ಹೊಸ ಗ್ರಾ.ಪಂ. ಪೆರುವಾಜೆಯ ಹೊಸ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು, ಮಂಗಳೂರು ತಾಲೂಕಿನಲ್ಲಿ ಅತಿಕಾರಿಬೆಟ್ಟ, ಬಡಎಡಪದವು, ಇರು ವೈಲು, ಕೊಂಡೆಮೂಲ (ಕಟೀಲು), ಮಲ್ಲೂರು, ಮುತ್ತೂರು, ವಾಲ್ವಾಡಿ ಹೀಗೆ ಒಟ್ಟು 7 ಹೊಸ ಗ್ರಾ.ಪಂ.ಗಳು ರಚನೆಗೊಂಡಿದ್ದು, ಆ ಪೈಕಿ ಅತಿಕಾರಿಬೆಟ್ಟ ಗ್ರಾ.ಪಂ.ನ ಕಟ್ಟಡ ಕಾಮಗಾರಿ
ಮಾತ್ರ ಪ್ರಗತಿಯಲ್ಲಿದೆ. ಪುತ್ತೂರು ತಾಲೂಕಿನಲ್ಲಿಯೂ ಕೊಣಾಜೆ, ಕೆಯ್ಯೂರು, ಕುಡಿಪ್ಪಾಡಿ ಹೀಗೆ 4 ಹೊಸ ಗ್ರಾ.ಪಂ.ಗಳು ಮಂಜೂರಾ ಗಿದ್ದು, ಕುಡಿಪ್ಪಾಡಿ  ಗ್ರಾ.ಪಂ.ನ ಕಟ್ಟಡ ಕಾಮಗಾರಿ ಮಾತ್ರ ಪ್ರಾರಂಭಗೊಂಡಿದೆ. 

ಜಿಲ್ಲೆಯಲ್ಲಿ ಸ್ವಂತ ಕಟ್ಟಡ ಹೊಂದಿರದ ಹೊಸ ಗ್ರಾ.ಪಂ.ಗಳು ಸದ್ಯಕ್ಕೆ ಸರಕಾರಿ ಶಾಲಾ ಕಟ್ಟಡ, ಸೇವಾ ಕೇಂದ್ರ ಸೇರಿದಂತೆ ಬೇರೆ ಕಡೆ ಕಾರ್ಯಾಚರಿಸುತ್ತಿವೆ. 

ನಿವೇಶನದ ಕಾರ್ಯ ಪ್ರಗತಿಯಲ್ಲಿದೆ
“ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಒಟ್ಟು 29 ಗ್ರಾಮ ಪಂಚಾಯತ್‌ಗಳ ಪೈಕಿ ಎರಡು ಗ್ರಾ.ಪಂ.ಗಳು ಈಗ ತನ್ನ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಬಹುತೇಕ ಗ್ರಾ.ಪಂ.ಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇನ್ನು ಕೆಲವೊಂದು ಗ್ರಾ.ಪಂ.ಗಳ ನಿವೇಶನ ಗುರುತಿಸುವಿಕೆ ಕಾರ್ಯ ಕೂಡ ನಡೆಯುತ್ತಿದೆ.’

ಎನ್‌.ಆರ್‌.ಉಮೇಶ್‌, ಉಪಕಾರ್ಯದರ್ಶಿ, ದ.ಕ.ಜಿ.ಪಂ.

 ಕಿರಣ್‌ ಸರಪಾಡಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ