ಅಭಿವೃದ್ಧಿಗೆ ಚಿಕ್ಕನಗೌಡ್ರ ಗೆಲ್ಲಿಸಿ: ಶೆಟ್ಟರ

Team Udayavani, May 9, 2019, 11:23 AM IST

ಹುಬ್ಬಳ್ಳಿ: ರೈತರಿಗೆ ಪಿಂಚಣಿ ನೀಡುವುದು, ಬೆಂಬಲ ಬೆಲೆ ಸೇರಿದಂತೆ ರೈತರ ಪರವಾದ ಹಾಗೂ ಬಡವರ ಪರವಾದ ಉತ್ತಮ ಆಡಳಿತವನ್ನು ನೀಡಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ ಪರ ರಾಮನಕೊಪ್ಪದಲ್ಲಿ ಮತಯಾಚಿಸಿ ಅವರು ಮಾತನಾಡಿದರು. ರೈತರ ಶ್ರೇಯೋಭಿವೃದ್ಧಿಗೆ ಮುಂದಾಗಿರುವ ಪ್ರಧಾನಮಂತ್ರಿ ವಯೋವೃದ್ಧ ರೈತರಿಗೆ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ನೀಡುವ ಯೋಜನೆ ರೂಪಿಸಿದ್ದಾರೆ ಎಂದರು.

ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿ ಆದರೆ ರಾಜ್ಯಕ್ಕೆ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕು. ಈ ಹಿಂದೆ ಅವರು ಮುಖ್ಯಮಂತ್ರಿಗಳಾಗಿದ್ದಾಗ, ಎಸ್‌.ಐ. ಚಿಕ್ಕನಗೌಡರ ಶಾಸಕರಾಗಿದ್ದರು. ಕ್ಷೇತ್ರದ ಉದ್ದಗಲಕ್ಕೂ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕಳೆದ ಬಾರಿ ಕೆಲವೇ ಮತಗಳಿಂದ ಸೋಲು ಕಂಡಿರುವ ಚಿಕ್ಕನಗೌಡರ ಅವರಿಗೆ ಈ ಬಾರಿ ಅತೀ ಹೆಚ್ಚು ಮತ ನೀಡುವ ಮೂಲಕ ಜಯಿಸಿ ತರುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಕಳೆದ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಸರಕಾರ ಕುಂದಗೋಳ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು ಎಂಬುದನ್ನು ತಿಳಿಸಲಿ ಎಂದು ಶೆಟ್ಟರ ಹೇಳಿದರು. ಬಿಜೆಪಿ ಮುಖಂಡರಾದ ಈರಣ್ಣ ಜಡಿ, ಬಾಳಣ್ಣವರ ಇನ್ನಿತರರಿದ್ದರು.

ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಅನ್ಯಾಯ: ಭಾರತಿ ರೆಡ್ಡಿ ಆರೋಪ

ಕುಂದಗೋಳ: ಬೆರಳೆಣಿಕೆ ರೈತರ ಸಾಲಮನ್ನಾ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರ ರೈತರಿಗೆ ಅನ್ಯಾಯವೆಸಗಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಘಟಕಾಧ್ಯಕ್ಷೆ ಭಾರತಿ ರೆಡ್ಡಿ ಆರೋಪಿಸಿದರು. ಗುಡಗೇರಿಯ ಬೀರೇಶ್ವರ ಗುಡಿ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡದ ರಾಜ್ಯ ಸರ್ಕಾರ ರೈತರ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡುತ್ತಿದೆ. ಹಂತ-ಹಂತವಾಗಿ ಸಾಲಮನ್ನಾ ಮಾಡಲು ಇದೇನು ಪಂಚವಾರ್ಷಿಕ ಸಾಲಮನ್ನಾ ಯೋಜನೆಯೇ? ಎಂದು ತರಾಟೆಗೆ ತೆಗೆದುಕೊಂಡರು. ಮೋದಿ ಸರ್ಕಾರದಿಂದ 25 ಸಾವಿರ ರೂ. ಬೆಳೆವಿಮೆ ಬಂದರೂ ಅದನ್ನು ಸರಿಯಾಗಿ ರೈತರಿಗೆ ವಿನಿಯೋಗ ಮಾಡದ ಸರ್ಕಾರ ರೈತರಿಗೇನು ಸಹಾಯ ನೀಡುತ್ತದೆ ಎಂದು ಪ್ರಶ್ನಿಸಿದರು. ದೇಶದ ಪ್ರತಿ ರೈತರಿಗೆ ಕೇಂದ್ರದಿಂದ ವರ್ಷಕ್ಕೆ 6 ಸಾವಿರ ರೂ. ಆರ್ಥಿಕ ಸಹಾಯಧನ ನೀಡುತ್ತಿದ್ದು, ಬಡಕುಟುಂಬದ ಸದಸ್ಯರಿಗೊಬ್ಬರಂತೆ 5 ಲಕ್ಷ ರೂ.ವರೆಗೆ ಆಯುಷ್ಮಾನ್‌ ಕಾರ್ಡ್‌ ನೀಡಿದೆ. ಇದರಿಂದ ಲಕ್ಷಾಂತರ ಬಡಜನತೆಗೆ ಅನುಕೂಲವಾಗಲಿದೆ. ಇಂಥಹ ನೂರಾರು ಯೋಜನೆಗಳನ್ನು ಕೇಂದ್ರ ಹೊರತಂದಿದ್ದು, ಇದನ್ನು ಯಾರೂ ಮರೆಯುವಂತಿಲ್ಲ ಎಂದರು. ಗ್ರಾಪಂ ಸದಸ್ಯ ವಾಗೇಶ ಶಿಂಗಣ್ಣವರ, ಮುಖಂಡ ಬಸವರಾಜ ಬೆಂಗೇರಿ, ರಮೇಶ ಕತ್ತಿ, ನಿಂಗಪ್ಪ ಬೆಂತೂರ, ಹನುಮಂತ ಜಾಡರ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ, ಸೀಮಾ ಮಸೂತಿ, ಮಲ್ಲಿಕಾರ್ಜುನ ಕಿರೇಸೂರ, ರುದ್ರಪ್ಪ ಗಾಣಿಗೇರ ಇನ್ನಿತರರಿದ್ದರು.
ಪರೀಕ್ಷೆ ಮುಂದೂಡಲು ಒಪ್ಪಿಗೆ
ಧಾರವಾಡ: ಕುಂದಗೋಳ ವಿಧಾನಸಭಾ ಉಪಚುನಾವಣೆ ಮೇ 19ರಂದು ನಡೆಯಲಿದ್ದು, ಕುಂದಗೋಳ ತಾಲೂಕಿನ ವಿದ್ಯಾರ್ಥಿಗಳ ಬಿಎ 2ನೇ ಹಾಗೂ 6ನೇ ಸೆಮಿಸ್ಟರ್‌ ಮತ್ತು ಬಿಕಾಂ 4ನೇ ಹಾಗೂ 6ನೇ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಮುಂದೂಡಲು ಕವಿವಿ ಕುಲಪತಿಗಳು ಹಾಗೂ ಕುಲಸಚಿವರು (ಮೌಲ್ಯಮಾಪನ) ಒಪ್ಪಿಗೆ ಸೂಚಿಸಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕವಿವಿ ಅಧೀನದಲ್ಲಿ ಕುಂದಗೋಳ ತಾಲೂಕಿನಲ್ಲಿ ಸುಮಾರು 11 ಕಾಲೇಜುಗಳಿದ್ದು, ಒಟ್ಟು 7 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲಿದ್ದಾರೆ. ಈ ಮತಕ್ಷೇತ್ರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಯುವ ಮತದಾರರಿದ್ದು, ಅವರೆಲ್ಲರೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಒತ್ತಾಯಕ್ಕೆ ಸ್ಪಂದನೆ ನೀಡಿ ಕವಿವಿ ಈ ನಿರ್ಧಾರ ಕೈಗೊಳ್ಳಲಿದೆ ಎಂದರು. ಪರೀಕ್ಷೆಗಳನ್ನು ಮುಂದೂಡಿ ಮುಂದಿನ ದಿನಾಂಕವನ್ನು ಎರಡು-ಮೂರು ದಿನಗಳಲ್ಲಿ ಪ್ರಕಟಿಸುವುದಾಗಿ ಕವಿವಿ ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದು, ಮತದಾನದ ಹಕ್ಕು ಹೊಂದಿದ ವಿದ್ಯಾರ್ಥಿಗಳು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಸಂಕನೂರ ತಿಳಿಸಿದ್ದಾರೆ.
ಇಂದಿನಿಂದ ಸ್ವೀಪ್‌ ಚಟುವಟಿಕೆ
ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸ್ವೀಪ್‌ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ 9ರಿಂದ 17ರ ವರೆಗೆ ತಾಲೂಕಿನ ವಿವಿಧೆಡೆ ವಿನೂತನ ಕಾರ್ಯಕ್ರಗಳ ಮೂಲಕ ಜಾಗೃತಿ ಮೂಡಿಸಲಾಗುವುದು. 9ರಂದು ಬೆಳಗ್ಗೆ 10 ಗಂಟೆಗೆ ಕುಂದಗೋಳ ಪಟ್ಟಣದ ಸವಾಯಿ ಗಂಧರ್ವ ಹಾಲ್, ಸಂಜೆ 6 ಗಂಟೆಗೆ ಕಳಸ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಲಿದೆ. 11ರಂದು ತಾಲೂಕಿನಾದ್ಯಂತ ಸಹಿ ಅಭಿಯಾನ ಮತ್ತು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 12ರಂದು ಬೆಳಗ್ಗೆ 10 ಗಂಟೆಗೆ ಕುಂದಗೋಳ ಬಸ್‌ ನಿಲ್ದಾಣದಲ್ಲಿ ರಂಗೋಲಿ ಮೂಲಕ ಮತದಾನ ಜಾಗೃತಿ, 14ರಂದು ಯಲಿವಾಳ ಗ್ರಾಮದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 15ರಂದು ಬೈಕ್‌ ರ್ಯಾಲಿ ಆಯೋಜಿಸಲಾಗಿದೆ. ಕಲಾ ತಂಡಗಳು ವಿವಿಧ ಗ್ರಾಮಗಳಿಗೆ ತೆರಳಿ ಮತದಾನ ಜಾಗೃತಿ ಕಾರ್ಯ ಕೈಗೊಳ್ಳಲಿವೆ ಎಂದು ಸ್ವೀಪ್‌ ಸದಸ್ಯ ಜಿ.ಎನ್‌. ಮಠಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್‌ ಸುಳ್ಳು ಆರೋಪಕ್ಕೆ ಕಿವಿಗೊಡಬೇಡಿ: ಜೋಶಿ

ಕುಂದಗೋಳ: ಕಾಂಗ್ರೆಸ್‌ ಪಕ್ಷದ ನಾಯಕರ ಸುಳ್ಳು ಭರವಸೆ, ಆರೋಪಗಳನ್ನು ನಂಬದೆ ಬಿಜೆಪಿಗೆ ಮತ ನೀಡಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಮತದಾರರಲ್ಲಿ ಮನವಿ ಮಾಡಿದರು.

ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರ ಬುಧವಾರ ಮತ ಯಾಚಿಸಿ ಮಾತನಾಡಿದ ಅವರು, ಈ ಉಪಚುನಾವಣೆ ರಾಜ್ಯದ ಸ್ಥಿತಿಗತ್ಯಂತರವನ್ನೇ ಬದಲಿಸಲಿದ್ದು, ನಮ್ಮ ಪಕ್ಷಕ್ಕೆ ಬಲ ತರಲಿದೆ. ಚಿಕ್ಕನಗೌಡ್ರ ಶಾಸಕರಾಗುತ್ತಾರೆ, ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು. ಶಾಸಕ ಪ್ರೀತಂ ಗೌಡ, ಮುಖಂಡ ಎಂ.ಆರ್‌. ಪಾಟೀಲ, ಮಲ್ಲಿಕಾರ್ಜುನ ಕಿರೇಸೂರ, ಗಂಗಾಧರ ಗುಡೆಮ್ಮನವರ, ಹನುಮಂತ ಮೇಲಿಮನಿ, ರುದ್ರಪ್ಪ ಗಾಣಿಗೇರ ವಿಠuಲ ಚೌಹ್ವಾಣ, ಸುನಿತಾ ಪಾಟೀಲ, ಯಲ್ಲಪ್ಪ ಗಾಡಿ ಮತ್ತಿತರರಿದ್ದರು.

ನಮ್ಮ ಜನಬಲದೆದುರು ಕೈ ಹಣ ಬಲ ನಡೆಯದು: ಬೊಮ್ಮಾಯಿ
ಕುಂದಗೋಳ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಪ್ರಭಾವಿತರು ಕುಳಿತುಕೊಂಡು ಬಿಜೆಪಿಯವರನ್ನು ದುಡ್ಡಿನಿಂದ ಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಹಣಕ್ಕೆ ಮಾರಿಕೊಳ್ಳದೆ ಸ್ವಾಭಿಮಾನಿಯಾಗಿದ್ದಾರೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಬೆನಕನಹಳ್ಳಿಯಲ್ಲಿ ಬುಧವಾರ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಈ ಚುನಾವಣೆ ದುಡ್ಡಿನಿಂದ ಗೆಲ್ಲಬಹುದೆಂದು ಕಾಂಗ್ರೆಸ್‌ ಮುಖಂಡರು ಅಂದುಕೊಂಡಿದ್ದರೆ ಅದು ಅವರ ಮೂರ್ಖತನವಾಗಿದೆ. ನಮ್ಮ ಜನ ಬಲದ ಮುಂದೆ ಹಣದ ಬಲ ಎಂದೂ ನಡೆಯದು. ಇಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಅವರು 30 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಕಾಶಗೌಡ ಪಾಟೀಲ, ಗುರುಸಿದ್ದಗೌಡ ಮೇಲ್ಮಾಳ್ಗಿ, ಗದಿಗೆಪ್ಪ ರಾಯನಾಳ, ಕಂಠೆಪ್ಪಗೌಡ ಕಂಠೆಪ್ಪಗೌಡ್ರ, ಶರೀಫ ತಳವಾರ, ನಿಂಬಣ್ಣ ಶಿವಕ್ಕನವರ, ಲಕ್ಷ್ಮಣ ತಳವಾರ, ವಿರೂಪಾಕ್ಷಪ್ಪ ಕಾಳ್ಗಿ ಶಟ್ಟರ ಇದ್ದರು.

ಬಿಎಸ್‌ವೈ ಸಿಎಂ ಆಗೋದು ಖಚಿತ: ಶ್ರೀರಾಮುಲು

ಕುಂದಗೋಳ: ರಾಜ್ಯ ರಾಜಕೀಯದಲ್ಲಿ ಮೇ 23ರ ನಂತರ ಮಹತ್ವದ ಬೆಳವಣಿಗೆ ತರಲಿರುವ ಕುಂದಗೋಳ ಮತಕ್ಷೇತ್ರದ ಮತದಾರರು ಬಿಜೆಪಿ ಪರ ಮñ ‌ನೀಡಲಿದ್ದು, ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.

ಬೆಟದೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರ ಮತ ಯಾಚಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಈ ಕ್ಷೇತ್ರ ಸೇರಿದಂತೆ ರಾಜ್ಯದ ಹಲವಾರು ಕಡೆ ಸಾಕಷ್ಟು ಅನುದಾನ ನೀಡಿದ್ದರು. ಇಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೆಲ ಜಿಲ್ಲೆಗಳಿಗೆ ಮಾತ್ರ ಭರ್ಜರಿ ಅನುದಾನ ನೀಡಿದ್ದು, ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಈ ಚುನಾವಣೆಯಲ್ಲಿ ಇಲ್ಲಿನ ಜನತೆ ಅವರಿಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ. ಕ್ಷೇತ್ರದಲ್ಲಿ ರಾಜ್ಯ ಸರ್ಕಾರವೇ ಬಂದು ಠಿಕಾಣಿ ಹೂಡಿದರೂ ಯಾವುದೇ ಬದಲಾವಣೆ ತರಲು ಸಾಧ್ಯವಾಗದೆ ಕಾಂಗ್ರೆಸ್‌ ವಿಲಿವಿಲಿ ಒದ್ದಾಡುವಂತಾಗಲಿದ್ದು, ಬಿಜೆಪಿ ಪ್ರಭುತ್ವ ಸಾಧಿಸಲಿದೆ ಎಂದು ಭವಿಷ್ಯ ನುಡಿದರು.

ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ, ಮುಖಂಡ ಎಂ.ಆರ್‌. ಪಾಟೀಲ, ಜಿಲ್ಲಾಧ್ಯಕ್ಷ ಈರಣ್ಣ ಜಡಿ ಮೊದಲಾದವರಿದ್ದರು.

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ