ರಾಜ್ಯ ಸರಕಾರದ ವಿರುದ್ಧ ಸುಪ್ರೀಂಗೆ ದೂರು ಸಲ್ಲಿಕೆ
Team Udayavani, Oct 6, 2017, 7:15 AM IST
ಬೆಳ್ತಂಗಡಿ: ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ 2,000 ಕೋ.ರೂ. ಹಗರಣ ನಡೆದಿದೆ ಎಂದು ಆರೋಪಿಸಿ ಪರಿಸರ ಹೋರಾಟಗಾರ, ಎತ್ತಿನಹೊಳೆ ಹೋರಾಟಗಾರ ಕೆ.ಎನ್. ಸೋಮಶೇಖರ್ ಅವರು ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದ್ದಾರೆ. ಇದಕ್ಕೆ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ವಕೀಲರಾಗಿದ್ದಾರೆ.
ಅ. 3ರಂದು ಕೇಸು ನ್ಯಾಯಾಲಯದಲ್ಲಿ ದಾಖಲಾಗಿದ್ದು ವಿಚಾರಣೆಗೆ ಅಂಗೀಕಾರವಾಗಿದೆ. ಸುಪ್ರೀಂ ಕೋರ್ಟಿನಿಂದ ರಾಜ್ಯ ಸರಕಾರಕ್ಕೆ ನೋಟಿಸ್ ಕಳುಹಿಸಲಾಗಿದೆ.
ಕೃಷಿ ಇಲಾಖೆ, ಜಲಾನಯನ ಇಲಾಖೆ, ತೋಟಗಾರಿಕಾ ಇಲಾಖೆ ವಿರುದ್ಧ ಗುರುತರ ಆರೋಪ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ 10,000 ಕೋ.ರೂ. ಹಗರಣ ನಡೆದಿದೆ ಎಂದು ಮಾಹಿತಿ ಹಕ್ಕು ದಾಖಲೆಯನ್ವಯ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಆದರೆ ಅಲ್ಲಿ ಕೇಸು ಅನೂರ್ಜಿತಗೊಂಡಿತ್ತು. ಈಗ ಇಡೀ ರಾಜ್ಯದಲ್ಲಿ ಇಂತಹ ಹಗರಣ ನಡೆದಿದೆ ಎಂದು ಆಪಾದಿಸಿ ಸುಪ್ರೀಂ ಮೊರೆ ಹೋಗಲಾಗಿದೆ. ಇಡೀ ರಾಜ್ಯದಲ್ಲಿ ಈ ಇಲಾಖೆಗಳು ಕೋಟ್ಯಂತರ ರೂ. ಭ್ರಷ್ಟಾಚಾರದ ಮೂಲಕ ದುರ್ವಿನಿಯೋಗ ಮಾಡಿವೆ. ಆದ್ದರಿಂದ ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿರುವ ಸೋಮಶೇಖರ್, ದ.ಕ. ಜಿಲ್ಲೆಯಲ್ಲಿ ಕೂಡ ವಾರ್ಷಿಕ 10 ಕೋ.ರೂ.ಗಳಷ್ಟಾದರೂ ಅವ್ಯವಹಾರ ನಡೆದಿರುತ್ತದೆ ಎಂದಿದ್ದಾರೆ. ಮುಂದಿನ ವಿಚಾರಣೆಗೆ ದಿನ ನಿಗದಿಯಾಗಿಲ್ಲ.