‘ಕಡ್ಡಾಯ ಹಾಜರಾತಿ’ ಗೆ ಖಾತ್ರಿ ಕಾರ್ಮಿಕರ ಕೆಂಗಣ್ಣು
Team Udayavani, Apr 13, 2022, 2:29 PM IST
ದಾವಣಗೆರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಎನ್‌ಎಂಎಂಎಸ್ ಆ್ಯಪ್ (ನ್ಯಾಶನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ಮೂಲಕ ದಿನಕ್ಕೆ ಎರಡು ಬಾರಿ ಕಡ್ಡಾಯ ಹಾಜರಾತಿ ಹಾಕಬೇಕೆಂಬ ಕೇಂದ್ರ ಸರ್ಕಾರದ ನಿಯಮ ಕಾರ್ಮಿಕರ ಕಣ್ಣು ಕೆಂಪಾಗಿಸಿದೆ.
ಬೇಸಿಗೆಯ ಸಮಯದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸರಾಸರಿ 35-40 ಡಿ.ಸೆ.ವರೆಗೂ ಬಿಸಿಲಿನ ಪ್ರಖರತೆ ಇರುತ್ತದೆ. ಸರ್ಕಾರದ ಈ ಕಡ್ಡಾಯ ನಿಯಮಾವಳಿಯಿಂದ ಹಾಜರಾತಿಗಾಗಿ ಬಿರುಬಿಸಿಲಿನಲ್ಲಿ ಮಧ್ಯಾಹ್ನ 2 ಗಂಟೆವರೆಗೂ ಕಾದು ಕುಳಿತು ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಬಿಸಿಲಿನ ಕಾರಣದಿಂದ ಕೇಂದ್ರ ಸರ್ಕಾರ ರಾಜ್ಯದ ಬೆಳಗಾವಿ ಹಾಗೂ ಕಲಬುರಗಿ ವಿಭಾಗದ 14 ಜಿಲ್ಲೆಗಳಲ್ಲಿ ಕೆಲಸದ ಪ್ರಮಾಣ ದಲ್ಲಿ ರಿಯಾಯಿತಿ ನೀಡಿದೆ. ಆದರೆ ಎರಡು ಬಾರಿಯ ಹಾಜರಾತಿ ಕಡ್ಡಾಯದಿಂದ ಕಾರ್ಮಿಕರು ಇಡೀ ದಿನ ಬಿಸಿಲಲ್ಲಿ ಬೇಯುವಂತಾಗಿದೆ.
ಆ್ಯಪ್ ಮೂಲಕ ಹಾಜರಾತಿ ಹಾಕುವ ನಿಯಮವನ್ನು ಕೇಂದ್ರ ಸರ್ಕಾರ ರಾಜ್ಯದಲ್ಲಿ ಜನವರಿಯಿಂದಲೇ ಆರಂಭಿಸಿದೆ. ಆದರೆ, ಕಳೆದ 3 ತಿಂಗಳಲ್ಲಿ ಇದು ಎಲ್ಲೆಡೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಕೆಲವರು ಬೆಳಗ್ಗೆ ಮಾತ್ರ ಹಾಜರಾತಿ ಹಾಕಿದರೆ, ಮತ್ತೆ ಕೆಲವರು ಸಂಜೆ ಮಾತ್ರ ಹಾಜರಾತಿ ಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾ ಲಯ ದಿನಕ್ಕೆ ಎರಡು ಬಾರಿ ಹಾಜರಾತಿಯನ್ನು ಹೊಸ ಆರ್ಥಿಕ ವರ್ಷ ಏಪ್ರಿಲ್‌ನಿಂದ ಕಡ್ಡಾಯ ಗೊಳಿಸಿದ್ದು ಇದು ಕಾರ್ಮಿಕರ ನಿದ್ದೆಗೆಡಿಸಿದೆ.
ಎರಡು ಬಾರಿ ಹಾಜರಾತಿ ಕಡ್ಡಾಯ
ಸರ್ಕಾರದ ಈ ನಿಯಮದಿಂದಾಗಿ ಕೂಲಿ ಕಾರ್ಮಿಕರು ಬೆಳಗ್ಗೆ 11 ಗಂಟೆಯೊಳಗೆ ಹಾಗೂ ಮಧ್ಯಾಹ್ನ 2ರಿಂದ 5 ಗಂಟೆಯೊಳಗೆ ಎರಡು ಬಾರಿ ಕೂಲಿಕಾರರ ಹಾಜರಾತಿ ಹಾಗೂ ಛಾಯಾಚಿತ್ರವನ್ನು ಎನ್‌ಎಂಎಂಎಸ್ ಆ್ಯಪ್ ಮೂಲಕ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕಾಗಿದೆ.
ಸಾಮಾನ್ಯವಾಗಿ ಕೂಲಿ ಕಾರ್ಮಿಕರು ಬೇಸಿಗೆ ದಿನಗಳಲ್ಲಿ ಬೆಳಗ್ಗೆ ಆರು ಗಂಟೆಯಿಂದಲೇ ಕೆಲಸಕ್ಕೆ ಬಂದು 11ರಿಂದ 12 ಗಂಟೆವರೆಗೆ ಕೆಲಸ ಮಾಡಿ ಹೋಗುತ್ತಿದ್ದರು. ಈ ಆ್ಯಪ್ ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ಇದರ ಪಾಲನೆ ನರೇಗಾ ಕೂಲಿ ಕಾರ್ಮಿಕರಿಗೆ ಕಷ್ಟವಾಗಿದೆ. ದಿನವೊಂದಕ್ಕೆ ನಿಗದಿಗೊಳಿಸಿದ ಕೆಲಸವನ್ನು ಬೆಳಗ್ಗೆ 6-7 ಗಂಟೆಗೆ ಬಂದು 12 ಗಂಟೆಯೊಳಗೆ ಮುಗಿಸಿದರೂ ಎರಡನೇ ಹಾಜರಾತಿಗಾಗಿ ಮಧ್ಯಾಹ್ನ 2 ಗಂಟೆವರೆಗೂ ಕಾಯಬೇಕಾದ ಈ ವ್ಯವಸ್ಥೆ ಕಾರ್ಮಿಕರ ಬೇಸಿಗೆ ಬೇಗೆಯನ್ನು ಇನ್ನಷ್ಟು ಹೆಚ್ಚಿಸಿದಂತಾಗಿದೆ.
ಬೇಸಿಗೆ ಸಮಯ ಎಷ್ಟು ಸರಿ?
ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಬೇಸಿಗೆ ದಿನಗಳಲ್ಲಿ ಕಚೇರಿ ಅವಧಿ ಬದಲಾಯಿಸಿ ಅನುಕೂಲ ಮಾಡಿಕೊಡುವ ಸರ್ಕಾರ, ಬಯಲಲ್ಲಿ ನಿಂತು ಕೆಲಸ ಮಾಡುವವರಿಗೆ ಈ ರೀತಿಯ ನಿಯಮಾವಳಿ ಹೇರುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ನಿಯಮಗಳನ್ನು 20ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುವ ಕಾಮಗಾರಿಗಳಿಗೆ ಮಾತ್ರ ಕಡ್ಡಾಯಗೊಳಿಸಿದ್ದು ಇದರಿಂದ ದೊಡ್ಡ ಕಾಮಗಾರಿಗಳಲ್ಲಿ ಭಾಗವಹಿಸಲು ಕಾರ್ಮಿಕರು ಹಿಂದೇಟು ಹಾಕುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು ಎಂಬುದು ಕಾರ್ಮಿಕ ಸಂಘಟನೆಗಳ ಆತಂಕ.
ಒಟ್ಟಾರೆ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಸರ್ಕಾರ ಆ್ಯಪ್ ಮೂಲಕ ದಿನಕ್ಕೆ ಎರಡು ಬಾರಿ ಹಾಜರಾತಿ ಕಡ್ಡಾಯಗೊಳಿಸಿದೆ. ಆದರೆ ಈ ನಿಯಮಾವಳಿಯಿಂದ ಬೇಸಿಗೆಯ 3 ತಿಂಗಳಾದರೂ ವಿನಾಯಿತಿ ನೀಡಬೇಕು ಎಂಬುದು ಕಾರ್ಮಿಕರ ಅಪೇಕ್ಷೆ.
ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಎರಡೂ ಹಾಜರಾತಿ ಪಡೆಯುವಂತಾಗಬೇಕು. ಎರಡನೇ ಹಾಜರಾತಿಗಾಗಿ ಮಧ್ಯಾಹ್ನದವರೆಗೆ ಬಿರುಬಿಸಿಲಲ್ಲಿ ಕಾಯಲು ಆಗದು. ಸರ್ಕಾರ ಹಾಜರಾತಿ ಸಮಯ ಬದಲಾವಣೆ ಮಾಡದಿದ್ದರೆ ನರೇಗಾ ಕೂಲಿಗೆ ಬರುವ ಕಾರ್ಮಿಕರ ಸಂಖ್ಯೆಯೂ ಕ್ಷೀಣಿಸುವ ಸಾಧ್ಯತೆ ಇದೆ. -ಕೋಗಳಿ ಮಲ್ಲೇಶ್, ಖಜಾಂಚಿ, ರಾಜ್ಯ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ
ಎನ್‌ಎಂಎಂಎಸ್ ಆ್ಯಪ್ ಮೂಲಕ ದಿನಕ್ಕೆ ಎರಡು ಬಾರಿ ಕಾರ್ಮಿಕರ ಹಾಜರಾತಿಯನ್ನು ಏಪ್ರಿಲ್‌ನಿಂದ ಕಡ್ಡಾಯಗೊಳಿಸಲಾಗಿದೆ. ಬೆಳಗ್ಗೆ 11 ಗಂಟೆಯೊಳಗೆ ಮೊದಲ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯೊಳಗೆ ಎರಡನೇ ಹಾಜರಾತಿ ಹಾಕಬೇಕಾಗಿದೆ. -ಡಾ| ಎ.ಚನ್ನಪ್ಪ, ದಾವಣಗೆರೆ ಜಿಪಂ ಸಿಇಒ
-ಎಚ್. ಕೆ. ನಟರಾಜ್