ಹೆಸರಿಗಷ್ಟೇ ರಾಷ್ಟ್ರೀಯ ಹೆದ್ದಾರಿ; ಮೈತುಂಬ ಮೃತ್ಯುಕೂಪಗಳು!

ವರ್ಷದಿಂದ ನನೆಗುದಿಯಲ್ಲಿ ಬಿ.ಸಿ.ರೋಡ್‌-ಅಡ್ಡಹೊಳೆ ಚತುಷ್ಪಥ ಕಾಮಗಾರಿ

Team Udayavani, Sep 12, 2019, 5:07 AM IST

ಮಾಣಿ ಸಮೀಪ ಬೃಹತ್‌ ರಸ್ತೆ ಹೊಂಡ.

ಬಿ.ಸಿ.ರೋಡ್‌ನಿಂದ ಶಿರಾಡಿಯ ಅಡ್ಡಹೊಳೆಯವರೆಗಿನ ರಾಷ್ಟ್ರೀಯ ಹೆದ್ದಾರಿ ಹೆಸರಿಗಷ್ಟೇ ಮಾತ್ರ. ಎಲ್ಲವೂ ನಿರೀಕ್ಷೆಯಂತೆ ನಡೆಯುತ್ತಿದ್ದರೆ ಎಂದೋ ಚತುಷ್ಪಥವಾಗಬೇಕಿತ್ತು. ಆದರೆ 2 ವರ್ಷಗಳ ಹಿಂದೆ ಪ್ರಾರಂಭಗೊಂಡಿದ್ದ ಕಾಮಗಾರಿ ಅರ್ಧಕ್ಕೇ ನಿಂತು ವರ್ಷವೇ ಕಳೆದಿದೆ. ರಸ್ತೆ ತುಂಬ ಮೃತ್ಯುಕೂಪಗಳನ್ನು ಹೊದ್ದುಕೊಂಡಿರುವ ಈ ರಸ್ತೆ ಪ್ರಯಾಣಕ್ಕೆ ದುಸ್ತರವಾಗಿದೆ. ಮಾಣಿ-ಬಿ.ಸಿ. ರೋಡ್‌ ನಡುವೆ ಇರುವುದು ಬರೀ ಹೊಂಡಗಳೇ.

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿಯ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ ವರೆಗಿನ ಸುಮಾರು 62 ಕಿ.ಮೀ. ಚತುಷ್ಪಥವನ್ನಾಗಿಸಲು 2 ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಆದರೀಗ ಹಲವು ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡು ವರ್ಷವೇ ಕಳೆದಿದೆ.

ಇದರಿಂದ ಸಂಕಷ್ಟ ಅನುಭವಿಸುತ್ತಿರುವುದು ಪ್ರಯಾಣಿಕರು ಹಾಗೂ ವಾಹನ ಸವಾರರು. ಸ್ಥಳೀಯರಿಗೂ ಆಗುತ್ತಿರುವ ಕಿರಿಕಿರಿ ಕಡಿಮೆಯೇನಿಲ್ಲ.ಈ ರಸ್ತೆಯಲ್ಲಿ ಆಗಿರುವ ಅಧ್ವಾನ-ಅವಾಂತರ ನೋಡಿದರೆ, ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಎನ್ನುವಂತಿಲ್ಲ. ಜತೆಗೆ ಸುರಿದ ಮಳೆಯಿಂದ ರಸ್ತೆ ಇನ್ನಷ್ಟು ಹಾಳಾಗಿದೆ. ರಸ್ತೆ ಯಾವುದು; ಹೊಂಡ ಯಾವುದು ಮೊದಲೂ ಅರಿವಿಗೆ ಬರುತ್ತಿರಲಿಲ್ಲ. ಈಗಲಂತೂ ಹೇಳುವಂತಿಲ್ಲ.

ಪಾಣೆಮಂಗಳೂರಿನಿಂದ ಉಪ್ಪಿನಂಗಡಿವರೆಗೆ ಸೃಷ್ಟಿಯಾಗಿರುವ ಹೊಂಡಗಳು ಮೃತ್ಯು ಕೂಪಗಳಾಗಿ ಅಪಾಯವನ್ನು ಆಹ್ವಾನಿಸುತ್ತಿವೆ. ಚಾರ್ಮಾಡಿ ಘಾಟಿ ಬಂದ್‌ ಬಳಿಕ ಈ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು, ಬಿ.ಸಿ.ರೋಡ್‌ನಿಂದ ಕೊಕ್ಕಡ ಕ್ರಾಸ್‌ ವರೆಗಿನ ಪ್ರಯಾಣವಂತೂ ಮತ್ತಷ್ಟು ಅಪಾಯಕಾರಿ ಎನಿಸಿದೆ.

ತಲೆಕೆಡಿಸಿಕೊಳ್ಳದ ಪ್ರಾಧಿಕಾರ
ಈ ರಸ್ತೆಯಲ್ಲಿ ಯಾವ ಸುರಕ್ಷಾ ನಿಯಮಗಳೂ ಪಾಲನೆಯಾಗುತ್ತಿಲ್ಲ. ಹೆದ್ದಾರಿ ಇಷ್ಟೊಂದು ಶೋಚನೀಯ ಸ್ಥಿತಿಯಲ್ಲಿದ್ದರೂ ಹೆದ್ದಾರಿ ಪ್ರಾಧಿಕಾರ ಸಹಿತ ಸಂಬಂಧಪಟ್ಟ ಇಲಾಖೆ, ಜಿಲ್ಲಾಡಳಿತ ತಲೆ ಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ “ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ಕಾರಣ ಅವರ ಮುಂದಿದೆ.

ಕಳೆದ ಮೂರು ವರ್ಷ ಗಳ ಅಪಘಾತಗಳ ಅಂಕಿಅಂಶ ವನ್ನು ಗಮನಿಸಿದರೆ ದ.ಕ. ಜಿಲ್ಲೆಯಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತಿದೆ. ಇದರಲ್ಲಿ ಗರಿಷ್ಠ ವಾಹನ ಸಂಚಾರವಿರುವ ಎನ್‌ಎಚ್‌ 75ರಲ್ಲಿ ಗರಿಷ್ಠ ಸಂಖ್ಯೆಯ ಅಪಘಾತ ಸಂಭವಿಸಿದ್ದು ಸಾವುನೋವು ಕೂಡ ಅಧಿಕವಾಗಿದೆ.

ಹಂಪ್ಸ್‌ ಗೊತ್ತಾಗುವುದೇ ಇಲ್ಲ
ಹೆದ್ದಾರಿಯಲ್ಲಿ ಸಾಕಷ್ಟು ಕಡೆ ಅಪಾಯಕಾರಿ ತಿರುವುಗಳಿವೆ, ತಿಳಿಯುವುದೇ ಇಲ್ಲ. ಸೂರಿ ಕುಮೇರಿನಲ್ಲಿ ಹಾಕಿರುವ ಹಂಪ್‌ಗ್ಳನ್ನು ಹಗಲಿನಲ್ಲೇ ಗುರುತಿಸುವುದು ಕಷ್ಟ. ಮಾಣಿಯ ಒಂದು ಕಡೆ ಯಾರಿಗೂ ಕಾಣಿಸದ ರೀತಿಯಲ್ಲಿ ರಸ್ತೆ ವಿಭಾಜಕಗಳನ್ನು ಹಾಕಲಾಗಿದೆ. ಸವಾರರು ಎಚ್ಚರ ತಪ್ಪಿದರೆ ಅಪಘಾತ ಖಚಿತ. ಸತ್ತಿಕಲ್ಲು ಹಾಗೂ ಆನಂತರ ಕಾಣಿಸುವ ಪೆಟ್ರೋಲ್‌ ಬಂಕ್‌ ಬಳಿಯೂ ಅವೈಜ್ಞಾನಿಕ ರೀತಿಯಲ್ಲಿ ಹಂಪ್‌ಗ್ಳನ್ನು ಹಾಕಲಾಗಿದೆ.

ಅಪಘಾತಕ್ಕೆ ಕಾರಣಗಳು
-ಅಲ್ಲಲ್ಲಿ ರಸ್ತೆ ಅಗೆದು ಹಾಕಿರುವ ಕಾರಣ, ರಾತ್ರಿವೇಳೆ ವಾಹನ ಸವಾರರಿಗೆ ರಸ್ತೆ ಯಾವುದೆಂದು ತಿಳಿಯದಿರುವುದು.
– ಅವ್ಯವಸ್ಥಿತ ಕಾಮಗಾರಿಯಿಂದಾಗಿ ಚಾಕಲರಿಗೆ ಗೊಂದಲ.
– ಅಪಾಯಕಾರಿ ತಿರುವುಗಳ ಕಡೆ ಮುನ್ಸೂಚನಾ ಫ‌ಲಕಗಳಿಲ್ಲ
– ಅವೈಜ್ಞಾನಿಕ ರೀತಿಯಲ್ಲಿ ಅಳವಡಿಸಲಾದ ಹಂಪ್ಸ್‌
– ನಿರ್ದಿಷ್ಟ ಸಂಕೇತದ ಸೂಚನಾ ಫ‌ಲಕ ಅಳವಡಿಸದಿರುವುದು.
-ರಸ್ತೆ ಸುರಕ್ಷತಾ ನಿಯಮದ ಬಗ್ಗೆ ನಿರ್ಲಕ್ಷ್ಯ

ನಿಯಮ ಮಾತ್ರ; ಪಾಲನೆಯಿಲ್ಲ
ಪತ್ರಿಕೆಯ ತಂಡವು ಗಮನಿಸಿದಂತೆ ಬಿ.ಸಿ.ರೋಡ್‌ ಅನಂತರ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಪಥ ಗೊತ್ತುಪಡಿಸಲು ಬಿಳಿ ಬಣ್ಣದ ಲೈನ್‌ ಹಾಕಿರಬೇಕು. ಜನರು ರಸ್ತೆ ದಾಟುವ ಕಡೆ ಹಾಗೂ ನಗರ-ಪಟ್ಟಣ ವ್ಯಾಪ್ತಿಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಚಿಹ್ನೆಗಳನ್ನು ಹಾಕಿರಬೇಕು. ಆದರೆ ಯಾವುದೂ ಇಲ್ಲಿ ಅಳವಡಿಕೆಯಾಗಿಲ್ಲ.
ತಿರುವು ಪಡೆಯುವಲ್ಲಿ ನಿರ್ದಿಷ್ಟ ದೂರಕ್ಕೆ ಕಾಣಿಸುವ ರೀತಿಯಲ್ಲಿ ಸೂಚನಾ ಫಲಕವನ್ನೂ ಇಲ್ಲಿ ಅಳವಡಿಸಿಲ್ಲ. ಕಡಬ-ಸುಬ್ರಹ್ಮಣ್ಯ ಕಡೆಗೆ ತಿರುವು ಪಡೆಯುವಲ್ಲಿಯೂ ಸಿಗ್ನಲ್‌ ಅಥವಾ ಸೂಚನಾ ಫಲಕ ಹಾಕದಿರುವುದಂತೂ ಅಪಾಯವನ್ನು ಆಹ್ವಾನಿಸುತ್ತಿದೆ.

ಹೆದ್ದಾರಿ ಅಪಘಾತಕ್ಕೆ ಐವರು ಬಲಿ !
ಐದು ತಿಂಗಳ ಅವಧಿಯಲ್ಲಿ ಈ ರಸ್ತೆಯಲ್ಲಿ ಎರಡು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಐವರು ಬಲಿಯಾಗಿದ್ದಾರೆ. ನೆಲ್ಯಾಡಿಯಲ್ಲಿ ಟ್ರಕ್‌ ಮತ್ತು ಎಸ್‌ಯುವಿ ಹಾಗೂ ಪಾಣೆಮಂಗಳೂರಿನಲ್ಲಿ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಅಪಘಾತ ಸಂಭವಿಸಿತ್ತು. ವಾಹನ ಸವಾರರ ನಿರ್ಲಕ್ಷé, ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯ, ಅವೈಜ್ಞಾನಿಕ ಕಾಮಗಾರಿ ಇದಕ್ಕೆ ಕಾರಣವೆಂದು ಹೇಳಬಹುದು.

ನೀವೂ ಸ್ಪಂದಿಸಿ ಸಮಸ್ಯೆ ತಿಳಿಸಿ
ದಕ್ಷಿಣ ಕನ್ನಡದಿಂದ ಹಾದು ಹೋಗುವ ಎರಡು ಮುಖ್ಯ ರಾ.ಹೆ. 75 ಮತ್ತು 66ರಲ್ಲಿ ಹೆಚ್ಚುತ್ತಿರುವ ಅಪಘಾತಗಳು ಕೊನೆಯಾಗಬೇಕೆನ್ನುವುದು ಉದಯವಾಣಿ ಕಾಳಜಿ. ಈ ಹೆದ್ದಾರಿಗಳಲ್ಲಿ ಪ್ರತಿನಿತ್ಯ ಓಡಾಡುವವರು, ವಾಹನ ಸವಾರರು ಅಥವಾ ಹೆದ್ದಾರಿ ಪರಿಣತರಿಗೆ ಎಲ್ಲೆಲ್ಲಿ ಅಪಘಾತ ವಲಯಗಳಾಗುತ್ತಿವೆ ಮತ್ತು ಅದಕ್ಕೆ ಕಾರಣಗಳೇನು ಎಂಬುದು ತಿಳಿದಿರುತ್ತದೆ. ಜತೆಗೆ ಹೆದ್ದಾರಿಗಳ ಸುರಕ್ಷತೆ ಕಡೆಗಣಿಸಿರುವ ನಮ್ಮ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಬೇಕು. ಈ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ ನಿಮ್ಮ ಸಲಹೆ-ಅಭಿಪ್ರಾಯ, ಸಮಸ್ಯೆಯನ್ನು ಈ ಸಂಖ್ಯೆಗೆ 9964169554 ಫೂಟೋ ಸಮೇತ ವಾಟ್ಸ್‌ಆ್ಯಪ್‌ ಮಾಡಿ.

ವಾಸ್ತವ ವರದಿ:  ಮಂಗಳೂರು ಟೀಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ