ಜನಮನ್ನಣೆ ಮತಗಳನ್ನಾಗಿಸಿ: ಗುಂಡೂರಾವ್‌

Team Udayavani, Aug 14, 2018, 10:15 AM IST

ಕಲಬುರಗಿ: ಮಾಸಾಂತ್ಯಕ್ಕೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇರುವ ಜನಮನ್ನಣೆಯನ್ನು
ಮತಗಳನ್ನಾಗಿ ಪರಿವರ್ತಿಸಲು ಶ್ರಮಿಸಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಲಬುರಗಿಗೆ ಪ್ರಥಮ ಸಲ ಆಗಮಿಸಿದ್ದ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡ ಬಳಿಕ ಕಾಂಗ್ರೆಸ್‌ ಪಕ್ಷದ ಕಚೇರಿ ಆವರಣದಲ್ಲಿ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರೆಲ್ಲ ಟೊಂಕಕಟ್ಟಿ ನಿಲ್ಲಬೇಕು. ರಣತಂತ್ರಗಳನ್ನು ಸ್ಥಳೀಯವಾಗಿ ರೂಪಿಸುವ ಮೂಲಕ ಎಲ್ಲ ಸ್ಥಾನಗಳನ್ನು ಗೆಲ್ಲಬೇಕು. ಪ್ರತಿ ಚುನಾವಣೆಯೂ ಸವಾಲಿನದ್ದೆ ಆಗಿರುತ್ತದೆ. ಹೀಗಾಗಿ ಈ ಸಲವೂ ಸವಾಲು ಎಂದು ಸ್ವೀಕರಿಸಿ ಎಂದರು.

ಜೇವರ್ಗಿ ಶಾಸಕ ಡಾ| ಅಜಯಸಿಂಗ್‌, ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್‌ ಹಾಗೂ ಇತರರು ಮಾತನಾಡಿ, ದಿನೇಶ ಗುಂಡೂರಾವ್‌ ಕಿರಿಯ ವಯಸ್ಸಿನಲ್ಲಿಯೇ ಕೆಪಿಸಿಸಿ ಅಧ್ಯಕ್ಷರಾದ ಮೊದಲಿಗರು. ಸಮರ್ಥ ವ್ಯಕ್ತಿ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆಗಳ ಹಾಗೂ ಲೋಕಸಭೆ ಚುನಾವಣೆ ಎದುರಿಸಿ ಗೆಲುವಿನ ಪತಾಕೆ ಹಾರಿಸುವುದು ಖಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. 

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಸಂವಿಧಾನ ಬದಲಿ ಮಾಡಲು ಹೊರಟಿರುವರಿಗೆ ತಕ್ಕ ಪಾಠ ಕಲಿಸಬೇಕು. ನಮ್ಮ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾಕತ್ತು ಮತ್ತು ರೈತರ ಬಗ್ಗೆ ಕಾಳಜಿಯಿದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ
ಸಾಲ ಸಂಪೂರ್ಣ ಮನ್ನಾ ಮಾಡಲಿ ಎಂದು ಸವಾಲು ಹಾಕಿದರು.

ಎಐಸಿಸಿ ಕಾರ್ಯದರ್ಶಿ ಸಾಕೆ ಶೈಲಜನಾಥ, ವಸಂತಕುಮಾರ, ಕೆಪಿಸಿಸಿ ಉಪಾಧ್ಯಕ್ಷ ಐ.ಜಿ.ಸನದಿ, ಶಾಸಕಿ ಖನೀಜ್‌ ಫಾತೀಮಾ, ಮೇಯರ್‌ ಶರಣಕುಮಾರ ಮೋದಿ, ಶಾಸಕರಾದ ಡಾ| ಉಮೇಶ ಜಾಧವ, ಎಂ.ವೈ. ಪಾಟೀಲ, ಖನಿಜಾ ಫಾತಿಮಾ ಖಮರುಲ್‌ ಇಸ್ಲಾಂ, ಮುಖಂಡರಾದ ವಿಜಯಕುಮಾರ ಜಿ.ರಾಮಕೃಷ್ಣ, ತಿಪ್ಪಣ್ಣಪ್ಪ ಕಮಕನೂರ, ನಾರಾಯಣರಾವ್‌ ಕಾಳೆ, ಮಹಾಂತಪ್ಪ ಸಂಗಾವಿ, ಮಹಿಳಾ ಘಟಕ ಅಧ್ಯಕ್ಷೆ ಲತಾ ರವಿ ರಾಠೊಡ, ಸಂತೋಷ ಪಾಟೀಲ ದಣ್ಣೂರ ಹಾಜರಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಸ್ವಾಗತಿಸಿದರು. ಕೆಪಿಸಿಸಿ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ ನಿರೂಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ