ದನಕರ ಸ್ಥಿತಿ ನೆನಸಿದ್ರ ಜೀವ ಚುರ್ರ್ ಅಂತೇತಿ

Team Udayavani, Aug 14, 2019, 9:38 AM IST

ಹುಬ್ಬಳ್ಳಿ: ‘ನಮಗ ಗಂಜಿಕೇಂದ್ರದಾಗ 2 ಹೊತ್ತು ಊಟ ಸಿಗಾಕತ್ತೇತಿ, ಆದರ ಆಶ್ರಯ ಇಲ್ಲದ ಭೂಮ್ಯಾಗ ನಿಂತ ದನಕರಗಳದ ನಮಗ ಚಿಂತಿ ಆಗೇತಿ. ನಮ್ಮ ಬಗ್ಗೆ ಹೇಳಿದ್ದು ಸಾಕು, ದನಕರಗಳ ಬಗ್ಗೆ ಕಾಳಜಿ ಮಾಡ್ರಿ, ಅವುಗಳ ಸ್ಥಿತಿನೂ ನೋಡ್ರಿಪಾ’ ಎಂದು 80ರ ಹರೆಯದ ಸಿದ್ದಪ್ಪಜ್ಜ ಹೇಳುತ್ತಿದ್ದಂತೆಯೇ ಪುನರ್ವಸತಿ ಕೇಂದ್ರದಲ್ಲಿ ತಮ್ಮ ಸಮಸ್ಯೆಗಳನ್ನಷ್ಟೇ ಹೇಳುತ್ತಿದ್ದವರು ಒಂದು ಕ್ಷಣ ಸುಮ್ಮನಾದರು.

ಒಬ್ಬೊಬ್ಬರೇ ದನಕರುಗಳ ಸ್ಥಿತಿ-ಗತಿ ಬಗ್ಗೆ ಹೇಳತೊಡಗಿದರು. ದನಕರುಗಳಿಗೆ ಮೇವು, ಹೊಟ್ಟು ಬೇಕೆಂದರು, ಎಲ್ಲಕ್ಕಿಂತ ಮೊದಲು ಅವುಗಳಿಗೆ ಸೂರು ಬೇಕಿದೆ ಎಂದರು. ಅಜ್ಜಿಯೊಬ್ಬರು, ‘ಯಪ್ಪಾ, ದನಗಳ ಸ್ಥಿತಿ ನೆನಿಸಿಕೊಂಡರ ಅರ್ಧ ರೊಟ್ಟಿನೂ ಬಾಯಾಗ ಇಳಿಯಂಗಿಲ್ಲ’ ಎಂದಿದ್ದು ಬೆಣ್ಣೆಹಳ್ಳ-ತುಪ್ಪರಿ ಹಳ್ಳಗಳ ಪ್ರವಾಹದಿಂದ ರಾಸುಗಳ ಮೇಲಾದ ಕೆಟ್ಟ ಪರಿಣಾಮವನ್ನು ಬಿಂಬಿಸುತ್ತಿತ್ತು.

ನವಲಗುಂದ ತಾಲೂಕಿನಲ್ಲಿ ಬೆಣ್ಣೆ ಹಳ್ಳ ಹಾಗೂ ತುಪರಿ ಹಳ್ಳದ ಪ್ರವಾಹ ಮಾಡಿದ ಅನಾಹುತ ಘೋರ. ಒಂದೆಡೆ ಕೈಗೆ ಬರಬೇಕಾದ ಬೆಳೆ ಮಕಾಡೆ ಮಲಗಿಕೊಂಡರೆ, ಇನ್ನೊಂದೆಡೆ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಹಲವೆಡೆ ದನಕರುಗಳನ್ನು ಕಟ್ಟುವ ಕೊಟ್ಟಿಗೆಗಳು ಕೊಚ್ಚಿಕೊಂಡು ಹೋಗಿವೆ.

ಹಳ್ಳದ ಸಮೀಪದಲ್ಲಿ ವಾಸವಾಗಿದ್ದ ಜನರು ಹೆಚ್ಚು ನಷ್ಟ ಅನುಭವಿಸಿದ್ದಾರೆ. ಸಂಗ್ರಹಿಸಿಟ್ಟ ಮೇವು ಹಾಗೂ ಹೊಟ್ಟು ಮಳೆಗೆ ನೆನೆದು ಹೋಗಿದ್ದರಿಂದ ದನಕರುಗಳ ಮೇವಿನದೇ ದೊಡ್ಡ ಚಿಂತೆಯಾಗಿದೆ. ಕೆಲವರು ತಮ್ಮ ಸಂಬಂಧಿಕರ ಮನೆಯ ಆವರಣದಲ್ಲಿ ದನಗಳನ್ನು ಕಟ್ಟಿದ್ದರೆ, ಇನ್ನು ಕೆಲವರು ಗ್ರಾಪಂ ಕಾರ್ಯಾಲಯದಲ್ಲಿ ದನಗಳನ್ನು ಕಟ್ಟಿದ್ದಾರೆ. ಇನ್ನು ಕೆಲವರು ತಮ್ಮ ಮನೆಗಳ ಮುಂದೆ ದನಗಳನ್ನು ಕಟ್ಟಿಕೊಂಡು ಇತರರಿಂದ ಮೇವು ಪಡೆದುಕೊಂಡು ಗೋಸಂಪತ್ತನ್ನು ಕಾಪಾಡಿಕೊಳ್ಳುತ್ತಿದ್ದಾರೆ.

ಹಳ್ಳದ ದಡದಲ್ಲಿನ ಭೂಮಿಯಲ್ಲಿ ವಾಸವಾಗಿದ್ದವರ ದನಗಳು 2 ದಿನ ಕೆಸರಿನಲ್ಲೇ ಇರುವಂತಾಗಿತ್ತು. ಇದರಿಂದ ಕೆಲವು ರಾಸುಗಳು ಅನಾರೋಗ್ಯಕ್ಕೆ ಈಡಾಗಿವೆ. ದನಗಳು ಕ್ರಿಯಾಶೀಲವಾಗಿಲ್ಲ. ಸಮರ್ಪಕವಾಗಿ ಮೇವು ತಿನ್ನುತ್ತಿಲ್ಲ. ಸದಾ ಲವಲವಿಕೆಯಿಂದ ಓಡಾಡಬೇಕಾಗಿದ್ದ ಕರುಗಳು ಚಳಿಗೆ ನಲುಗಿ ಮುದ್ದೆಯಾಗಿ ಕೂತಿವೆ ಎಂಬುದು ಹಲವು ರೈತರ ಅಳಲಾಗಿದೆ.

ವಿಶೇಷ ಅಭಿಯಾನ: ದನಕರುಗಳ ಸ್ಥಿತಿಯನ್ನು ಮನಗಂಡ ತಾಲೂಕಾ ಪಶುಸಂಗೋಪನಾ ಇಲಾಖೆ ಕಚೇರಿ ದನಕರುಗಳ ಆರೋಗ್ಯ ತಪಾಸಣೆಗಾಗಿ ವಿಶೇಷ ಅಭಿಯಾನ ಮಾಡಲು ನಿರ್ಧರಿಸಿದೆ. ಗ್ರಾಮಗಳಲ್ಲಿ ಡಂಗುರ ಹೊಡಿಸಿ ಪಶುಗಳ ಆರೋಗ್ಯ ತಪಾಸಣೆ ಮಾಡಲು ತೀರ್ಮಾನಿಸಿದೆ. ತಾಲೂಕಿನ ಎಲ್ಲ ಪಶು ಆಸ್ಪತ್ರೆಗಳಲ್ಲಿ ಔಷಧ, ಲಸಿಕೆ ಕೊರತೆಯಾಗದಂತೆ ಕ್ರಮ ಕೈಗೊಂಡಿದೆ.

ಬರದಿಂದಾಗಿ ಮೇ ತಿಂಗಳವರೆಗೆ ಮೇವು ಬ್ಯಾಂಕ್‌ ನಿರ್ವಹಿಸಲಾಯಿತು. ಆದರೆ ಮೇವಿನ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಮೇವು ಬ್ಯಾಂಕ್‌ಗಳನ್ನು ಬಂದ್‌ ಮಾಡಲಾಯಿತು. ಇದೀಗ ಮತ್ತೆ ಮೇವಿನ ಬೇಡಿಕೆಯನ್ನು ಪರಿಗಣಿಸಿ ಅವಶ್ಯಕವೆನಿಸಿದರೆ ಮೇವು ಬ್ಯಾಂಕ್‌ ಆರಂಭಿಸಲು ತಾಲೂಕು ಆಡಳಿತ ಸಿದ್ಧವಾಗಬೇಕಿದೆ. ಕೇವಲ ಜನರಿಗೆ ಪುನರ್ವಸತಿ ಕಲ್ಪಿಸುವುದಕ್ಕೆ ಆದ್ಯತೆ ನೀಡದೇ ದನಕರುಗಳಿಗೂ ಪುನರ್ವಸತಿ ವ್ಯವಸ್ಥೆ ಮಾಡಬೇಕು.

ವಿವಿಧ ಸಂಘ-ಸಂಸ್ಥೆಗಳು ಪುನರ್ವಸತಿ ಕೇಂದ್ರದಲ್ಲಿ ಆಹಾರ ಸಾಮಗ್ರಿಗಳನ್ನು ನೀಡುತ್ತಿವೆ. ಇದರೊಂದಿಗೆ ಹಸು-ಎಮ್ಮೆಗಳಿಗೆ ಮೇವು-ಹೊಟ್ಟು ಕೂಡ ನೀಡುವುದು ಅವಶ್ಯಕವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ದಾನಿಗಳಿಂದ ಹೊಟ್ಟು ದೊರೆಯದಿರುವುದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.

ಔಷಧ ಕೊರತೆಆಗದಂತೆ ವ್ಯವಸ್ಥೆ: ದನಕರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಅವು ಶೀತ ಸ್ಥಿತಿ ತಡೆದುಕೊಳ್ಳುತ್ತವೆ. ಆದರೆ ಈ ಬಾರಿ ಪ್ರವಾಹದಿಂದ ಹಲವು ದನಗಳ ಆರೋಗ್ಯ ಸಮಸ್ಯೆಯಾಗಿದೆ. ನೀರು ಹಾಗೂ ಕೆಸರಿನಲ್ಲಿ ಬಹಳ ಕಾಲ ಇರುವುದರಿಂದ ಅವುಗಳ ದೇಹದ ಉಷ್ಣತೆ ಕ್ಷೀಣಿಸುತ್ತದೆ. ಅವುಗಳಿಗೆ ಆ್ಯಂಟಿಬಯೋಟಿಕ್‌ ನೀಡಲಾಗುತ್ತದೆ. ಸ್ಥಿತಿ ಇನ್ನೂ ಕೆಟ್ಟದಾಗಿದ್ದರೆ ಅವುಗಳಿಗೆ ಸಲಾಯನ್‌ ಮೂಲಕ ಕ್ಯಾಲ್ಸಿಯಂ ನೀಡಬೇಕಾಗುತ್ತದೆ. ಡಿಎನ್‌ಎಸ್‌ ಕೂಡ ನೀಡಿ ಅವುಗಳಿಗೆ ತ್ರಾಣ ಬರುವಂತೆ ಮಾಡಲಾಗುವುದು. ತಾಲೂಕಿನಲ್ಲಿ 17 ಗ್ರಾಮಗಳಲ್ಲಿ ಪಶು ಆಸ್ಪತ್ರೆಗಳಿವೆ. ಎಲ್ಲ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸಿಬ್ಬಂದಿ ಸದಾ ಕ್ರಿಯಾಶೀಲರಾಗಿದ್ದು, ದನಗಳ ಆರೋಗ್ಯ ತಪಾಸಣೆಗೆ ಆದ್ಯತೆ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಈವರೆಗೆ ಪ್ರವಾಹದಿಂದಾಗಿ ತಾಲೂಕಿನಲ್ಲಿ 86 ಕುರಿಗಳು ಹಾಗೂ 4 ರಾಸುಗಳು ಜೀವ ಕಳೆದುಕೊಂಡಿವೆ ಎಂದು ನವಲಗುಂದ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಕೆ.ಎಚ್. ಖ್ಯಾಡದ ಮಾಹಿತಿ ನೀಡಿದರು.

 

.ವಿಶ್ವನಾಥ ಕೋಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ