ಶಿಸ್ತು, ವಿಧೇಯತೆ ಉಜ್ವಲ ಭವಿಷ್ಯಕ್ಕೆ ಬುನಾದಿ: ಬಿಷಪ್‌

Team Udayavani, Jun 8, 2018, 2:00 AM IST

ದರ್ಬೆ : ವಿದ್ಯಾರ್ಥಿ ಜೀವನದಲ್ಲಿ ಕಲಿತುಕೊಳ್ಳುವ ಶಿಸ್ತು, ವಿಧೇಯತೆ ಭವಿಷ್ಯದಲ್ಲಿ ಸಾಧನೆಯ ಹಾದಿಯನ್ನು ತೆರೆಯುವಂತೆ ಮಾಡುತ್ತದೆ. ಜೀವನದಲ್ಲಿ ಸಾಧಿಸುವ ಛಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ಹಾಗೂ ಕೆಥೋಲಿಕ್‌ ಶಿಕ್ಷಣ ಮಂಡಳಿಯ ಅಧ್ಯಕ್ಷ ವಂ| ಡಾ| ಅಲೋಶಿಯಸ್‌ ಪೌಲ್‌ ಡಿ’ಸೋಜಾ ಹೇಳಿದರು. ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿದ ಅವರು, ಹೊಸ ಪ್ರಯೋಗಾಲಯದ ಶಿಲಾನ್ಯಾಸದ ಆಶೀರ್ವಚನ ನೀಡಿದರು.

ಶೈಕ್ಷಣಿಕ ಸಾಧನೆಯಂತೆ ಜೀವನ ಮೌಲ್ಯಗಳನ್ನು ಅರಿತುಕೊಂಡು ಬೆಳೆಸಿ ಕೊಂಡು ಹೋಗುವುದು ಅಗತ್ಯ. ವಿದ್ಯಾರ್ಥಿ ಜೀವನ ದಲ್ಲಿ ಪರಿಶ್ರಮ, ಸಿದ್ಧತೆಗಳೊಂದಿಗೆ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿ ಸಂಘದಂತಹ ನಾಯಕತ್ವ ಗುಣ ಬೆಳೆಸಿಕೊಳ್ಳುವ ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಬೆಳಕಾಗಿ ಗುರುತಿಸಿ ಕೊಳ್ಳಬೇಕು ಎಂದರು.

ಸಂತ ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ಶಿಸ್ತಿನ ವಾತಾವರಣವಿದೆ. 6 ದಶಕಗಳ ಹಿಂದೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಂ| ಆ್ಯಂಟನಿ ಪತ್ರಾವೋ ಅವರು ದೂರದೃಷ್ಟಿತ್ವದಿಂದ ನಿರ್ಮಾಣಗೊಂಡ ಸಂಸ್ಥೆ ಇಂದು ಅನೇಕರನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಇನ್ನಷ್ಟು ಕೋರ್ಸುಗಳನ್ನು ಆರಂಭಿಸುವ ಇಂಗಿತವನ್ನು ಹೊಂದಿದ್ದೇವೆ ಎಂದರು.


ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಿ

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂತ ಫಿಲೋಮಿನಾ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೆರೊ ಮಾತನಾಡಿ, ಇಂದು ಸಮಾಜಕ್ಕೆ ಶಕ್ತಿಯುತ ನಾಯಕತ್ವದ ಅಗತ್ಯವಿದೆ. ಯಾವುದೇ ವ್ಯವಸ್ಥೆಯನ್ನು ವಿಸ್ತರಿಸಬೇಕಾದರೆ ಉತ್ತಮ ನಾಯಕತ್ವ ಬೇಕು. ಶಿಸ್ತು, ಗುಣಮಟ್ಟವಿದ್ದಲ್ಲಿ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾಸಂಸ್ಥೆಯ ಸಂಚಾಲಕ ಆಲ್ಫ್ರೆಡ್‌ ಜೆ. ಪಿಂಟೋ ಮಾತನಾಡಿ, ಹಿರಿಯರನ್ನು ಗೌರವಿಸುವುದು, ಸಮಾಜದಲ್ಲಿ ಪ್ರೀತಿ ವಿಶ್ವಾಸ, ಸೌಹಾರ್ದತೆಯೊಂದಿಗೆ ಬದುಕುವುದು ಅಗತ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಉತ್ತಮ ಅಡಿಪಾಯದೊಂದಿಗೆ ಬೆಳೆಯಬೇಕು. ಬಿಷಪ್‌ ಅವರ ನೇತೃತ್ವದಲ್ಲಿ ಕೆಥೋಲಿಕ್‌ ವಿದ್ಯಾಸಂಸ್ಥೆಗಳು ಇಂತಹ ಕಾರ್ಯಗಳನ್ನು ಅತ್ಯಂತ ಮುತುವರ್ಜಿಯಿಂದ ಮಾಡುತ್ತಿವೆ ಎಂದರು. ಸಂತ ಫಿಲೋಮಿನ ಪದವಿ ಕಾಲೇಜಿನ ಪ್ರಾಂಶುಪಾಲ ಲಿಯೋ ನೊರೊನ್ಹಾ ಶುಭಹಾರೈಸಿದರು. ರಕ್ಷಕ – ಶಿಕ್ಷಕ ಸಂಘದ ಕುಂಬ್ರ ದುರ್ಗಾಪ್ರಸಾದ್‌ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೈರಾಜ್‌ ಭಂಡಾರಿ, 

ಮಾçದೆ ದೇವುಸ್‌ ಚರ್ಚ್‌ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆ.ಪಿ. ರೋಡ್ರಿಗಸ್‌, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಕಾಶ್‌ ಸಿ. ಭಟ್‌, ಕಾರ್ಯದರ್ಶಿ ಶ್ರೀದೇವಿ ಕೆ., ಜತೆ ಕಾರ್ಯದರ್ಶಿ ಡೆಲ್ಮಾ ಲೋರಾ ಡಿ’ಕುನ್ಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ.ಪೂ. ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್‌ ಲೋಬೊ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಕಾಶ್‌ ಸಿ. ಭಟ್‌ ವಂದಿಸಿದರು. ಉಪನ್ಯಾಸಕ ರಾಹುಲ್‌ ಕಾರ್ಯಕ್ರಮ ನಿರ್ವಹಿಸಿದರು.

ಶಿಲಾನ್ಯಾಸ
ಅರುವತ್ತರ ವರ್ಷಾಚರಣೆ ಸಂಭ್ರಮದಲ್ಲಿರುವ ಕಾಲೇಜಿನಲ್ಲಿ ಹೊಸ ಪ್ರಯೋಗಾಲಯ ನಿರ್ಮಾಣಕ್ಕೆ ಬಿಷಪ್‌ ವಂ| ಡಾ| ಅಲೋಶಿಯಸ್‌ ಪೌಲ್‌ ಡಿ’ಸೋಜಾ ಅವರು ಪೂಜಾ ವಿಧಿ ನೆರವೇರಿಸಿ ಶಿಲಾನ್ಯಾಸ ನೆರವೇರಿಸಿದರು.ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ವಿಭಾಗಗಳ ಸಂಘಗಳ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಪ್ರಾಂಶುಪಾಲ ವಂ| ವಿಜಯ್‌ ಲೋಬೋ ಬೋಧಿಸಿದರು.

ಸಮ್ಮಾನ
ಹೊಸದಿಲ್ಲಿಯಲ್ಲಿ ನಡೆದ 2017 -18ನೇ ಸಾಲಿನ ಗಣರಾಜ್ಯೋತ್ಸವ ಪರೇಡ್‌ ನ‌ಲ್ಲಿ ಭಾಗವಹಿಸಿದ ಹಾಗೂ ಎನ್‌.ಸಿ.ಸಿ. ಸಾಧಕ ವಿದ್ಯಾರ್ಥಿ ಜೋವಿನ್‌ ಜೋಸೆಫ್‌ ಅವರನ್ನು ಬಿಷಪ್‌ ಸಮ್ಮಾನಿಸಿದರು. ಶೈಕ್ಷಣಿಕ ವಿಚಾರಗಳಲ್ಲಿ ನಿರಂತರ ಪ್ರೋತ್ಸಾಹ ನೀಡುವ ಬಿಷಪ್‌ ವಂ| ಡಾ| ಅಲೋಶಿಯಸ್‌ ಪೌಲ್‌ ಡಿ’ಸೋಜಾ ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಗೌರವಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ