ಗುಬ್ಬಿಯಾದ ರೈತರ ಮೇಲೆ ಹುಬ್ಬಿ ಬ್ರಹ್ಮಾಸ್ತ್ರ

•ಕೊಳೆಯುತ್ತಿದೆ ಸೋಯಾಬೀಜ•ತೆನೆಯಲ್ಲೇ ಕಮರುತ್ತಿದೆ ಗೋವಿನಜೋಳ•ಹೇಳ ಹೆಸರಿಲ್ಲದಂತಾದ ಹೆಸರು

Team Udayavani, Sep 11, 2019, 10:00 AM IST

ಧಾರವಾಡ: ಆರಿದ್ರಾ ಮಳೆಗೆ ಮುಳುಗಿ ಎದ್ದು ಮತ್ತೆ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಜಿಲ್ಲೆಯ ರೈತರಿಗೆ ಇದೀಗ ಸತತ ಒಂದು ವಾರದಿಂದ ಸುರಿಯುತ್ತಿರುವ ಹುಬ್ಬಿ ಮಳೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ನೆರೆಗೆ ಸಿಲುಕಿ ಗುಬ್ಬಿಯಂತಾದ ರೈತರ ಮೇಲೆ ಈ ಮಳೆ ಬ್ರಹ್ಮಾಸ್ತ್ರದಂತೆ ಅಪ್ಪಳಿಸುತ್ತಿದೆ.

ಜಿಲ್ಲೆಯ ಅನ್ನದಾತರ ಮೇಲೆ ಮಳೆರಾಯನ ಮುನಿಸು ಇನ್ನೂ ಹೋಗಿಲ್ಲ. ನೆರೆ ಹಾವಳಿ, ವಿಪರೀತ ಮಳೆಯ ಮಧ್ಯೆಯೂ ಕನಿಷ್ಠ ಹೊಲದಲ್ಲಿ ಬಿತ್ತನೆಯಾದಷ್ಟಾದರೂ ಕಾಳು ಮನೆಗೆ ಒಯ್ಯಬೇಕು ಎನ್ನುವ ರೈತರ ಆಸೆಗೆ ಹುಬ್ಬಿ ಮಳೆ ಮತ್ತೆ ತಣ್ಣೀರು ಎರಚಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಬಿತ್ತನೆಯಾಗಿರುವ ಸೋಯಾ ಅವರೆ, ಹೆಸರು, ಗೋವಿನಜೋಳ ಮತ್ತು ಕಬ್ಬು ಬೆಳೆಗೆ ಇದೀಗ ವಿಪರೀತ ಮಳೆಯೇ ವಿಷವಾಗಿ ಪರಿಣಮಿಸಿದೆ. ಅಳಿದುಳಿದ ಬೆಳೆಯೂ ಮತ್ತೆ ನೀರ ಪಾಲಾಗುತ್ತಿದೆ.

ಅತೀ ಹೆಚ್ಚು ಪ್ರಮಾಣದಲ್ಲಿ ಬಿತ್ತನೆಯಾಗಿ ಕೇವಲ ನಾಲ್ಕು ತಿಂಗಳಲ್ಲಿ ಬೆಳೆದು ರೈತರಿಗೆ ಉತ್ತಮ ಆದಾಯ ಕೊಡುತ್ತಿದ್ದ ಮತ್ತು ಹಿಂಗಾರಿ ಬೆಳೆ ಬಿತ್ತನೆಗೂ ಉತ್ತಮ ಅವಕಾಶ ಕಲ್ಪಿಸುತ್ತಿದ್ದ ಸೋಯಾ ಅವರೆ, ಗೋವಿನಜೋಳ ಮತ್ತು ಹೆಸರು ಬೆಳೆ ಕಳೆದ ನಾಲ್ಕು ದಿನ ಸುರಿದ ಮಳೆಯಿಂದಾಗಿ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.

ಧಾರವಾಡ, ಕಲಘಟಗಿ ಮತ್ತು ಹುಬ್ಬಳ್ಳಿ ತಾಲೂಕಿನಲ್ಲಿ 38 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿರುವ ಸೋಯಾ ಅವರೆ ಇದೀಗ ಫಲ ಕಟ್ಟುವ ಸಮಯ. ಬಿತ್ತನೆಯಾದ 60 ದಿನದಿಂದ 90 ದಿನಗಳ ವರೆಗೆ ಉತ್ತಮ ಬಿಸಿಲು, ಸಮಶೀತೋಷ್ಣ ಹವಾಗುಣಕ್ಕೆ ಚೆನ್ನಾಗಿ ಬೆಳೆದು ಫಸಲು ಕೊಡುವ ಸೋಯಾಬೀನ್‌ಗೆ ಅತೀ ಮಳೆ ಮಾರಕವಾಗಿ ಪರಿಣಮಿಸಿದೆ. ಬಿಟ್ಟ ಬೀಜಗಳು ಅಲ್ಲಿಯೇ ಕೊಳೆಯುತ್ತಿವೆ. ಹತ್ತು ಬೀಜದ ತೆನೆಗಳ ಪೈಕಿ ನಾಲ್ಕರಲ್ಲಿ ಮಾತ್ರ ಗಟ್ಟಿ ಕಾಳು ಉಳಿದುಕೊಂಡಿದ್ದು, ಇನ್ನುಳಿದ ಶೇ.60 ಬೀಜಗಳು ಕೊಳೆತು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಜಾನುವಾರುಗಳಿಗೆ ಉತ್ತಮ ಹೊಟ್ಟುಮೇವು ಒದಗಿಸುತ್ತಿದ್ದ ಸೋಯಾ ಬೆಳೆಯ ತಪ್ಪಲು ಕೊಳೆತು ಹೊಟ್ಟು ಮೇವು ಕೂಡ ರೈತರಿಗೆ ಲಭ್ಯವಾಗುವುದು ಕಷ್ಟವಾಗಿದೆ.

ಗೋವಿನಜೋಳ ತೆನೆ ಹೀಚು: ಆಗಸ್ಟ್‌ ಆರಂಭದಲ್ಲಿ ಸುರಿದ ತೀವ್ರ ಮಳೆಯಿಂದ ಕುಗ್ಗಿ ಹೋಗಿದ್ದ ಗೋವಿನಜೋಳದ ಬೆಳೆ ಮಳೆಯ ನಂತರ ಮತ್ತೆ ಚೇತರಿಸಿಕೊಂಡಿತ್ತು. ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ಒಟ್ಟು 36 ಸಾವಿರ ಹೆಕ್ಟೇರ್‌ ಗೋವಿನಜೋಳದ ಇಳುವರಿ ಮೇಲೆ ಮಳೆ ಸಾಕಷ್ಟು ದುಷ್ಪರಿಣಾಮ ಬೀರಿತ್ತು. ಅತೀ ಮಳೆಯ ಹೊಡೆತಕ್ಕೆ ಗೋವಿನಜೋಳದ ಬೆಳೆನಷ್ಟವಾಗಿತ್ತು. ಅಳಿದುಳಿದ ಬೆಳೆಯಲ್ಲಿ ಒಂದಡಿ ಬದಲು ಅರ್ಧ ಅಡಿ ತೆನೆಗಳು ಬಿಟ್ಟಿದ್ದವು. ಇದೀಗ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಆಗಿರುವ ಗೋವಿನಜೋಳವನ್ನು ರೈತರು ಒಕ್ಕುವುದು ಕಷ್ಟಸಾಧ್ಯವಾಗಿದೆ. ಮಳೆಯಲ್ಲಿಯೇ ಕೊಳೆಯುತ್ತಿರುವ ಗೋವಿನಜೋಳದ ತೆನೆಗಳು ರೈತರ ಕಣ್ಣೆದುರೇ ಕಮರಿ ಹೋಗುತ್ತಿವೆ. ಗುಡ್ಡ ಮತ್ತು ಹಳ್ಳದ ಪಕ್ಕದಲ್ಲಿರುವ ಗೋವಿನಜೋಳದ ಹೊಲಕ್ಕೆ ಮಿಕದ ಕಾಟ (ಕಾಡು ಹಂದಿ) ಕೂಡ ಶುರುವಾಗಿದ್ದು ಕೆಲವಷ್ಟು ರೈತರ ಎಕರೆಗಟ್ಟಲೇ ಭೂಮಿ ಕಾಡುಹಂದಿಯಿಂದ ನಾಶವಾಗಿ ಹೋಗಿದೆ. ಇನ್ನು ಸತತ ಮಳೆಯಿಂದ ಹೊಲದಲ್ಲಿ ನೀರು ನಿಲ್ಲುತ್ತಿರುವುದರಿಂದ ಕಬ್ಬಿನ ಬೆಳೆ ಇಳುವರಿ ಕೂಡ ಕುಸಿಯುತ್ತಿದೆ.

ಬಿತ್ತಿದಷ್ಟು ಹೆಸರು ಬರಲಿಲ್ಲ: ಜೂನ್‌ ತಿಂಗಳಿನ ಆರಂಭದಲ್ಲಿ ಮಳೆ ತಡವಾಗಿದ್ದರಿಂದ ಈ ವರ್ಷ ಧಾರವಾಡ, ಕುಂದಗೋಳ, ನವಲಗುಂದ ತಾಲೂಕಿನಲ್ಲಿ ಹೆಸರು ಬಿತ್ತನೆ ಅಷ್ಟಕ್ಕಷ್ಟೇ ಆಗಿತ್ತು. ಆದರೆ ಇದೀಗ ಕೆಲವು ಕಡೆಗಳಲ್ಲಿ ನೀರಾವರಿ ಮೂಲಕ ಬಿತ್ತನೆಯಾದ ಮತ್ತು ತಡವಾಗಿ ಬಿತ್ತನೆಯಾದ ಹೆಸರು ಕೂಡ ಕೊಯ್ಲಿಗೆ ಬಂದಿದ್ದು, ಹುಬ್ಬಿ ಮಳೆಯ ಹೊಡೆತಕ್ಕೆ ಆ ಬೆಳೆಯೂ ಸಂಕಷ್ಟಕ್ಕೆ ಸಿಲುಕಿದೆ.

1.89 ಲಕ್ಷ ಹೆಕ್ಟೇರ್‌ ಬೆಳೆಹಾನಿ:

ಆಗಸ್ಟ್‌ ಅಂತ್ಯ ದೊಳಗೆ ಜಿಲ್ಲೆಯಲ್ಲಿನ ಬೆಳೆಹಾನಿ ಸಮೀಕ್ಷೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಮಳೆಹಾನಿ ಎಂದರೆ ಮನೆ ಹಾನಿ ಎನ್ನುವ ಅರ್ಥದಲ್ಲಿ ಬಿದ್ದ ಮನೆಗಳಿಗೆ ಬರೀ ಹತ್ತು ಸಾವಿರ ಪರಿಹಾರ ನೀಡಿ ಸದ್ಯಕ್ಕೆ ಕೈ ತೊಳೆದುಕೊಳ್ಳಲಾಗಿದೆ. ಆದರೆ ನಿಜಕ್ಕೂ ರೈತರಿಗೆ ಹೆಚ್ಚು ಹಾನಿಯಾಗಿದ್ದು ಬೆಳೆಯಾನಿಯಿಂದಲೇ. ಇದನ್ನು ತುಂಬಿಕೊಡಲು ಸರ್ಕಾರದ ಮಟ್ಟದಲ್ಲಿ ಗಂಭೀರ ಪ್ರಯತ್ನಗಳು ಈ ವರೆಗೂ ಆಗಿಲ್ಲ. ಬೆಳೆಹಾನಿ ಪರಿಹಾರ ರೈತರ ಕೈಗೆ ಸಿಗುವುದು ಎಷ್ಟು ತಿಂಗಳ ನಂತರವೋ ಗೊತ್ತಿಲ್ಲ.

ಮಳೆಯ ಮುನಿಸು ರೈತರ ಮೇಲೆ ಇನ್ನೂ ಹೋಗಿಲ್ಲ. ಹೊಲದಲ್ಲಿ ಬಿತ್ತನೆ ಆದಷ್ಟಾದರೂ ಕಾಳು ಮನೆಗೆ ಒಯ್ಯಬೇಕು ಎನ್ನುವ ಆಸೆಗೆ ಹುಬ್ಬಿ ಮಳೆ ತಣ್ಣೀರು ಎರಚಿದೆ.

ಪರಿಹಾರ ಸಿಗೋದು ಯಾವಾಗ?:

ಬೆನಕನ ಹಬ್ಬದ ಆಶಾಭಾವ

ರೈತರು ಗಣೇಶ ಚತುರ್ಥಿ ನಂತರ ಮಳೆರಾಯ ಬಿಡುವು ಕೊಡುತ್ತಾನೆ ಎನ್ನುವ ಆಶಾಭಾವದಲ್ಲಿದ್ದಾರೆ. ಪ್ರತಿ ಮಳೆಗಾಲದಲ್ಲಿಯೂ ಗಣೇಶ ಚತುರ್ಥಿ ಮುಗಿದ ಮೇಲೆ ಬೆನಕನ ಬೆರಗು ಎನ್ನುವಂತೆ 15 ದಿನಗಳ ಕಾಲ ಮಳೆ ಕೊಂಚ ವಿರಾಮ ಕೊಡುತ್ತದೆ. ಈ ವರ್ಷ ಮಳೆ ವಿರಾಮ ಕೊಟ್ಟರೆ ಕನಿಷ್ಠ ಹೊಲದಲ್ಲಿ ನೀರಿನಲ್ಲಿ ನಿಂತ ಸೋಯಾ, ಗೋವಿನಜೋಳ, ಹೆಸರು ಬೆಳೆಯನ್ನಾದರೂ ತೆಗೆಯಲು ಅನುಕೂಲವಾಗುತ್ತದೆ.
ಜಿಲ್ಲೆಯಲ್ಲಿ ಎಲ್ಲೆಲ್ಲಿ ಬೆಳೆಹಾನಿಯಾಗಿದೆ ಎಂಬುದನ್ನು ಮೇಲ್ನೋಟಕ್ಕೆ ಅಂದಾಜು ಮಾಡಲಾಗಿದೆ. ಸದ್ಯಕ್ಕೆ ಮೊದಲ ಹಂತದಲ್ಲಿಯೇ 1.50 ಲಕ್ಷ ಹೆಕ್ಟೇರ್‌ನಲ್ಲಿ ಹಾನಿಯಾಗಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಎರಡನೇ ಹಂತದ ಹಾನಿಯನ್ನು ಶೀಘ್ರವೇ ಅಂದಾಜು ಮಾಡುತ್ತೇವೆ. • ಎಸ್‌.ಎಸ್‌. ಅಬೀದ್‌, ಜಂಟಿ ನಿರ್ದೇಶಕ, ಕೃಷಿ ಇಲಾಖೆ
•ಬಸವರಾಜ ಹೊಂಗಲ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ