ಮೇವು ದಾಸ್ತಾನಿಗೆ ನೀಡಿ ಮೊದಲ ಆದ್ಯತೆ

•ಪಶು ಇಲಾಖೆ ಅಧಿಕಾರಿಗೆ ಜಿಪಂ ಸದಸ್ಯರ ಸೂಚನೆ•ರೈತರಿಗೆ ಅಗತ್ಯ ಬೀಜ ಮಾಹಿತಿ ನೀಡಲು ತಾಕೀತು

Team Udayavani, Jul 12, 2019, 1:13 PM IST

ಕುಂದಗೋಳ: ಪಟ್ಟಣದ ತಾಪಂ ಸಭಾಭವನದಲ್ಲಿ ಹೆಸ್ಕಾಂ ಅಧಿಕಾರಿ ಟಿ.ಎಚ್. ಲಮಾಣಿ ವರದಿ ಮಂಡಿಸಿದರು.

ಕುಂದಗೋಳ: ಈಗತಾನೇ ಮಳೆ ಆರಂಭವಾಗಿದ್ದು, ಸುಮಾರು ಎರಡು ತಿಂಗಳು ಕಾಲ ಮೇವಿನ ಅವಶ್ಯಕತೆ ಇರಲಿದೆ. ರೈತರ ಜಾನುವಾರುಗಳಿಗೆ ಅಗತ್ಯ ಮೇವು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸದಸ್ಯ ಭರಮಪ್ಪ ಮುಗಳಿ ಪಶು ವೈದ್ಯಾಧಿಕಾರಿ ತಿರ್ಲಾಪುರ ಅವರಿಗೆ ಸೂಚನೆ ನೀಡಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಜರುಗಿದ ಕೆಡಿಪಿ ಸಭೆಯಲ್ಲಿ ತಿರ್ಲಾಪುರ ಅವರು ವರದಿ ಮಂಡಿಸುವಾಗ ಜಿಪಂ ಸದಸ್ಯ ಭರಮಪ್ಪ ಮುಗಳಿ ಮಧ್ಯ ಪ್ರವೇಶಿಸಿ ಮೇವು ಸಂಗ್ರಹ ಮಾಹಿತಿ ಕೇಳಿದರು. ರೈತರ ಬೇಡಿಕೆ ಮೇರೆಗೆ ಮೇವು ಸಂಗ್ರಹಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡಿದಾಗ ಸಿಡಿಮಿಡಿಗೊಂಡ ಸದಸ್ಯ ಮುಗಳಿ, ಮೇವು ಕೇಂದ್ರದಲ್ಲಿ ಸದಾ ಮೇವು ಇದ್ದರೆ ರೈತರು ತಮಗೆ ಬೇಕಾದಾಗ ಒಯ್ಯುತ್ತಾರೆ ಎಂದು ತಾಕೀತು ಮಾಡಿದರು.

ಬೀಜಗಳ ಮಾಹಿತಿ ನೀಡಿದ್ದೀರಾ?: ಕೃಷಿ ಸಹಾಯಕ ಪ್ರಭಾರಿ ಅಧಿಕಾರಿ ಎಸ್‌.ಎಫ್‌. ರಾಯನಗೌಡ್ರ ಮಾತನಾಡುತ್ತಿರುವ ಮಧ್ಯ ಜಿಪಂ ಸದಸ್ಯ ಉಮೇಶ ಹೆಬಸೂರ ಮಾತನಾಡಿ, ಬಿತ್ತನೆ ಹಂಗಾಮಿನ ಈ ವೇಳೆ ಬೀಜಗಳ ಕುರಿತು ಮಾಹಿತಿ ನೀಡಿದ್ದೀರಾ ಎಂದು ಪ್ರಶ್ನಿಸಿದರು. ಮಾಹಿತಿ ನೀಡಿದ್ದೇವೆ ಎಂದು ಅಧಿಕಾರಿ ಹಾರಿಕೆ ಉತ್ತರ ನೀಡಿದಾಗ, ಈಗ ಯಾವ ಬಿಟಿ ಬೀಜ ಊರಬೇಕು, ಅದಕ್ಕೆ ಯಾವ ಔಷಧಿ ಮತ್ತು ಗೊಬ್ಬರ ನೀಡಬೇಕು ಎಂಬುದರ ಬಗ್ಗೆ ತಿಳಿವಳಿಕೆ ನೀಡಿಲ್ಲ. ಕಳೆದ ವರ್ಷ ಗುಡಗೇರಿಯಲ್ಲಿ ಅನೇಕ ರೈತರು ಬಿಟಿ ಬೀಜ ಊರಿ ಕೈಸುಟ್ಟುಕೊಂಡಿದ್ದಾರೆ. ಕಂಪನಿಯವರು ತಮ್ಮ ಲಾಭಕ್ಕಾಗಿ ರೈತರಿಗೆ ಮೋಸಗೊಳಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಮಾಹಿತಿ ನೀಡಲೇಬೇಕು ಎಂದು ಎಚ್ಚರಿಕೆ ನೀಡಿದರು.

ಅರಣ್ಯ ಸಹಾಯಕ ಅಧಿಕಾರಿ ಬಸವರಾಜ ಬೆನಕಟ್ಟಿ ವರದಿ ಮಂಡಿಸುತ್ತಿರುವಾಗ ಭರಮಪ್ಪ ಮುಗಳಿ ಮಾತನಾಡಿ, ಒಂದು ಸಸಿ ಬೆಳೆಸಲು ಎಷ್ಟು ಖರ್ಚು ಆಗುತ್ತದೆ ಎಂದು ಪ್ರಶ್ನಿಸಿದರು. ಎನ್‌ಆರ್‌ಜಿಯಡಿ 300, ಸಾಗಾಣಿಕೆಗೆ 150, ನೀರು ಹಾಕಿ ಬೆಳೆಸಲು 50 ರೂ. ಸೇರಿ ಒಟ್ಟು 500 ರೂ. ಖರ್ಚಾಗುತ್ತದೆ ಎಂದು ಉತ್ತರಿಸಿದರು. ಮೂರು ವರ್ಷದಲ್ಲಿ ಎಷ್ಟು ಸಸಿ ಬೆಳೆಸಿದ್ದೀರಿ ಎಂದು ಪ್ರಶ್ನಿಸಿದಾಗ ಬೆನಕಟ್ಟಿ ಮಾತನಾಡಿ, ಹಿಂದಿನದು ನನಗೆ ಗೊತ್ತಿಲ್ಲ. ನನ್ನ ಅವಧಿಯಲ್ಲಿ ಸರಿಯಾಗಿ ಬೆಳೆಸುತ್ತೇನೆ ಎಂದರು.

ಸಿಡಿಪಿಒ ಅನುಪಮಾ ಅಂಗಡಿ ಮಾತನಾಡಿ, ತಾಲೂಕಿನ 212 ಅಂಗನವಾಡಿ ಕೇಂದ್ರಗಳಲ್ಲಿ 76 ಬಾಡಿಗೆ ಕಟ್ಟಡದಲ್ಲಿವೆ. ಇದರಿಂದ ಮೂಲಸೌಲಭ್ಯ ಒದಗಿಸಲು ತೊಂದರೆಯಾಗುತ್ತಿದ್ದು, ನಿವೇಶನ ನೀಡಬೇಕು ಎಂದು ಮನವಿ ಮಾಡಿದರು.

ಭೂಸೇನಾ ನಿಗಮದ ಸಹಾಯಕ ಅಧಿಕಾರಿ ವರದಿ ಮಂಡಿಸುವಾಗ ಉಮೇಶ ಹೆಬಸೂರ ಮಾತನಾಡಿ, ಪೌರಾಡಳಿತ ಸಚಿವರಾಗಿದ್ದ ಶಿವಳ್ಳಿ ಅವರು ಚಾಲನೆ ನೀಡಿದ ಕಾಮಗಾರಿಗಳಿಗೆ ಯಾಕೆ ಅಡೆತಡೆಯಾಗುತ್ತಿದೆ ಎಂದಾಗ ತ್ವರಿತವಾಗಿ ಮುಗಿಸುತ್ತೇನೆ ಎಂದು ಹಾರಿಕೆ ಉತ್ತರ ನೀಡಿದರು. ಶಾಸಕಿ ಕುಸುಮಾವತಿ ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಉಮೇಶ ಹೆಬಸೂರ, ಎನ್‌.ಎನ್‌. ಪಾಟೀಲ, ಭರಮಪ್ಪ ಮುಗಳಿ, ಇಒ ಎಂ.ಎಸ್‌. ಮೇಟಿ ಮೊದಲಾದವರು ಸಭೆಯಲ್ಲಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

  • ಕುಂದಗೋಳ: ವೇತನ ಪಾವತಿ ವಿಳಂಬ ಖಂಡಿಸಿ ತಾಲೂಕಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ದರ್ಜೆ ಗುತ್ತಿಗೆದಾರರು ಗುರುವಾರ ತಮ್ಮ ಸೇವೆ ಸ್ಥಗಿತಗೊಳಿಸಿ...

  • ಅಳ್ನಾವರ: ಮಕ್ಕಳು ದೇಶದ ಆಸ್ತಿ ಇದ್ದಂಗೆ. ದೇಶದ ಭವಿಷ್ಯ ನಿರ್ಮಿಸುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅಂತಹ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ನಮ್ಮೆಲ್ಲರ...

  • ಹುಬ್ಬಳ್ಳಿ: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಂದಾಗುತ್ತಿದ್ದಂತೆ ಆಂತರಿಕ ಭದ್ರತಾ ಪಡೆ (ಐಎಸ್‌ಡಿ) ಹಾಗೂ ಪೊಲೀಸ್‌ ಇಲಾಖೆಯಿಂದ ಹು-ಧಾ ಅವಳಿ ನಗರ...

  • ಕಲಘಟಗಿ: ಈಚೆಗೆ ಪಟ್ಟಣದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ತಾಲೂಕಿನ ಸುಮಾರು 800 ಜನ ನಿರುದ್ಯೋಗಿ ವಿದ್ಯಾವಂತರು ಉದ್ಯೋಗಕ್ಕೆ ಭಾಜನ ರಾಗಿದ್ದಾರೆ. ಅದೇ ರೀತಿ ತಾಲೂಕಿನ...

  • ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಕಿಶನ್‌ಗಡ ಹಾಗೂ ಶಿರಡಿಗೆ ವಿಮಾನಯಾನ ಸೇವೆ ಆರಂಭಿಸಬೇಕೆಂದು ಕೋರಿ ಆಲ್‌ ಇಂಡಿಯಾ ಜೈನ್‌ ಯುತ್‌ ಫೆಡರೇಶನ್‌ ವತಿಯಿಂದ ಸಂಸದೀಯ...

ಹೊಸ ಸೇರ್ಪಡೆ